ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸಂಭ್ರಮದ ಈದ್-ಮಿಲಾದ್ ಆಚರಣೆ

Last Updated 6 ಫೆಬ್ರುವರಿ 2012, 7:25 IST
ಅಕ್ಷರ ಗಾತ್ರ

ಗದಗ: ಸಾವಿರಾರು ವರ್ಷಗಳ ನಂತರವೂ ಕುರಾನಿನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದ ಶಾಂತಿಗಾಗಿ ಇಂತಹ ಮಹಾನ್ ಸಂದೇಶ ಸಾರಿದ ಪೈಗಂಬರರ ಸ್ಮರಣೆ ಅಗತ್ಯವಾಗಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ಈದ್-ಮಿಲಾದ್ ಅಂಗವಾಗಿ ನಗರದಲ್ಲಿ ಭಾನುವಾರ ಗದಗ-ಬೆಟಗೇರಿ ಈದ್ ಮಿಲಾದ್ ಸಮಿತಿ ವತಿಯಿಂದ ಆಯೋಜಿಸಿದ್ದ ಹಜರತ್ ಮಹಮ್ಮದ್ ಪೈಗಂಬರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಜಗತ್ತಿನ ದೊಡ್ಡ ಸಮುದಾಯಗಳಲ್ಲಿ ಒಂದಾದ ಇಸ್ಲಾಂನಲ್ಲಿ ಎಲ್ಲರೂ ಒಂದು , ದೇವರು ಒಬ್ಬನೇ ಎಂದು ಸಾರಿರುವ ಕುರಾನಿನ ಸಂದೇಶ ಶ್ರೇಷ್ಠ.  ಬಡವರು-ಶ್ರೀಮಂತರು ಯಾರೇ ಇರಲಿ ಎಲ್ಲರೂ ದೇವರ ಮೊರೆ ಹೋಗುತ್ತಾರೆ. ಈ ಮೂಲಕ ದೇಶದಲ್ಲಿ ಶಾಂತಿ ನೆಲೆಸಿದೆ. ಇದಕ್ಕೆ ಕುರಾನಿನಂತಹ ಧರ್ಮಗ್ರಂಥಗಳ ಕೊಡುಗೆ ಅಪಾರ~ ಎಂದು ಅವರು ಹೇಳಿದರು.

`ಜಗತ್ತಿನಲ್ಲಿ ಸಾಮೂಹಿಕ ಪ್ರಾರ್ಥನೆ, ಧ್ಯಾನಕ್ಕೆ ಹೆಚ್ಚಿನ ಶಕ್ತಿ ಇದೆ. ಅಂತಹ ಪ್ರಾರ್ಥನೆ, ದಾನ ಮೊದಲಾದವುಗಳು ಈ ಧರ್ಮದ ಶ್ರೇಷ್ಠ ತತ್ವಗಳು. ಎಲ್ಲ ಧರ್ಮದಿಂದಲೂ ಉತ್ತಮ ಅಂಶಗಳನ್ನು ಸ್ವೀಕರಿಸಿದಾಗ ಉತ್ತಮ ಬದುಕು ಸಾಧ್ಯವಾಗುತ್ತದೆ~ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, `ಪೈಗಂಬರರು ಸಮಸ್ತ ಮಾನವಕೋಟಿಗೆ ಸಂದೇಶ ಸಾರಿದ ಪುಣ್ಯಪುರುಷರಲ್ಲಿ ಅಗ್ರಗಣ್ಯರು~ ಎಂದರು. ದೇವರೊಬ್ಬನೇ ನಾಮ ಹಲವು ಎಂಬಂತೆ ಎಲ್ಲ ಧರ್ಮದ ಸಾರ ಒಂದೇ. ಸ್ವಧರ್ಮ ನಿಷ್ಠೆ, ಪರಧರ್ಮ  ಸಹಿಷ್ಣುತೆಯಿಂದ ಬಾಳಬೇಕು ಎಂದರು. ಗದುಗಿನಲ್ಲಿ ಎಲ್ಲ ಸಮುದಾಯದವರೂ ಸಹೋದರತ್ವದಿಂದ ಬಾಳುತ್ತಿದ್ದು, ಇದು ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.

ಮಾಜಿ ಸಚಿವ ಡಿ.ಆರ್. ಪಾಟೀಲ ಮಾತನಾಡಿ, ಎಲ್ಲರನ್ನೂ ಪ್ರೀತಿಸಿ, ಯಾರನ್ನೂ ದ್ವೇಷಿಸದಿರಿ. ಸಾಧ್ಯವಾದರೆ ಸಹಾಯ ಮಾಡಿ ಎನ್ನುವುದು ಮಹಾತ್ಮರ ಸಂದೇಶ. ಪೈಗಂಬರರು, ರಾಮಕೃಷ್ಣ ಪರಮಹಂಸರು, ಏಸುಕ್ರಿಸ್ತ... ಈ ಎಲ್ಲರೂ ಒಂದೇ ಗುರಿಯಡೆಗೆ ನಡೆದವರು. ಅವರ ತತ್ವಗಳನ್ನು ಅಳವಡಿಸಿಕೊಂಡು ಅಣ್ಣ-ತಮ್ಮಂದಿರಂತೆ ಬದುಕಬೇಕು. ಗದಗ ಕೋಮು ಸೌಹಾರ್ದತೆಗೆ ದೇಶದಲ್ಲೇ ಮಾದರಿಯಾಗಿದೆ. ಇನ್ನು ಮುಂದೆಯೂ ಇದೇ ಭಾಂದವ್ಯ ಮುಂದುವರಿಯಲಿ ಎಂದು ಆಶಿಸಿದರು.

ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಮಾತನಾಡಿ, `ನಿಮ್ಮ ಮನೆ-ಮನದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಇರಲಿ. ಮಕ್ಕಳಿಗೆ ಒಳ್ಳೆಯ ಶಿಕ್ಷಣ-ಸಂಸ್ಕಾರ ನೀಡಿ~ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹಜರತ್ ಮೌಲಾನ ಮುಪ್ತಿ ನಿಜಾಮುದ್ದೀನ್ ಸಾಬ್ ಕಾಸ್ಮಿ ಆಶೀರ್ವಚನ ನೀಡಿದರು.

ಅಂಜುಮಾನ್ ಇಸ್ಲಾಂ ಸಂಸ್ಥೆ ಮಾಜಿ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ ಅಧ್ಯಕ್ಷತೆ ವಹಿಸಿದ್ದರು. ಈದ್ ಮಿಲಾದ್ ಸಮಿತಿ ಅಧ್ಯಕ್ಷ ಎಂ.ಐ. ನವಲಗುಂದ, ಅಂಜುಮಾನ್ ಸಂಸ್ಥೆ ಅಧ್ಯಕ್ಷ ಸಾಧಿಕ್ ನರಗುಂದ, ವಕ್ಫ್ ಬೋರ್ಡ್ ಸಿರಾಜ್ ಬಳ್ಳಾರಿ, ಜಿ.ಎಂ. ದಂಡಿನ, ಡಿವೈಎಸ್‌ಪಿ ಸುರೇಶ ಮಸೂತಿ, ಮಹ್ಮದ್ ಶಫಿ ಕುದರಿ, ಭರತ್ ಇರಾಳ, ರಾಜೇಖಾನ್ ಗುಲಾಬ್‌ಖಾನ್ ಪಠಾಣ, ವಿಜಯ್ ಎಸ್. ಮುಳಗುಂದ, ಫಾರೂಕ್ ಹುಬ್ಬಳ್ಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕರಿಗೌಡ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗದುಗಿನಲ್ಲಿ ಮೆರವಣಿಗೆ
ಈದ್ ಮಿಲಾದ್ ಅಂಗವಾಗಿ ಭಾನುವಾರ ನಗರದಲ್ಲಿ ಬೈಕ್ ರ‌್ಯಾಲಿ ಹಾಗೂ ಮೆರವಣಿಗೆ ನಡೆಯಿತು. ಗದಗ ಜಿಲ್ಲಾ ಯುವ ಅಲ್ಪಸಂಖ್ಯಾತರ ಸೇವಾ ಸಂಘದ ಸದಸ್ಯರು ಬೈಕ್ ರ‌್ಯಾಲಿ ಕೈಗೊಂಡರು. ನೂರಾರು ಮುಸ್ಲಿಮರು ನಗರದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡು ಪೈಗಂಬರರನ್ನು ಸ್ಮರಿಸಿದರು.

ಸಂಭ್ರಮದ ಈದ್ ಮಿಲಾದ್ ಮೆರವಣಿಗೆ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಭಾನುವಾರ ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಸಾರ್ವಜನಿಕ ಮೆರವಣಿಗೆ ಸಂಘಟಿಸಲಾಗಿತ್ತು. ಇಲ್ಲಿನ ದೂದಪೀರಾಂ ದರ್ಗಾದಿಂದ ಆರಂಭವಾದ ಮೆರವಣಿಗೆ ಬಜಾರ, ಪಾದಗಟ್ಟಿ, ಪುರಸಭೆ, ಹೊಸ ಬಸ್‌ನಿಲ್ದಾಣದ ಎದುರಿಗೆ ಸಂಚರಿಸಿತು. ಸಾವಿರಾರು ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಕೆಲ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ದಾರಿ ಮಧ್ಯ ಕಲ್ಲಂಗಡಿ ಹಣ್ಣು, ಬಾಳೆಹಣ್ಣು, ಶರಬತ್ ಹಾಗೂ ಸಿಹಿ ವಿತರಿಸಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು. ಪುಟ್ಟ ಮಕ್ಕಳು ಹೊಸ ಬಟ್ಟೆ ಹಾಕಿಕೊಂಡು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

ದೇಸಾಯಿಬಣದಲ್ಲಿ ಈದ್‌ಮಿಲಾದ್: ಪಟ್ಟಣದ ದೇಸಾಯಿಬಣದ ಮಜೀದ್‌ಗಲ್ಲಿಯಲ್ಲಿ  ಗುಲಶನ್-ಎ-ಹಿಂದ್ ಶೈಕ್ಷಣಿಕ ಹಾಗೂ ವಿವಿಧೋದ್ಧೇಶಗಳ ಸಮಿತಿ ಸದಸ್ಯರು ಸಡಗರ ಸಂಭ್ರಮದಿಂದ ಈದ್‌ಮಿಲಾದ್ ಆಚರಿಸಿದರು.
ಈ ಸಂದರ್ಭದಲ್ಲಿ `ಫಿರನಿ~ ಎಂಬ ಸಿಹಿ ವಸ್ತುವನ್ನು ವಿತರಿಸಿದರು.

ಸಮಿತಿ ಅಧ್ಯಕ್ಷ ಗೌಸ್‌ಮೋದಿನ್ ಜಮಖಂಡಿ, ಉಪಾಧ್ಯಕ್ಷ ಇಬ್ರಾಹಿಂಸಾಬ್ ನಾಲಬಂದ್, ಕಾರ್ಯದರ್ಶಿ ಎಸ್.ಸುಲೇಮಾನ್ ಮುಳಗುಂದ, ಖಜಾಂಚಿ ಮೆಹಬೂಬ್‌ಸಾಬ್ ಪೀರ್ಜಾದೆ, ಮಹಮ್ಮದ್‌ರಫಿ ಮುಳಗುಂದ, ಮಹಮ್ಮದ್‌ರಫಿ ತಾಡಪತ್ರಿ, ಖಾಜಾಪೀರ ನಾಲಬಂದ್, ಸಜನ್‌ಸಾಬ್ ಕನಕವಾಡ, ಭಾಷಾ ತಂಬಾಕ, ಶೌಕತ್‌ಅಲಿ ಶಿರಹಟ್ಟಿ, ಸುಲೇಮಾನ್ ತಂಬಾಕ ಹಾಗೂ ಮತ್ತಿತರರು ಹಾಜರಿದ್ದರು.

ಶ್ರದ್ಧೆಯಿಂದ ಈದ್ ಮಿಲಾದ್ ಆಚರಣೆ
ಶಿರಹಟ್ಟಿ: 
ಈದ್ ಮಿಲಾದ್ ಹಬ್ಬವನ್ನು ಭಾನುವಾರ ಪಟ್ಟಣದ ಮುಸ್ಲಿಂ ಬಾಂಧವರು ಭಕ್ತಿ ಶ್ರದ್ಧೆಯಿಂದ ಆಚರಿಸಿದರು.

ಮೆಹಬೂಬಸುಭಾನಿ ದರ್ಗಾದಿಂದ ಆರಂಭಗೊಂಡು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿದ ಮೆರವಣಿಗೆಯು ನಂತರ ಅದೇ ಸ್ಥಳದಲ್ಲಿ ಸಮಾರೋಪಗೊಂಡಿತು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಚ್.ಡಿ. ಮಾಗಡಿ ಮಾತನಾಡಿ, ಪ್ರವಾದಿ ಪೈಗಂಬರರು ಪ್ರಪಂಚಕ್ಕೆ ನೀಡಿದ ಶಾಂತಿ ಸಂದೇಶಗಳು ನಮಗೆ ಅನುಕರಣೀಯ ಎಂದು ಹೇಳಿದರು.

ಸಿ.ಕೆ. ಮುಳಗುಂದ, ಎ.ಎ. ಪಠಾಣ, ಅಬ್ದುಲ್ ಲತೀಫ್ ಕತೀಬ, ಗೌಸಪೀರ್ ಮುಳಗುಂದ, ಇಸಾಕ್ ಆದ್ರಳ್ಳಿ, ಇಲಿಯಾಸ್ ಕುಬಸದ, ಪಟ್ಟಣ ಪಂಚಾಯಿತಿ ಸದಸ್ಯರಾದ ಬಾಬುಸಾಬ ತಹಶೀಲ್ದಾರ್, ಶೌಕತ್‌ಲಿ ಬುವಾಜಿ, ಮಾಬುಸಾಬ ಕುಬಸದ, ಅಮ್ಜದ್‌ಖಾನ್ ಮಾಗಡಿ, ಬಕ್ಷಿ ಮುಳಗುಂದ, ರಫೀಕ್ ಆದ್ರಳ್ಳಿ, ಹಾಶಿಮಶಾ ಮಕಾನದಾರ, ಬುಡನಶ್ಯಾ ಮಕಾನದಾರ, ಎ.ಎ. ಮಕಾನದಾರ, ಅಬ್ದುಲ್ ಗಫಾರ ರಜಾಕಿ, ಮುನ್ನಾ ಅತ್ತಾರ ಮತ್ತಿತರರು ಉಪಸ್ಥಿತರಿದ್ದರು.   

ನರಗುಂದದಲ್ಲಿ ಸಂಭ್ರಮದ ಈದ್ ಮಿಲಾದ್
ನರಗುಂದ:
ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವರು  ಈದ್ ಮಿಲಾದ್ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಪತೇಹ ಮಸೀದೆಯಿಂದ ಶಾಹಿ ಇಮಾಮ್ ಮೌಲಾನಾ ಆಝಂರವರ ನೇತೃತ್ವದಲ್ಲಿ ಹೊರಟ  ಬೃಹತ್ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು ಹಾಗೂ ಅರ್ಬಾನ, ಹೊರಕೇರಿ ಸೋಮಾಪುರ ಮಸೀದಿಗಳಿಂದಲೂ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT