ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿ ಕುಮಾರ್‌ ಜಿ.ಪಂ ಅಧ್ಯಕ್ಷೆ

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ: ವೇದಾ ವಿಜಯ ಕುಮಾರ್ ಉಪಾಧ್ಯಕ್ಷೆ
Last Updated 6 ಮೇ 2016, 8:42 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಭದ್ರಾವತಿ ತಾಲ್ಲೂಕು ಹಿರಿಯೂರು ಕ್ಷೇತ್ರದ ಜೆಡಿಎಸ್‌ ಸದಸ್ಯೆ ಜ್ಯೋತಿ ಕುಮಾರ್ ಹಾಗೂ ಉಪಾಧ್ಯಕ್ಷೆ ಯಾಗಿ ಶಿವಮೊಗ್ಗ ತಾಲ್ಲೂಕು ಹಸೂಡಿ ಕ್ಷೇತ್ರದ ವೇದಾ ವಿಜಯ ಕುಮಾರ್‌ ಗುರುವಾರ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್–ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಜ್ಯೋತಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಶಿಕಾರಿಪುರ ತಾಲ್ಲೂಕು ಈಸೂರು ಕ್ಷೇತ್ರದ ಅರುಂಧತಿ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್–ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ವೇದಾ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಆರಗ ಕ್ಷೇತ್ರದ ಅಪೂರ್ವ ಶರಧಿ ಸ್ಪರ್ಧಿಸಿದ್ದರು.

ಜ್ಯೋತಿ ಹಾಗೂ ವೇದಾ ಪರವಾಗಿ 16, ಅರುಂಧತಿ ಹಾಗೂ ಅಪೂರ್ವ ಶರಧಿ ಅವರ ಪರವಾಗಿ 15 ಮತಗಳು ಬಂದವು. ಎಲ್ಲ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಒಂದು ಮತಗಳ ಅಂತರದಿಂದ ಕಾಂಗ್ರೆಸ್–ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಂ.ಎನ್‌.ಜಯಂತಿ ಘೋಷಿಸಿದರು. ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಲ್ಲಾ ಪಂಚಾಯ್ತಿ ಸಿಇಒ ರಾಕೇಶ್‌ ಕುಮಾರ್ ಉಪಸ್ಥಿತರಿದ್ದರು.

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ: ‘ನೂತನ ಅಧ್ಯಕ್ಷೆ ಜ್ಯೋತಿ ಮಾತನಾಡಿ, ಬರದ ಪರಿಸ್ಥಿತಿಯಲ್ಲಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಮೊದಲ ಆದ್ಯತೆ ನೀಡುತ್ತೇನೆ’ ಎಂದು ಭರವಸೆ ನೀಡಿದರು. ಉಪಾಧ್ಯಕ್ಷೆ ವೇದಾ ಮಾತನಾಡಿ, ಅವಕಾಶ ಕಲ್ಪಿಸಿದ ಕಾಂಗ್ರೆಸ್ ಮುಖಂಡರಿಗೆ ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಚುನಾವಣೆ ಫಲಿತಾಂಶ ಬಂದಾಗಲೇ ಮೈತ್ರಿ: ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಪಂಚಾಯ್ತಿ ಚುನಾವಣಾ ಫಲಿತಾಂಶ ಬಂದಾಗಲೇ ಜೆಡಿಎಸ್‌ ಮುಖಂಡರ ಜತೆ ಮಾತುಕತೆ ನಡೆಸಲಾಗಿತ್ತು. ಪಕ್ಷದಿಂದ ಬಂಡಾಯ ಸ್ಪರ್ಧಿಸಿ, ಗೆಲುವು ಪಡೆದಿದ್ದ ವೇದಾ ಅವರೂ ಪಕ್ಷದ ಜತೆಯಲ್ಲೇ ಉಳಿ ಯುವ ಭರವಸೆ ನೀಡಿದ್ದರು. ಹಾಗಾಗಿ, ಮೈತ್ರಿ ಖಚಿತವಾಗಿತ್ತು ಎಂದು ತಿಳಿಸಿದರು.

ಜೆಡಿಎಸ್‌ ಈ ಹಿಂದೆ ಕಾಂಗ್ರೆಸ್‌ ಬೆಂಬಲಿಸಿತ್ತು. ಪಾಲಿಕೆಯಲ್ಲೂ ಕಾಂಗ್ರೆಸ್‌ಗೆ ಬೆಂಬಲ ನೀಡಿದೆ. ಹಾಗಾಗಿ, ಜಿಲ್ಲಾ ಪಂಚಾಯ್ತಿಯಲ್ಲಿ ಜೆಡಿಎಸ್‌ ಬೆಂಬಲಿಸಲು ನಿರ್ಧರಿಸಿದೆವು. ವೇದಾ ಅವರು ಕಾಂಗ್ರೆಸ್ ಸೇರ್ಪಡೆ ಯಾಗಿದ್ದಾರೆ. ಹಾಗಾಗಿ, ಅವರು ಕಾಂಗ್ರೆಸ್ ಅಭ್ಯರ್ಥಿಯೇ ಎಂದು ಸಮರ್ಥಿಸಿಕೊಂಡರು.

‘ಕೋಮುವಾದಿ ಶಕ್ತಿಗಳನ್ನು ಹೊರಗಿಡಬೇಕು ಎಂಬ ಕಾರಣದಿಂದ ಜೆಡಿಎಸ್‌ ಜತೆ ಹೊಂದಾಣಿಕೆ ಮುಂದುವರಿಸಿದ್ದೇವೆ. ಎಲ್ಲರೂ ಸೇರಿ ದಕ್ಷ, ಪ್ರಾಮಾಣಿಕ ಆಡಳಿತ ನೀಡುತ್ತೇವೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ’ ಎಂದು ಭರವಸೆ ಅವರು ನೀಡಿದರು. ಭದ್ರಾವತಿ ಶಾಸಕ ಅಪ್ಪಾಜಿ ಗೌಡ ಮಾತನಾಡಿ, ‘ಜೆಡಿಎಸ್‌ ಅಭ್ಯರ್ಥಿ ಅಧ್ಯಕ್ಷರಾಗಿರುವುದು ಸಂತಸ ತಂದಿದೆ. ಮೈತ್ರಿಗೆ ಪಕ್ಷದ ವರಿಷ್ಠರ ಒಪ್ಪಿಗೆ ದೊರೆತಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲೇ ವಿಜಯೋತ್ಸವ: ಕಾಂಗ್ರೆಸ್‌–ಜೆಡಿಎಸ್ ಕಾರ್ಯಕರ್ತರು ಹಾಗೂ ಅಧ್ಯಕ್ಷೆ, ಉಪಾಧ್ಯಕ್ಷೆಯ ಬೆಂಬಲಿಗರು ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿಯತ್ತ ವಾಲಿದ್ದ ಪಕ್ಷೇತರ ಅಭ್ಯರ್ಥಿ!
ಜಿಲ್ಲಾ ಪಂಚಾಯ್ತಿ 31 ಸದಸ್ಯರಲ್ಲಿ ಬಿಜೆಪಿ 15, ಕಾಂಗ್ರೆಸ್‌ 8, ಜೆಡಿಎಸ್ 7 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಇದ್ದಾರೆ. ಬಿಜೆಪಿ ಅಧಿಕಾರದ ಗದ್ದುಗೆ ಏರಲು ಅಗತ್ಯವಾಗಿದ್ದ ಬಹುಮತಕ್ಕೆ ಒಂದು ಮತದ ಕೊರತೆ ಇತ್ತು. ಹಾಗಾಗಿ, ಪಕ್ಷೇತರ ಅಭ್ಯರ್ಥಿಯ ಮನವೊಲಿಸಿದ್ದರು. ಈ ವಿಷಯ ಅರಿತ ಸೊರಬ ಶಾಸಕ ಮಧು ಬಂಗಾರಪ್ಪ ಅವರು ಪಕ್ಷೇತರ ಅಭ್ಯರ್ಥಿ ಜತೆ ಮಾತುಕತೆ ನಡೆಸಿ, ಮರಳಿ ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

‘ಸಚಿವ ಶಿವಕುಮಾರ್, ಹಿರಿಯರಾದ ಕಾಗೋಡು ತಿಮ್ಮಪ್ಪ ಅವರ ಜತೆ ಸಂಧಾನ ನಡೆಸಿ, ಪಕ್ಷೇತರ ಅಭ್ಯರ್ಥಿಯ ಮನವೊಲಿಸಲಾಯಿತು. ಹಾಗಾಗಿ, ಬಿಜೆಪಿ ಪಾಲಾಗಲಿದ್ದ ಜಿಲ್ಲಾ ಪಂಚಾಯ್ತಿ ಗದ್ದುಗೆ ಕಾಂಗ್ರೆಸ್–ಜೆಡಿಎಸ್‌ ಮೈತ್ರಿಗೆ ದಕ್ಕಿತು’ ಎಂದು ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದರು.

ಬಿಜೆಪಿಗೆ ಮುಖಭಂಗ
ಬಹುಮತಕ್ಕೆ ಕೇವಲ ಒಂದು ಸ್ಥಾನದ ಆವಶ್ಯಕತೆ ಇದ್ದ ಬಿಜೆಪಿ ಪಕ್ಷೇತರ ಸದಸ್ಯೆ ಬೆಂಬಲ ಪಡೆಯಲು ವಿಫಲವಾಯಿತು. ಹಲವು ದಿನಗಳಿಂದ ಜೆಡಿಎಸ್  ಜತೆ ಮೈತ್ರಿ ನಿಶ್ಚಿತ ಎಂದು ಹೇಳಿಕೊಂಡು ಬಂದಿದ್ದ ಬಿಜೆಪಿ ಮುಖಂಡರು ಈ ಬೆಳವಣಿಗೆಗಳಿಂದ ತೀವ್ರ ಮುಖಭಂಗ ಅನುಭವಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಹೊಸ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಈ ಬೆಳವಣಿಗೆ ಹತಾಶೆ ತಂದಿತು.

ಪತಿ, ಪತ್ನಿಯರ ಗೆಲುವಿಗೆ ಅಧ್ಯಕ್ಷ ಸ್ಥಾನದ ಗರಿ!
ಭದ್ರಾವತಿ:
ಹಿರಿಯೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಎರಡನೆ ಬಾರಿ ವಿಜೇತರಾದ ಜ್ಯೋತಿ ಎಸ್. ಕುಮಾರ್ ಜಿಲ್ಲಾ ಪಂಚಾಯ್ತಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಇತಿಹಾಸ ಬರೆದಿದ್ದಾರೆ.

ಹಿರಿಯೂರು ಜಿಲ್ಲಾ ಪಂಚಾಯ್ತಿ ಕಳೆದ ನಾಲ್ಕು ಚುನಾವಣೆಗಳಿಂದ ಪತಿ–ಪತ್ನಿ ಗೆಲುವಿನ ಕ್ಷೇತ್ರವಾಗಿದ್ದರೆ, ಪತ್ನಿ ಪ್ರಥಮ ವಿಜಯದಲ್ಲಿ ಉಪಾಧ್ಯಕ್ಷೆಯಾಗಿ, 2ನೇ ವಿಜಯದಲ್ಲಿ ಅಧ್ಯಕ್ಷೆ ಸ್ಥಾನದ ಅದೃಷ್ಟ ಪಡೆದಿದ್ದಾರೆ.

ಸೋಲಿಲ್ಲದ ಸರದಾರರು ಎನಿಸಿಕೊಂಡಿರುವ ಪತಿ ಎಸ್.ಕುಮಾರ್ ಹಾಗೂ ಪತ್ನಿ ಜ್ಯೋತಿ ಎಸ್.ಕುಮಾರ್ ತಮ್ಮ ನಿರಂತರ ಗೆಲುವಿನ ಜತೆಗೆ ಅಧಿಕಾರ ಚುಕ್ಕಾಣಿ ಹಿಡಿಯುವ ಅವಕಾಶವನ್ನು ಸಹ ಸಮರ್ಪಕವಾಗಿ ಬಳಕೆ ಮಾಡಿಕೊಂಡು ತಮ್ಮ ರಾಜಕೀಯ ಕಸರತ್ತಿನಲ್ಲಿ ಯಶಸ್ಸು ಕಂಡಿದ್ದಾರೆ.

2002–07 ರ ತನಕ ಪ್ರಥಮ ಬಾರಿಗೆ ಈ ಕ್ಷೇತ್ರದಲ್ಲಿ ಚುನಾಯಿತರಾದ ಎಸ್.ಕುಮಾರ್ ಅಲ್ಲಿಂದ ನಿರಂತರವಾಗಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. 2007–12 ರಲ್ಲಿ ತಮ್ಮ ಪತ್ನಿ ಜ್ಯೋತಿ ಅವರ ಗೆಲುವಿಗೆ ಶ್ರಮ ಹಾಕಿದ ಪತಿ ಅವರನ್ನು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆಯಾಗಿ ಮಾಡುವಲ್ಲಿ ಯಶ ಕಂಡಿದ್ದರು.

2012–16 ರ ಅವಧಿಯಲ್ಲಿ ಪುನಃ ತಮ್ಮ ತೆಕ್ಕೆಯಲ್ಲೇ ಸ್ಥಾನ ಉಳಿಸಿಕೊಂಡ ಕುಮಾರ್ ಅಂತಿಮ ಅವಧಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದರು. ಈಗ ಪತ್ನಿಯನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹಿಡಿದ ಸಾಧಿಸಿದ ಅವರು ಕಾಂಗ್ರೆಸ್–ಜೆಡಿಎಸ್ ಮೈತ್ರಿ ಆಡಳಿತದ ಪ್ರಥಮ ಅವಧಿಯಲ್ಲೇ ಪತ್ನಿಯನ್ನು ಅಧ್ಯಕ್ಷೆ ಮಾಡಿದ ಹಿರಿಮೆ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT