ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲೊಂದು ಗ್ರಾಮ ಭಾರತ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಇನ್ನೇನು ಕರ್ನಾಟಕ ಬಾಲಕರ ತಂಡ ಗೆಲುವಿನ ನಗೆ ಬೀರಿತು ಅನ್ನುವಷ್ಟರಲ್ಲಿ ಭೂಗರ್ಭ ಮಧ್ಯೆದಲ್ಲಿ ಸಿಲುಕಿದ ಅನುಭವ !

ಕೊನೆಗೆ 5-4 ಗೋಲಿನಿಂದ ಜಯವನ್ನು ಒಲಿಸಿಕೊಳ್ಳುವಲ್ಲಿ ಪಶ್ಚಿಮ ಬಂಗಾಳ ತಂಡ ಯಶಸ್ವಿಯಾಯಿತು. ಆಗ ಎರಡು ತಂಡಗಳ ಅದ್ಭುತ ಪ್ರದರ್ಶನಕ್ಕೆ ಕ್ರೀಡಾಂಗಣದ ಸುತ್ತಲು ಚಪ್ಪಾಳೆ ತಟ್ಟಿ, ಭೇಷ್ ಅಂದದ್ದು ಇಡೀ `ಗ್ರಾಮ ಭಾರತ~.

ತುಮಕೂರಿನಲ್ಲಿ ಈಚೆಗೆ ರಾಷ್ಟ್ರೀಯ ಮಹಿಳಾ ಪೈಕಾ ಕ್ರೀಡಾಕೂಟ ಯಶಸ್ವಿಯಾಗಿ ನಡೆದ ಬೆನ್ನಲ್ಲೆ, ಜಿಲ್ಲೆಯಲ್ಲಿ ಜ.5ರಿಂದ 8ರ ವರೆಗೆ ನಡೆದ 4ನೇ ರಾಷ್ಟ್ರೀಯ ಪೈಕಾ ಗ್ರಾಮೀಣ ಕ್ರೀಡಾಕೂಟ ಕ್ರೀಡಾಪ್ರೇಮಿಗಳಿಗೆ ರೋಚಕತೆ ನೀಡಿತು. 16 ವರ್ಷದೊಳಗಿನ ಬಾಲಕರ ಕ್ರೀಡಾಕೂಟದಲ್ಲಿ ದೇಶದ 23 ರಾಜ್ಯಗಳಿಂದ 950 ಗ್ರಾಮ ಪ್ರತಿಭೆಗಳು ಅಲ್ಲಿ ಸೇರಿದ್ದರು.

ರಾಜ್ಯದ ಕ್ರೀಡಾಪಟುಗಳು ಗಮನ ಸೆಳೆದದ್ದು ಜುಡೋದಲ್ಲಿ. ಬಾಲಕಿಯರ ವಿಭಾಗದಲ್ಲಿ ಶುಭಂ ಲೋಹರ್, ಪೂಜಾ ಗೌಡರ, ಬೆಸ್ತೋ ರಾಣಿ, ಮಲಪ್ರಭಾ ಜಾದವ್, ಸಂಗೀತಾ ಹಾಗೂ ಬಾಲಕರ ವಿಭಾಗದಲ್ಲಿ ಲಿಖಿತ್, ಅವಿನಾಶ್, ಜಾನ್ಸನ್, ಎ.ಎನ್.ಅಮರ್ ಚಿನ್ನದ ನಗೆ ಬೀರಿದರು.

ವೇಟ್ ಲಿಫ್ಟಿಂಗ್‌ನಲ್ಲಿ ಕರ್ನಾಟಕದ ಬಾಲಕರಿಂದ ಅಷ್ಟಾಗಿ ಪ್ರದರ್ಶನ ಮೂಡಿಬರಲಿಲ್ಲ. ಈ ನಡುವೆ  ಸುಮನ್ ಅವರು (69 ಕೆಜಿ) 177 ಕೆಜಿ ತೂಕ ಎತ್ತುವ ಮೂಲಕ ಕಂಚಿನ ಪದಕ ಪಡೆದದ್ದೇ ಸಮಾಧಾನ ಪಡುವಂತಾಯಿತು.

 ಬಾಲಕರ ವಿಭಾಗದಲ್ಲಿ ಆಂಧ್ರಪ್ರದೇಶದ ಸದ್ದಾಂ ಹುಸೇನ್ (50 ಕೆ.ಜಿ) 65, 70, 85, 90 ಒಟ್ಟು 155 ಕೆ.ಜಿ. ಭಾರ ಎತ್ತುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರು. ಆರಂಭದಲ್ಲಿ ಉತ್ತಮ ಪೈಪೊಟಿ ನೀಡಿದ ಮಹಾರಾಷ್ಟ್ರದ ಯೋಗೀಶ್ ಶಿಂಧೆ ಕೊನೆಯಲ್ಲಿ ಆತುರಕ್ಕೆ ಒಳಗಾದಂತೆ ಕಂಡುಬಂದರು. ಇದರ ಪರಿಣಾಮ 2ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಛತ್ತೀಸ್‌ಘಡದ ಅನಿಕುಮಾರ್ 67, 70, 80ರ ಮೂಲಕ 3ನೇ ಸ್ಥಾನ ಒಲಿಸಿಕೊಂಡರು. ಕರ್ನಾಟಕದ ರೋಶನ್ ನಾಯಕ್ ಅವರು 10ರಲ್ಲಿ ಸ್ಥಾನ ಉಳಿಸಿಕೊಂಡದ್ದೇ ಸಮಾಧಾನ ಪಡುವಂತಾಯಿತು.

ಬಾಲಕಿಯರ ವಿಭಾಗದಲ್ಲಿ (44 ಕೆ.ಜಿ) ನವದೆಹಲಿಯ ರಾಣಿ ಮೂಲಕ ಪ್ರಥಮ ಸ್ಥಾನ ಪಡೆದರು. ಮಹಾರಾಷ್ಟ್ರದ ದೀಪಾಲಿ ಗುರುಸಾಲೆ ದ್ವಿತೀಯ ಸ್ಥಾನ, ಆಂಧ್ರಪ್ರದೇಶದ ಎಚ್.ಕೋಟೇಶ್ವರಿ ತೃತೀಯ ಸ್ಥಾನ ಪಡೆದರು. ಕರ್ನಾಟಕದ ಪೂಜಾ ಸಂತಜಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಆರಂಭದ ಫುಟ್ಬಾಲ್ ಪಂದ್ಯದಲ್ಲಿ ಹರಿಯಾಣ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಶುಭಾರಂಭ ಮಾಡಿತು.   ಆತಿಥೇಯ ತಂಡದವರ ಆಟಕ್ಕೆ ಎದುರಾಳಿ ತಂಡದವರು ಚಳಿಯಿಲ್ಲದಿದ್ದರೂ ನಡುಗಿದರು. ಚುರುಕಿನ ಆಟವಾಡಿದ ಕರ್ನಾಟಕ ತಂಡದ ಇಮ್ರಾನ್ (13ನೇ ನಿಮಿಷದಲ್ಲಿ), ಮಣಿ (42ನೇ ನಿಮಿಷ), ಸಂತೋಷ (48ನೇ ನಿಮಿಷ) ಆಕರ್ಷಕ ಗೋಲು ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಎರಡನೇ ಪಂದ್ಯದಲ್ಲಿ ನವದೆಹಲಿ ವಿರುದ್ಧ 1-0 ಗೋಲಿನಿಂದ ಗೆಲುವು ಸಾಧಿಸಿತು. ಗೋಲಿಗಾಗಿ ಹಲವು ಬಾರಿ ಎರಡು ತಂಡಗಳು ವಿಫಲ ಯತ್ನ ನಡೆಸಿದವು. ಇದರ ನಡುವೆ ಕರ್ನಾಟಕ ತಂಡದ ಆಂಥೋನಿ `ಕಾಲ್ಚಳಕ~ ಗೆಲುವು ತಂದುಕೊಟ್ಟಿತು.

ಮೂರನೇ ಪಂದ್ಯದಲ್ಲಿ ಗುಜರಾತ್ ತಂಡವನ್ನು 7-0 ಭಾರಿ ಅಂತರದ ಗೋಲಿನಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್‌ನಲ್ಲಿ ಆಂಧ್ರಪ್ರದೇಶವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಆದರೆ ಫೈನಲ್ ಪಂದ್ಯದಲ್ಲಿ ಪಶ್ಚಿಮಬಂಗಾಳದ ಎದುರು ಹಗುರಾಗಿ ಪರಿಗಣಿಸಲಾಗಿತ್ತು.

ಪೂರ್ಣಾವಧಿಯಲ್ಲಿ ಸಮ ಗೋಲುಗಳನ್ನು ಹೊಂದಿದ್ದ ಕರ್ನಾಟಕ ತಂಡ ಪೆನಾಲ್ಟಿಗೆ ಬೆಲೆ ತೆರಬೇಕಾಯಿತು. ಮೂರುದಿನಗಳ ಕಾಲ ನಡೆದ ಕ್ರೀಡಾಕೂಟ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಹಲವು ಅವಕಾಶಗಳನ್ನು ಕಲ್ಪಿಸಿತು.

ಕ್ರೀಡಾ ಪಥ ಸಂಚಲನದಲ್ಲಿ ಸಿಕ್ಕಿಂ ತಂಡ ಪ್ರಥಮ, ಕರ್ನಾಟಕ ದ್ವಿತೀಯ ಸ್ಥಾನ ಹಾಗೂ ಜೂಡೋದಲ್ಲಿ ಸಮಗ್ರ ಪ್ರಶಸ್ತಿ ಪಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT