ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಕೊವಿಚ್‌ಗೆ ಪ್ರಶಸ್ತಿ

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಐಎಎನ್‌ಎಸ್): ಕಳೆದ ಬಾರಿಯ ಚಾಂಪಿಯನ್ ರಫೆಲ್ ನಡಾಲ್‌ಗೆ ತಿರುಗೇಟು ನೀಡಿದ ಅಗ್ರ ಶ್ರೇಯಾಂಕದ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಇಲ್ಲಿ ಕೊನೆಗೊಂಡ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಅರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಜೊಕೊವಿಚ್ 6-2, 6-4, 6-7, 6-1ರಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಅವರನ್ನು ಮಣಿಸಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

ಒಟ್ಟು 4 ಗಂಟೆ 10 ನಿಮಿಷಗಳ ಕಾಲ ನಡೆದ ಭರ್ಜರಿ ಹೋರಾಟದಲ್ಲಿ ಸರ್ಬಿಯದ ಆಟಗಾರನಿಗೆ ಗೆಲುವು ಸುಲಭವಾಗಿ ದಕ್ಕಲಿಲ್ಲ. ಈ ಆಟಗಾರ ಅಮೆರಿಕ ಓಪನ್ ಟೂರ್ನಿಯಲ್ಲಿ ಜಯಿಸಿದ ಮೊದಲ ಪ್ರಶಸ್ತಿ ಇದು. ಅಷ್ಟೇ ಅಲ್ಲ ಈ ವರ್ಷದಲ್ಲಿ ನಡಾಲ್ ವಿರುದ್ಧ ಆಡಿದ ಒಟ್ಟು ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದು ದಾಖಲೆ ಮಾಡಿದರು.

ಮೊದಲ ಸೆಟ್‌ನಲ್ಲಿ 2-0ರಲ್ಲಿ ಮುನ್ನಡೆಯಲ್ಲಿದ್ದ ನಡಾಲ್ ಆರಂಭದಲ್ಲಿಯೇ ಚುರುಕಿನ ಆಟವಾಡಿದರು. ಆದರೆ ಸರ್ಬಿಯಾದ ಆಟಗಾರ ಕೊನೆಯಲ್ಲಿ ಆರು ಪಾಯಿಂಟ್‌ಗಳನ್ನು ಗಳಿಸುವಲ್ಲಿ ಯಶ ಕಂಡರು. ಇದರಿಂದ ಜಯ  ಸುಲಭವಾಯಿತು.

17 ನಿಮಿಷಗಳಲ್ಲಿ ಅಂತ್ಯ ಕಂಡ ದ್ವಿತೀಯ ಸೆಟ್‌ನಲ್ಲಿ ನಡಾಲ್ ಭಾರಿ ಪ್ರತಿರೋಧ ತೋರಿದರು. ಅತ್ಯುತ್ತಮ ಏಸ್‌ಗಳನ್ನು ಸಿಡಿಸಿದರು. ಆದರೆ ಸರ್ವಿಸ್‌ನಲ್ಲಿ ಹೆಚ್ಚು ಪಾಯಿಂಟ್ ಕಲೆ ಹಾಕುವಲ್ಲಿ ಯಶಸ್ಸು ಕಾಣಲಿಲ್ಲ. ಮತ್ತೆ ಲಯ ಕಂಡುಕೊಂಡ ಕಳೆದ ಬಾರಿಯ ಚಾಂಪಿಯನ್ 3-0ಮುನ್ನಡೆ ಸಾಧಿಸಿದರು. ಇಬ್ಬರೂ ಆಟಗಾರರು ಒಂದು ಹಂತದಲ್ಲಿ 4-4ರಲ್ಲಿ ಸಮಬಲ ಸಾಧಿಸಿದರಾದರೂ ಗೆಲುವು ಪಡೆಯಲು ನಡಾಲ್‌ಗೆ ಸಾಧ್ಯವಾಗಲಿಲ್ಲ.

ಮೂರನೇ ಸೆಟ್‌ನಲ್ಲಿ ಸ್ಪೇನ್‌ನ ಆಟಗಾರ ಉತ್ತಮ ಹೋರಾಟ ತೋರಿದರು. ಒಂದು ಹಂತದಲ್ಲಿ 5-1ರಲ್ಲಿ ಮುನ್ನಡೆ ಹೊಂದಿದ್ದರು. ಆದರೆ ಈ ಸೆಟ್‌ನಲ್ಲಿ ಗೆಲುವು ಪಡೆಯಲು ಜೊಕೊವಿಚ್ ವಿಫಲರಾದರು.
ನಾಲ್ಕನೇ ಸೆಟ್‌ನಲ್ಲಿ ಚುರುಕಿನ ಆಟವಾಡಿದ ಜೊಕೊಚಿವ್ ಆರಂಭದಲ್ಲಿ ಗಮನ ಸೆಳೆಯುವಂತ ಸರ್ವ್‌ಗಳನ್ನು ಮಾಡಿ ಈ ವರ್ಷದಲ್ಲಿ ಮೂರನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ಒಡೆಯರಾದರು. 

 ಈ ಆಟಗಾರನಿಗೆ ಸಿಕ್ಕ ನಾಲ್ಕನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಇದು. ಈ ಮೊದಲು ಆಸ್ಟ್ರೇಲಿಯಾ ಓಪನ್ (2008 ಹಾಗೂ 2011), ವಿಂಬಲ್ಡನ್ ಟೂರ್ನಿಯಲ್ಲಿ (2011) ಚಾಂಪಿಯನ್ ಆಗಿದ್ದರು.

`ಈ ಫಲಿತಾಂಶ ನಿರೀಕ್ಷಿತವೇ ಆಗಿತ್ತು. ಈ ವರ್ಷದ ಆರಂಭದಿಂದಲೂ ಪ್ರಮುಖ ಟೂರ್ನಿಗಳಿಗೆ ನಡೆಸಬೇಕಾದ ಸಿದ್ದತೆಯ ಬಗ್ಗೆ ಯೋಜನೆ ರೂಪಿಸಿದ್ದೆ. ದೇಹಕ್ಕೆ ವಿಶ್ರಾಂತಿ ನೀಡುವುದರ ಬಗ್ಗೆ ಹೆಚ್ಚು ಗಮನ ಹರಿಸಿದ್ದೆ. ಒಟ್ಟಿನಲ್ಲಿ ಉತ್ತಮವಾಗಿ ಸಜ್ಜುಗೊಂಡಿದ್ದೆ~ ಎಂದು ಪಂದ್ಯದ ನಂತರ 24 ವರ್ಷದ ಜೊಕೊವಿಚ್ ಪ್ರತಿಕ್ರಿಯಿಸಿದರು.

`ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇತ್ತು
. ನಿರಾಸೆಯಾಯಿತು. ಸಹಜವಾಗಿಯೇ ಬೇಸರವಾಗಿದೆ. ಆದರೆ ಜೊಕೊವಿಚ್ ರೂಪಿಸಿಕೊಂಡಿದ್ದ ಯೋಜನೆಗಳನ್ನು ನನಗೆ ಚಿಂತಿಸಲು ಸಹ ಸಾಧ್ಯವಾಗುತ್ತಿಲ್ಲ. ಆತ ಅತ್ಯುತ್ತಮವಾಗಿ ಯೋಜನೆ ರೂಪಿಸಬಲ್ಲರು ಎಂದು~ ನಡಾಲ್ ತಿಳಿಸಿದರು.

ನೊವಾಕ್  ಸಾಧನೆಯ ಹೆಜ್ಜೆಗಳು

-ಜೊಕೊವಿಚ್ ಜಯಿಸಿದ ಮೊದಲ ಅಮೆರಿಕ ಓಪನ್ ಟೂರ್ನಿ
-ಈ ವರ್ಷದಲ್ಲಿ ಬಂದ ಮೂರನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ
-2011ರಲ್ಲಿ ನಡಾಲ್ ವಿರುದ್ಧ ಆಡಿದ ಎಲ್ಲಾ ಪಂದ್ಯಗಳಲ್ಲಿಯು ಜೊಕೊವಿಚ್‌ಗೆ ಜಯ
-23 ವರ್ಷಗಳ ನಂತರ ಫೈನಲ್‌ನಲ್ಲಿ ಎರಡು ಸಲ ಮುಖಾಮಖಿಯಾದ ಆಟಗಾರರು
-ಕಳೆದ ವರ್ಷದ ಸೋಲಿಗೆ ತಿರುಗೇಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT