ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಲಕ್ಷ್ಮಿ ಕೊಲೆ: ಆರೋಪಿ ಸೆರೆ

ಸಾಲ ತೀರಿಸಲು ಬೇಕಿದ್ದ ಹಣ ಸಂಪಾದನೆಗಾಗಿ ಕೃತ್ಯ
Last Updated 16 ಸೆಪ್ಟೆಂಬರ್ 2013, 19:17 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಪಿ.ನಗರ ಬಳಿಯ ವೆಂಕಟಾದ್ರಿ ಲೇ­ಔಟ್‌­ನಲ್ಲಿ ನಡೆದಿದ್ದ ಜ್ಯೋತಿಲಕ್ಷ್ಮಿ (33) ಕೊಲೆ ಪ್ರಕರಣದ ಆರೋಪಿ ಅರುಣ್‌ಕುಮಾರ್‌ (24) ಎಂಬಾತ­ನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯ  ದೊರೆಸಾನಿಪಾಳ್ಯ ನಿವಾಸಿ­ಯಾದ ಅರುಣ್‌ಕುಮಾರ್‌, ಕಾರು ಚಾಲಕನಾಗಿದ್ದ. ₨ 6 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ ಆತ ಸಾಲ ತೀರಿಸಲು ಬೇಕಿದ್ದ ಹಣ ಸಂಪಾದನೆಗಾಗಿ ಈ ಕೊಲೆ ಮಾಡಿದ್ದಾಗಿ ಪೊಲೀಸ್‌ ವಿಚಾರಣೆ ವೇಳೆ ಒಪ್ಪಿ­ಕೊಂಡಿದ್ದಾನೆ.

ಎಂಬಿಎ ಪದವೀಧರೆಯಾದ ಜ್ಯೋತಿಲಕ್ಷ್ಮಿ, ಜೆ.ಪಿ.­ನಗರ ಐದನೇ ಹಂತದ ಸಾಫ್ಟ್‌ವೇರ್ ಕಂಪೆನಿ­ಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗಿಯಾಗಿದ್ದರು. ಪತಿಯಿಂದ ವಿಚ್ಛೇದನ ಪಡೆದಿದ್ದ ಅವರು ಐದು ವರ್ಷದ ಮಗಳು ಜಾಗೃತಿ­ಯೊಂದಿಗೆ ವೆಂಕಟಾದ್ರಿ ಲೇಔಟ್‌ನಲ್ಲಿ ವಾಸವಿದ್ದರು. ಅರಕೆರೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ಫ್ಲಾಟ್ ಖರೀದಿಸಿದ್ದ ಅವರು ಆ ಫ್ಲಾಟ್‌ಗೆ ಮನೆ ಬದಲಿಸುವ ಸಿದ್ಧತೆ ನಡೆಸಿದ್ದರು.

ಈ ವಿಷಯ ತಿಳಿದಿದ್ದ ಆರೋಪಿ ಬಾಡಿಗೆದಾರನ ಸೋಗಿನಲ್ಲಿ ಆ.1ರಂದು ಅವರ ಮನೆಗೆ ಹೋಗಿದ್ದ. ಮನೆ ನೋಡುವ ನೆಪದಲ್ಲಿ ಒಳ ಹೋದ ಆತ, ಮಗು ಜಾಗೃತಿ ಎದುರೇ ಜ್ಯೋತಿಲಕ್ಷ್ಮಿ ಅವರನ್ನು ಚಾಕುವಿ­ನಿಂದ ಇರಿದು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲಗಾರರು ಸಾಲ ಹಿಂದಿರುಗಿಸುವಂತೆ ಆತನ ಮೇಲೆ ಒತ್ತಡ ತರುತ್ತಿದ್ದರು. ಹೀಗಾಗಿ ಆ.1ರಂದು ಸರಗಳವು ಮಾಡಿಯಾದರೂ ಹಣ ತರಬೇಕೆಂದು ನಿರ್ಧರಿಸಿದ್ದ. ಆದರೆ, ಈ ಯತ್ನ ಕೈಗೂಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿದ್ದ ಆರೋಪಿಗೆ ಜ್ಯೋತಿಲಕ್ಷ್ಮಿ ಮನೆ ಖಾಲಿ ಮಾಡುವ ವಿಷಯ ಗೊತ್ತಿತ್ತು. ಹೀಗಾಗಿ ಮನೆ ನೋಡುವ ನೆಪದಲ್ಲಿ ಹೋಗಿ ಕಳವು ಮಾಡಲು ಸಂಚು ರೂಪಿಸಿದ್ದ. ಸಂಜೆ 7 ಗಂಟೆ ಸುಮಾರಿಗೆ ಜ್ಯೋತಿಲಕ್ಷ್ಮಿ ಮನೆಗೆ ಹೋಗಿ­ರುವ ಆತ, ಚಿನ್ನಾಭರಣ ಹಾಗೂ ಹಣ ಕೊಡುವಂತೆ ಅವರಿಗೆ ಚಾಕುವಿನಿಂದ ಬೆದರಿಸಿದ್ದಾನೆ. ಆಗ ಅವರು ಕೂಗಿಕೊಂಡಿದ್ದರಿಂದ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅದೇ ವೇಳೆಗೆ ಕೆಳಗಿನ ಮನೆಯ ಮಹಿಳೆ, ಜ್ಯೋತಿಲಕ್ಷ್ಮಿ ಅವರಿದ್ದ ಮಹಡಿಗೆ ಬಂದು ಬಾಗಿಲು ತಟ್ಟಿ­ದ್ದಾರೆ. ಅವರು ಕೂಗಿಕೊಂಡ ಕಾರಣದಿಂದಲೇ ಯಾರೋ ಬಂದಿದ್ದಾರೆಂದು ಗಾಬರಿಯಾದ ಆರೋಪಿ, ಚಾಕುವಿನಿಂದ ಜ್ಯೋತಿಲಕ್ಷ್ಮಿ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ತಾಯಿಯ ಚೀರಾಟ ಕೇಳಿ ಕೊಠಡಿಗೆ ಬಂದ ಜಾಗೃತಿಗೆ ಆತ ಜೋರಾಗಿ ಹೊಡೆದಿದ್ದರಿಂದ, ಮಗು ಪ್ರಜ್ಞೆತಪ್ಪಿ ಬಿದ್ದಿತ್ತು ಎಂದು ಪ್ರಕರಣದ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನಂತರ ಜ್ಯೋತಿಲಕ್ಷ್ಮಿ ಮೊಬೈಲ್‌ ತೆಗೆದು­ಕೊಂಡು ಮನೆ­ಯಿಂದ ಹೊರಬಂದ ಆರೋಪಿ, ಸಿಮ್‌­ಕಾರ್ಡ್‌ ತೆಗೆದು ಮುರಿದು ಹಾಕಿದ್ದ. ಮೊಬೈಲನ್ನು ಬಿಳೇಕ­ಹಳ್ಳಿಯ ಬೇಕರಿಯೊಂದರ ಬಳಿ ಬಿಟ್ಟು ಹೋಗಿದ್ದ. ಬೇಕರಿ ಮಾಲೀಕ ಆ ಮೊಬೈಲನ್ನು ಹೊಸೂರು ಮೂಲದ ವ್ಯಕ್ತಿಯೊಬ್ಬರಿಗೆ ಮಾರಿದ್ದ. ಆ ನಂತರ ಐಎಂಇಐ ಸಂಖ್ಯೆಯ ಜಾಡು ಹಿಡಿದು ಮೊಬೈಲ್‌ ಬಳಸುತ್ತಿದ್ದ ವ್ಯಕ್ತಿಯನ್ನು ಹೊಸೂರಿನಲ್ಲಿ ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಅವರಿಗೂ ಮತ್ತು ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಗೊತ್ತಾಯಿತು. ಇದರಿಂದಾಗಿ ಬಿಳೇಕಹಳ್ಳಿಯ ಬೇಕರಿ ಬಳಿ ಮೊಬೈಲ್‌ ಬಿಟ್ಟು ಹೋಗಿದ್ದು ಯಾರು ಎಂಬುದು ನಿಗೂಢ­ವಾಗಿಯೇ ಉಳಿದಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿನ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. 2009ರಲ್ಲಿ ಬೈಕ್‌ ಕಳವು ಪ್ರಕರಣದಲ್ಲಿ ಅರುಣ್‌ಕುಮಾರ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜ್ಯೋತಿಲಕ್ಷ್ಮಿ ಕೊಲೆಯ ನಂತರ ಆತ ದೊರೆಸಾನಿಪಾಳ್ಯ ಹಾಗೂ ವೆಂಕಟಾದ್ರಿ ಲೇ­ಔಟ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ.

ಹೀಗಾಗಿ ಅನುಮಾನದಿಂದ ಆತನಿಗಾಗಿ ಹುಡುಕಾಟ ಆರಂಭಿಸಲಾಯಿತು. ಆತನ ಮೊಬೈಲ್‌ ಸಂಖ್ಯೆ ಮತ್ತು ಕರೆಗಳ ಮಾಹಿತಿ ಆಧರಿಸಿ, ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT