ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸಿಂತಾ ಕುಟುಂಬಕ್ಕೆರೂ 2.85 ಕೋಟಿ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಮೆಲ್ಬರ್ನ್/ಲಂಡನ್ (ಪಿಟಿಐ):  ಲಂಡನ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಮಂಗಳೂರು ಮೂಲದ ನರ್ಸ್ ಜೆಸಿಂತಾ ಸಲ್ಡಾನ ಅವರ ಕುಟುಂಬಕ್ಕೆ ಕನಿಷ್ಠ 5 ಲಕ್ಷ ಆಸ್ಟ್ರೇಲಿಯನ್ ಡಾಲರ್ (ಸುಮಾರುರೂ2.85 ಕೋಟಿ) ಪರಿಹಾರ ನೀಡುವುದಾಗಿ ಆಸ್ಟ್ರೇಲಿಯಾದ `2 ಡೆ ಎಫ್‌ಎಂ' ರೇಡಿಯೊ ಚಾನೆಲ್ ಘೋಷಿಸಿದೆ.

ಜೆಸಿಂತಾ ಸಾವಿನ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಜಾಹೀರಾತು ಪ್ರಸಾರ ಮತ್ತೆ ಆರಂಭಿಸುತ್ತಿದ್ದು, ಇದರಿಂದ ಬಂದ ಲಾಭವನ್ನು ನೊಂದ  ಕುಟುಂಬಕ್ಕೆ ನೀಡುವುದಾಗಿ ಅದು ಹೇಳಿದೆ.

ಜೆಸಿಂತಾ ನಿಗೂಢ ಸಾವಿನ ನಂತರ ವಿಶ್ವಾದ್ಯಂತ ವ್ಯಕ್ತವಾದ ಖಂಡನೆಯಿಂದ ಎಚ್ಚೆತ್ತುಕೊಂಡ `2ಡೆ', ಜಾಹೀರಾತು ಬಿತ್ತರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಈ ತಿಂಗಳ ಅಂತ್ಯದವರೆಗೆ ಜಾಹಿರಾತಿನಿಂದ ಬರುವ ಎಲ್ಲಾ ಲಾಭವನ್ನು ಜೆಸಿಂತಾ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ನೀಡಲಾಗುತ್ತದೆ. ಇದರಿಂದ ಆ ಕುಟುಂಬಕ್ಕೆ ಅಗತ್ಯ ನೆರವು ದೊರೆಯಲಿದೆ ಎಂದು ರೇಡಿಯೊ ಕೇಂದ್ರದ ಒಡೆತನ ಹೊಂದಿರುವ ಸದರ್ನ್ ಕ್ರಾಸ್ ಆಸ್ಟಿರಿಯೊದ  ಕಾರ್ಯನಿರ್ವಾಹಕ ರ‌್ಹಿಸ್ ಹಾಲೆರಾನ್ ಹೇಳಿದ್ದಾರೆ.

ಕಾನೂನು ಉಲ್ಲಂಘಿಸಿಲ್ಲ: ಬ್ರಿಟನ್ ಯುವರಾಣಿ ಕೇಟ್ ಮಿಡ್ಲ್‌ಟನ್ ಅವರ ಆರೋಗ್ಯದ ಕುರಿತು ಹುಸಿ ಕರೆ ಮೂಲಕ ಮಾಹಿತಿ ಪಡೆದು, ಅದನ್ನು ಬಿತ್ತರಿಸುವಾಗ ತಾನು ಯಾವುದೇ ಕಾನೂನು ಉಲ್ಲಂಘಿಸಿಲ್ಲ ಎಂದು ರೇಡಿಯೊ ಸ್ಪಷ್ಟನೆ ನೀಡಿದೆ.

ಸಂಸತ್ ಸದಸ್ಯ ಆಗ್ರಹ: ಜೆಸಿಂತಾ ಸಾವಿನ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಲಂಡನ್‌ನಲ್ಲಿ ಲೇಬರ್ ಪಕ್ಷದ ಸಂಸದ ಕೀತ್ ವಾಜ್ ಅವರು ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಜೆಸಿಂತಾ ಪತಿ ಬೆನೆಡಿಕ್ಟ್ ಬಾರ್ಬೋಜಾ, ಮಕ್ಕಳಾದ ಲಿಸಾ ಮತ್ತು ಜುನಾಲ್ ಅವರನ್ನು ಭೇಟಿ ಮಾಡಿದ ನಂತರ ವಾಜ್ ಸಂಸತ್‌ನಲ್ಲಿ (ಹೌಸ್ ಆಫ್ ಕಾಮನ್ಸ್) ಈ ವಿಷಯ ಪ್ರಸ್ತಾಪಿಸಿದರು.

`ಹುಸಿ ಕರೆ ಮಾಡಿ ಈಗ ಪಶ್ಚಾತ್ತಾಪದ ಮಾತನಾಡುತ್ತಿರುವ ರೇಡಿಯೊ ನಿರೂಪಕರ ಬಗ್ಗೆ ಅನುಕಂಪ ವ್ಯಕ್ತಪಡಿಸುವುದಕ್ಕಿಂತ ಹೆಚ್ಚಾಗಿ, ಜೆಸಿಂತಾ ಸಾವಿನ ನಂತರ ಆಘಾತಕ್ಕೆ ಒಳಗಾಗಿರುವ ಪತಿ ಹಾಗೂ ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಆಪ್ತ ಸಮಾಲೋಚನೆ ಮೂಲಕ ಅವರನ್ನು ಸಮಾಧಾನ ಪಡಿಸಬೇಕಾಗಿದೆ' ಎಂದರು.

ನೆರವಿಗೆ ಸಿದ್ಧ: ಇದೇ ಸಂದರ್ಭದಲ್ಲಿ ನವದೆಹಲಿಯಲ್ಲಿ ಮಾತನಾಡಿರುವ ವಿದೇಶಾಂಗ ಇಲಾಖೆ ವಕ್ತಾರರು, `ಜೆಸಿಂತಾ ಕುಟುಂಬಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಆದರೆ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಅಥವಾ ವಿದೇಶಾಂಗ ಸಚಿವಾಲಯವನ್ನು ಅವರ ಕುಟುಂಬದವರು ಈವರೆಗೆ ಸಂಪರ್ಕಿಸಿಲ್ಲ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT