ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಯು ಅಧ್ಯಕ್ಷರಾಗಿ ಮೂರನೇ ಬಾರಿಗೆ ಶರದ್

Last Updated 14 ಏಪ್ರಿಲ್ 2013, 10:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಶರದ್ ಯಾದವ್ ಅವರು ಸತತ ಮೂರನೇ ಬಾರಿಗೆ ಸಂಯುಕ್ತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷರಾಗಿ ಭಾನುವಾರ ಸರ್ವಾನುಮತದಿಂದ ಪುನರ್ ಆಯ್ಕೆಯಾದರು.

ಇಲ್ಲಿ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಶರದ್ ಅವರನ್ನು ಜೆಡಿ (ಯು)ಪಕ್ಷದ ಅಧ್ಯಕ್ಷರನ್ನಾಗಿ ಪುನರ್ ಆಯ್ಕೆ ಮಾಡಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

`ನನ್ನ ಮೇಲೆ ಭರವಸೆಯನ್ನಿಟ್ಟು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪುನರ್ ಆಯ್ಕೆ ಮಾಡಿರುತ್ತೀರಿ. ನಿಮ್ಮೆಲ್ಲರನ್ನು ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸುತ್ತೇನೆ' ಎಂದು 65 ವರ್ಷದ ಶರದ್ ಯಾದವ್ ಅವರು ಪಕ್ಷ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಎನ್‌ಡಿಯ ಪಕ್ಷದೊಂದಿಗೆ ನಮ್ಮ ಮೈತ್ರಿ ಹಾಗೆಯೇ ಮುಂದುವರೆಯಲಿದೆ ಎಂದು ಅವರು ಮತ್ತೊಮ್ಮೆ ಸಭೆಯಲ್ಲಿ ಸ್ಪಷ್ಟಪಡಿಸಿದರು

ಶರದ್ ಯಾದವ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಯಾಗಿದ್ದರು.

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶರದ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪುನರ್ ಆಯ್ಕೆಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಹಾರ ಸೇರಿದಂತೆ ಸುಮಾರು 20 ರಾಜ್ಯಗಳ ಪಕ್ಷದ ಘಟಕಗಳು ಶರದ್ ಅವರ ಹೆಸರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ಸೂಚಿಸಿದ್ದವು.

ಜಾರ್ಜ್ ಫರ್ನಾಂಡೀಸ್ ನಂತರ ಜೆಡಿಯು ಅಧ್ಯಕ್ಷರಾಗಿ ಶರದ್ ಯಾದವ್ ಎರಡು ಬಾರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಬಿಜೆಪಿ ಜತೆಗಿನ ಮೈತ್ರಿ ಮುಂದುವರಿಯಲಿದೆ :
ಬಿಜೆಪಿ ಮತ್ತು ಜೆಡಿಯು ಜತೆಗಿನ ಭಿನ್ನಾಭಿಪ್ರಾಯ ಮಾಧ್ಯಮಗಳ ಕಲ್ಪನೆ. ಬಿಜೆಪಿ ಜತೆಗಿನ ನಮ್ಮ ಮೈತ್ರಿ ತುಂಬಾ ಹಳೆಯದು. ಅದನ್ನು ಮುಂದುವರಿಸಲು ಬಯಸುತ್ತೇವೆ' ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರು ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾನುವಾರ ಸ್ಪಷ್ಟಪಡಿಸಿದರು.

ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಜೆಡಿಯು ವಿರೋಧ ವ್ಯಕ್ತಪಡಿಸಿರುವ ವಿಷಯದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ ಅವರು, `ವೈಯಕ್ತಿಕವಾಗಿ ಯಾವುದೇ ವ್ಯಕ್ತಿಯ ಜತೆ ನಮಗೆ ಏನನ್ನೂ ಮಾಡುವುದು ಇಲ್ಲ. ಕಳೆದ 17 ವರ್ಷಗಳಿಂದ ನಾವು ಎನ್‌ಡಿಎ ಜತೆಗಿದ್ದೇವೆ. ಮೈತ್ರಿಯಿಂದಾಗಿ ನಾವು ಬಳಲಿದ್ದೇವೆ ಸಹ. ಹೀಗಿದ್ದರೂ ನಾವು ಮುಂದುವರಿಯುತ್ತಿದ್ದೇವೆ' ಎಂದರು.

ಸಮತಾ ಪಕ್ಷದ ಜತೆ ವಿಲೀನವಾದ ಮೇಲೆ ಜೆಡಿಯು ದುರ್ಬಲಗೊಂಡಿತಲ್ಲದೇ ಹಲವು ಸವಾಲುಗಳನ್ನು ಎದುರಿಸಬೇಕಾಯಿತು ಎಂದು ಇದೇ ವೇಳೆ ಯಾದವ್ ತಿಳಿಸಿದರು.

ಅಕ್ಟೋಬರ್ 2003 ರಲ್ಲಿ ಸಮತಾ ಪಕ್ಷವು ಜೆಡಿಯು ಜತೆ ವಿಲೀನವಾಯಿತು. ಅಂದೂ ಸಹ ಜೆಡಿಯು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಒಂದು ಭಾಗವಾಗಿತ್ತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT