ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಟಾಟಾ ಸನ್ಸ್' ಅಧ್ಯಕ್ಷ ಸೈರಸ್ ಮಿಸ್ತ್ರಿ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉಪ್ಪಿನಿಂದ ಸಾಫ್ಟ್‌ವೇರ್‌ವರೆಗೂ ವಿವಿಧ ಕಂಪೆನಿಗಳನ್ನು ಹೊಂದಿರುವ, 10 ಸಾವಿರ ಕೋಟಿ ಡಾಲರ್ ಮೌಲ್ಯದ `ಟಾಟಾ   ಸನ್ಸ್' ಕಂಪೆನಿ ಸಮೂಹದ  ಅಧ್ಯಕ್ಷರಾಗಿ ಸೈರಸ್ ಪಿ.ಮಿಸ್ತ್ರಿ(44)  ಮಂಗಳವಾರ ಅಧಿಕೃತವಾಗಿ ನೇಮಕಗೊಂಡಿದ್ದಾರೆ. `ಟಾಟಾ ಸನ್ಸ್' ನಿರ್ದೇಶಕ ಮಂಡಳಿ ಮಿಸ್ತ್ರಿ ಅವರ ನೇಮಕವನ್ನು ಮಂಗಳವಾರ ಪ್ರಕಟಿಸಿದೆ.

ರತನ್ ಟಾಟಾ ಅವರು ಸಮೂಹದ ಅಧ್ಯಕ್ಷ ಹುದ್ದೆಯಿಂದ ಡಿ. 28 ರಂದು ನಿವೃತ್ತರಾದರೂ ಕಂಪೆನಿಯ ವಿಶ್ರಾಂತ ಅಧ್ಯಕ್ಷರಾಗಿ ಮುಂದುವರೆಯುವರು. ಡಿ. 28ರಂದು ಸೈರಸ್ ಮಿಸ್ತ್ರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವರು ಎಂದು ಕಂಪೆನಿ ಹೇಳಿದೆ.ಮಿಸ್ತ್ರಿ ಅವರನ್ನು ರತನ್ ಟಾಟಾ ಅವರ ಉತ್ತರಾಧಿಕಾರಿಯಾಗಿ ನವೆಂಬರ್‌ನಲ್ಲಿಯೇ ಆಯ್ಕೆ ಮಾಡಲಾಗಿತ್ತು. ಜತೆಗೆ `ಟಾಟಾ ಸನ್ಸ್' ಉಪಾಧ್ಯಕ್ಷರಾಗಿ ನೇಮಿಸಲಾಗಿತ್ತು. ಮಿಸ್ತ್ರಿ ಒಡೆತನದ `ಶರ್ಪೊಜಿ ಪಲ್ಲೊಂಜಿ  ಅಂಡ್ ಕಂಪೆನಿ' ಟಾಟಾ ಸನ್ಸ್ ಸಮೂಹದಲ್ಲಿ ಶೇ 18ರಷ್ಟು ಗರಿಷ್ಠ ಪಾಲು ಹೊಂದಿದೆ.

ಡಿ. 28ರಿಂದ ಜಾರಿಗೆ ಬರುವಂತೆ ಮಿಸ್ತ್ರಿ ಅವರನ್ನು ಅಧ್ಯಕ್ಷರಾಗಿ ಟಾಟಾ ಮೋಟಾರ್ಸ್ ನವೆಂಬರ್ ಮೊದಲ ವಾರದಲ್ಲಿಯೇ ನೇಮಕ ಮಾಡಿದ್ದಿತು. ಮಿಸ್ತ್ರಿ ಅವರು `ಟಾಟಾ ಸ್ಟೀಲ್' ಮತ್ತು `ಟಾಟಾ ಕೆಮಿಕಲ್ಸ್' ಕಂಪೆನಿಗಳ ಅಧ್ಯಕ್ಷರಾಗಿಯೂ ಈಗಾಗಲೇ ನೇಮಕಗೊಂಡಿದ್ದಾರೆ.

ಕಳೆದ ತಿಂಗಳು ರತನ್ ಟಾಟಾ, `ಟಾಟಾ ಗ್ಲೋಬಲ್ ಬ್ರಿವರೇಜಸ್' ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದು, ಉತ್ತರಾಧಿಕಾರಿ ಮಿಸ್ತ್ರಿ ಅವರಿಗೆ ದಾರಿ ಮಾಡಿಕೊಟ್ಟಿದ್ದರು. ಇದೇ ವೇಳೆ, `ಮತ್ತೊಬ್ಬರ ನೆರಳನ್ನು ಹಿಂಬಾಲಿಸದೆ ಸ್ವಂತ ಹೆಜ್ಜೆ ಗುರುತು ಮೂಡಿಸುವಂತೆ'ಯೂ ಅವರು ಉತ್ತರಾಧಿಕಾರಿ ಕಿವಿಮಾತು ಹೇಳಿದ್ದರು.

`ಟಾಟಾ ಇಂಡಿಯನ್ ಹೋಟೆಲ್ಸ್' ಅಧ್ಯಕ್ಷರಾಗಿ ಮತ್ತು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪೆನಿ `ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್'(ಟಿಸಿಎಸ್)  ಉಪಾಧ್ಯಕ್ಷರಾಗಿಯೂ ಮಿಸ್ತ್ರಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.

ಟಾಟಾ ಸಮೂಹದ ಎಲ್ಲ ಕಂಪೆನಿಗಳ ಪ್ರವರ್ತಕ ಸಂಸ್ಥೆಯಾಗಿ `ಟಾಟಾ ಸನ್ಸ್' ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ಶೇ 66ರಷ್ಟು ಪಾಲು ಟಾಟಾ  ಕುಟುಂಬದ ಸದಸ್ಯರದ್ದೇ ಆಗಿದೆ. ದೇಶ- ವಿದೇಶದಲ್ಲಿ ನೋಂದಾಯಿತ ಟಾಟಾ ಹೆಸರು ಮತ್ತು ಟಾಟಾ ಟ್ರೇಡ್ ಮಾರ್ಕ್ ಹಕ್ಕನ್ನು `ಟಾಟಾ ಸನ್ಸ್' ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT