ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಮತ್ತೆ ಜಿ.ಪಂ. ಅಧ್ಯಕ್ಷ ಪಟ್ಟ

ಬಿಜೆಪಿ ಸದಸ್ಯರ ಸಾಂಗತ್ಯ: ಕಾಂಗ್ರೆಸ್ ಗೈರು
Last Updated 7 ಸೆಪ್ಟೆಂಬರ್ 2013, 8:14 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಬಹುಜನರ ಲೆಕ್ಕಾಚಾರವೇ ನಿಜವಾಗಿದ್ದು, ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಯ ಉಳಿದ 9 ತಿಂಗಳಿಗೆ ಹೊಸ ಅಧ್ಯಕ್ಷರಾಗಿ ಜೆಡಿಎಸ್‌ನ ತೂಪಲ್ಲಿ ನಾರಾಯಣಸ್ವಾಮಿಯವರೇ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅದೇ ಪಕ್ಷದ ಅಲುವೇಲಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. ಜೆಡಿಎಸ್ ಮತ್ತೆ ಅಧಿಕಾರ ಹಿಡಿದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಹಿನ್ನಡೆ ಕಂಡಿವೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸದಸ್ಯರಾದ ಯಶೋದಮ್ಮ, ಯಲ್ಲಮ್ಮ, ಎ.ರಾಮಸ್ವಾಮಿ ರೆಡ್ಡಿ, ಸಿಮೋಲ್, ಯಶೋದಮ್ಮ, ಮುತ್ಯಾಲಮ್ಮ, ನಾರಾಯಣಮ್ಮ ಮತ್ತು ಎಂ.ಎಸ್.ಆನಂದ್ ಹಾಗೂ ವರ್ತೂರು ಬಣ ತೊರೆದು ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದ ಪಕ್ಷೇತರ ಸದಸ್ಯ ಜಿ.ಎಸ್.ಅಮರನಾಥ್ ಸಹ ಪಾಲ್ಗೊಂಡು ಗಮನ ಸೆಳೆದರು.

ಜೆಡಿಎಸ್‌ನ 13, ಬಿಜೆಪಿಯ 6 ಮತ್ತು ಇಬ್ಬರು ಪಕ್ಷೇತರ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಅತಂತ್ರ: ಮಾಲೂರು ಸದಸ್ಯರಾದ ಎ.ರಾಮಸ್ವಾಮಿರೆಡ್ಡಿ, ಯಲ್ಲಮ್ಮ, ಕೆ.ಯಶೋಧ ಹಾಗೂ ಬಂಗಾರಪೇಟೆ ತಾಲ್ಲೂಕಿನ ಮುತ್ಯಾಲಮ್ಮ, ನಾರಾಯಣಮ್ಮ ಜೆಡಿಎಸ್‌ಗೆ ಬೆಂಬಲ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಐವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಿಮೋಲ್, ಆನಂದ್ ಪಕ್ಷದೊಂದಿಗೇ ಇದ್ದಾರೆ. ಅವರು ಯಾರಿಗೂ ಬೆಂಬಲ ನೀಡುವ  ಪ್ರಶ್ನೆ ಇಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಾರೆಡ್ಡಿ ಗುರುವಾರ ರಾತ್ರಿ ತಿಳಿಸಿದ್ದರು.

ಆದರೆ ಅದಕ್ಕೆ ವಿರುದ್ಧವಾಗಿ ಈ ಎಲ್ಲ ಸದಸ್ಯರೂ ಚುನಾವಣೆ ಸಂದರ್ಭದಲ್ಲಿ ಹಾಜರಿದ್ದು, ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಆದರೆ ಬಿಜೆಪಿಯ ಮತ್ತೊಬ್ಬ ಸದಸ್ಯೆ ಲಕ್ಕೂರಿನ ಮಂಜುಳಾ ಸಭೆಗೆ ಬಂದಿರಲಿಲ್ಲ.

ಕಾಂಗ್ರೆಸ್ ಹಿನ್ನಡೆ: ಐದು ಸದಸ್ಯರ ಬೆಂಬಲವುಳ್ಳ ಕಾಂಗ್ರೆಸ್‌ನ ಯಾವೊಬ್ಬ ಸದಸ್ಯರೂ ಚುನಾವಣೆ ಸಂದರ್ಭದಲ್ಲಿ ಹಾಜರಿರಲಿಲ್ಲ. ಆದರೆ ವರ್ತೂರು ಬಣ ತೊರೆದು ಕಾಂಗ್ರೆಸ್ ಸೇರುವುದಾಗಿ ಹಾಗೂ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪನವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದ ಪಕ್ಷೇತರ ಸದಸ್ಯ ಜಿ.ಎಸ್.ಅಮರನಾಥ್ ಪಾಲ್ಗೊಂಡು ಗಮನ ಸೆಳೆದರು. ಚುನಾವಣೆಗೆ ಕೆಲವೇ ದಿನಗಳಿರುವಾಗ ಅವರು ಜೆಡಿಎಸ್ ಸದಸ್ಯರೊಡನೆ ಸೇರಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಅದರಂತೆ ಶುಕ್ರವಾರ ಸಭೆಗೆ ಹಾಜರಾಗಿದ್ದರು.

ವರ್ತೂರು ಕುರುಹು: 2010ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆದ ಸಂದರ್ಭದಲ್ಲಿ ಮೂವರು ಪಕ್ಷೇತರ ಸದಸ್ಯರ ಬಲ ಹೊಂದಿದ್ದ ಶಾಸಕ ಆರ್.ವರ್ತೂರು ಪ್ರಕಾಶ್ ಪ್ರಭಾವ ಜಿ.ಪಂ.ನಲ್ಲಿ ಕಂಡು ಬರಲಿಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರ ಬಣದ ಸದಸ್ಯೆ ಚೌಡೇಶ್ವರಿ ದಿಢೀರ್ ಬೆಳವಣಿಗೆಯಲ್ಲಿ ಜೆಡಿಎಸ್ ಸೇರಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಈ ಚುನಾವಣೆಯ ಹೊತ್ತಿಗೆ ಅಮರನಾಥ್ ಅವರೂ ಶಾಸಕರಿಂದ ದೂರ ಉಳಿದಿದ್ದಾರೆ. ಹೀಗಾಗಿ ಸದಸ್ಯರ ಮೂಲಕ ತಮ್ಮ ಪ್ರಭಾವ ಬೀರುವ ಅವಕಾಶಗಳು ಶಾಸಕರಿಗೆ ಇಲ್ಲವಾಗಿದ ಎಂದು ವಿಶ್ಲೇಷಿಸಲಾಗುತ್ತಿದೆ.

ಮಂಕಾದ ಆಶಾ: ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ವೇಮಗಲ್ ಕ್ಷೇತ್ರದ ಸದಸ್ಯೆ ಆಶಾ ಚುನಾವಣೆ ಸಂದರ್ಭದಲ್ಲಿ ಮತ್ತು ನಂತರದಲ್ಲಿ ಮಂಕಾಗಿ ಕಂಡು ಬಂದರು. ಹಾಜರಿದ್ದ ಸದಸ್ಯರು ನೂತನ ಅಧ್ಯಕ್ಷ ನಾರಾಯಣಸ್ವಾಮಿ ಅವರನ್ನು ಅಭಿನಂದಿಸುತ್ತಿದ್ದ ಸಂದರ್ಭದಲ್ಲಿ ಆಶಾ ಮಹಿಳಾ ಸದಸ್ಯರ ಸಾಲಿನಲ್ಲಿ ಕೊನೆಗೆ ನಿಂತು ತಮ್ಮ ಮೊಬೈಲ್ ಫೋನ್‌ನಲ್ಲಿ ತಲ್ಲೆನರಾಗಿದ್ದರು. ಚುನಾವಣೆ ಬಳಿಕ ಅಧ್ಯಕ್ಷರ ಕೊಠಡಿಯಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸದಸ್ಯರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT