ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಅಂಗಳದಲ್ಲಿ ಪರಮೇಶ್ವರ್ ಹೆಜ್ಜೆ

ಕೊರಟಗೆರೆ ಕ್ಷೇತ್ರ ವಿಶೇಷ
Last Updated 3 ಏಪ್ರಿಲ್ 2013, 9:55 IST
ಅಕ್ಷರ ಗಾತ್ರ

ತುಮಕೂರು: ಇತರ ವಿಧಾನಸಭಾ ಕ್ಷೇತ್ರಗಳಿಗಿಂತ ಕೊರಟಗೆರೆ ಮೀಸಲು ಕ್ಷೇತ್ರ ಜಿಲ್ಲೆಯಷ್ಟೇ ಅಲ್ಲ, ರಾಜ್ಯ, ರಾಷ್ಟ್ರ ಮಟ್ಟದಲ್ಲೇ ಗಮನ ಸೆಳೆದಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಪ್ರತಿಷ್ಠಿತರ ಕ್ಷೇತ್ರಗಳಲ್ಲಿ ಒಂದಾಗಿದೆ.

2004ರವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಕೊರಟಗೆರೆ, ಕ್ಷೇತ್ರಗಳ ಪುನರ್ ವಿಂಗಡಣೆ ನಂತರ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾಯಿತು.
ಮಧುಗಿರಿ ತಾಲ್ಲೂಕನ್ನು ಪ್ರತಿನಿಧಿಸುತ್ತಿದ್ದ ಡಾ.ಜಿ.ಪರಮೇಶ್ವರ್, ಆ ಕ್ಷೇತ್ರದ ಮೀಸಲಾತಿ ತೆರವಾಗಿ ಸಾಮಾನ್ಯವಾದ ನಂತರ ಮೀಸಲು ಕ್ಷೇತ್ರವಾದ ಕೊರಟಗೆರೆ ತಾಲ್ಲೂಕನ್ನು ಆಯ್ಕೆ ಮಾಡಿಕೊಂಡರು.

2008ರಲ್ಲಿ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಆಯ್ಕೆಯಾದರು. ನಂತರದ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದರು. ಮತ್ತೊಮ್ಮೆ ಕೆಪಿಸಿಸಿ ಅಧ್ಯಕ್ಷರೇ ಸ್ಪರ್ಧಿಸುತ್ತಿರುವುದರಿಂದ ಪ್ರತಿಷ್ಠಿತರ ಕಣವಾಗಿ ಮಾರ್ಪಟ್ಟಿದೆ.

ಹಿಂದಿನ ಐದು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಬಾರಿ, ಮೂರು ಬಾರಿ ಜನತಾ ದಳ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಕ್ಷೇತ್ರದಲ್ಲಿ ಮೊದಲಿನಿಂದಲೂ ಜೆಡಿಎಸ್- ಕಾಂಗ್ರೆಸ್ ನಡುವೆ ಪೈಪೋಟಿ ಕಂಡುಬಂದಿದೆ. ಜೆಡಿಎಸ್‌ನ ಸಿ.ಚೆನ್ನಿಗಪ್ಪ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು.

1989ರಲ್ಲಿ ಜನತಾ ದಳದ ವೀರಣ್ಣ ವಿರುದ್ಧ ಕಾಂಗ್ರೆಸ್‌ನ ವೀರಭದ್ರಯ್ಯ ಜಯಗಳಿಸಿದ್ದರು. ಅದು ಬಿಟ್ಟರೆ 1994ರಿಂದ 2004ರವರೆಗೆ ಸತತವಾಗಿ ಮೂರು ಬಾರಿ ಚೆನ್ನಿಗಪ್ಪ ಕ್ಷೇತ್ರ ಪ್ರತಿನಿಧಿಸಿದ್ದರು. 1994ರಲ್ಲಿ    ಕಾಂಗ್ರೆಸ್‌ನ ವೆಂಕಟಾಚಲಯ್ಯ, 1999ರಲ್ಲಿ ಕಾಂಗ್ರೆಸ್‌ನ ವೀರಭದ್ರಯ್ಯ, 2004ರಲ್ಲಿ ಜೆಡಿಯುನ ವೀರಣ್ಣ ಅವರನ್ನು ಚೆನ್ನಿಗಪ್ಪ ಸೋಲಿಸಿದ್ದರು. 2008ರಲ್ಲಿ ಜೆಡಿಎಸ್‌ನ ಚಂದ್ರಯ್ಯ ವಿರುದ್ಧ ಡಾ.ಜಿ.ಪರಮೇಶ್ವರ್ ಜಯಗಳಿಸಿದರು.

ಮತಗಳ ಅಂತರ: 2008ರ ಚುನಾವಣೆ ಹೊರತುಪಡಿಸಿದರೆ ಹಿಂದಿನ ನಾಲ್ಕು ಚುನಾವಣೆಯಲ್ಲಿ ಯಾರೊಬ್ಬರೂ 10 ಸಾವಿರ ಮತಗಳ ಅಂತರದಿಂದ ಜಯಗಳಿಸಿಲ್ಲ. ಕಳೆದ ಬಾರಿ ಪರಮೇಶ್ವರ್ 11 ಸಾವಿರ ಮತಗಳ ಅಂತರದಿಂದ ಆಯ್ಕೆ ಆಗಿದ್ದರು. 1999ರಲ್ಲಿ ಚೆನ್ನಿಗಪ್ಪ ಕೇವಲ 706 ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಪ್ರಸ್ತುತ ಸ್ಥಿತಿ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತೊಮ್ಮೆ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರ ಬದಲಿಸಿ ಸ್ಪರ್ಧಿಸಿದ ಮೊದಲ ಪ್ರಯತ್ನದಲ್ಲೇ ಗೆಲುವು ಕಂಡಿದ್ದರು. ಈಗ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಜಯಗಳಿಸಿದರೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ  ಮುಖ್ಯಮಂತ್ರಿ ಸ್ಥಾನದ ಅವಕಾಶ ಒದಗಿಬರುವ ಸಾಧ್ಯತೆಗಳಿವೆ. ಹಾಗಾಗಿ ಆರಿಸಿ ಬರುವುದು ಪರಮೇಶ್ವರ್ ಅವರಿಗೆ ಪ್ರತಿಷ್ಠೆಯಾಗಿದೆ.

ಜೆಡಿಎಸ್‌ನಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಸುಧಾಕರ್‌ಲಾಲ್ ಅವರಿಗೆ ಟಿಕೆಟ್ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ. ಆದರೆ ಈ ಭರವಸೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಬದಲಾದ ಕಾಲಘಟ್ಟ, ರಾಜಕೀಯ ವಿದ್ಯಮಾನ ಗಮನಿಸಿದರೆ ಅಧಿಕೃತವಾಗಿ ಪಟ್ಟಿಯಲ್ಲಿ ಹೆಸರು ಪ್ರಕಟವಾಗುವವರೆಗೂ ಏನನ್ನೂ ಹೇಳುವುದು ಕಷ್ಟಕರ. ಆದರೆ ಇದೆಲ್ಲ ಚಿಂತನೆ ಬಿಟ್ಟಿರುವ ಸುಧಾಕರ್‌ಲಾಲ್ ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ.

ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದು ಸೋತಿದ್ದ ಚಂದ್ರಯ್ಯ ಈಗ ಪಕ್ಷದಲ್ಲಿ ಉಳಿದಿಲ್ಲ. ಜೆಡಿಎಸ್ ತೊರೆದ ನಂತರ ಸಂಸದ ಜಿ.ಎಸ್.ಬಸವರಾಜು ಜತೆ ಬಿಜೆಪಿ ಸೇರಿದ್ದರು. ಈಗ ಕೆಜೆಪಿ ಜತೆಗೆ ಗುರುತಿಸಿಕೊಂಡಿದ್ದು, ಆ ಪಕ್ಷದಿಂದಲೇ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಬಿಎಸ್‌ಪಿಯಿಂದ ಬುಲ್ಲಾ ಸುಬ್ಬರಾವ್ ಸ್ಪರ್ಧೆಗೆ ಮುಂದಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT