ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್ ಅನುಮೋದನೆ; ಜಿಲ್ಲಾಧಿಕಾರಿ ಆದೇಶ ನೀಡಿಲ್ಲ

Last Updated 16 ಫೆಬ್ರುವರಿ 2011, 8:20 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರಸಭೆಯ ಕಾಮಗಾರಿಗಳ ಟೆಂಡರ್ ಅನುಮೋದನೆ ವಿಚಾರದಲ್ಲಿ ಜಿಲ್ಲಾಧಿಕಾರಿ ಯಾವುದೇ ಆದೇಶ ನೀಡಿಲ್ಲ. ಹಾಗೆಯೇ ಅವರ ವಿರುದ್ಧ ನಗರಸಭೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂದು ನಗರಸಭಾ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ ಸ್ಪಷ್ಟಪಡಿಸಿದರು.ಚರ್ಚೆಯ ಸಂದರ್ಭದಲ್ಲಿ ಎಸ್‌ಆರ್ ದರ ಕುರಿತಂತೆ ಜಿಲ್ಲಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದನ್ನು ನಗರಸಭೆಯ ವಿಶೇಷ ಸಭೆಯಲ್ಲಿ ಚರ್ಚಿಸಲಾಯಿತಷ್ಟೇ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕರ್ನಾಟಕ ಪೌರಾಡಳಿತ ನಿಯಮ 2008ರಂತೆ ನಗರಸಭೆಯಿಂದ ಕೈಗೊಳ್ಳುವ ಯಾವುದೇ ಕಾಮಗಾರಿ ನಿರ್ವಹಣೆಯ ಟೆಂಡರ್ ಅನಮೋದನೆಗೆ ಸಂಬಂಧಪಟ್ಟಂತೆ ಎಸ್‌ಆರ್ ದರದ ಶೇ.8ರವರೆಗೆ ಹೆಚ್ಚಿನ ಟೆಂಡರ್ ದರವನ್ನು ಅನುಮೋದಿಸುವ ಅಧಿಕಾರ ನಗರಸಭೆ ಕೌನ್ಸಿಲ್‌ಗೆ ಇರುತ್ತದೆ. ಅಲ್ಲದೇ, ಈ ಹಿಂದಿನಿಂದಲೂ ಆಯಾ ಕಾಮಗಾರಿಗೆ ಸಂಬಂಧಪಟ್ಟಂತೆ ದರ ಸಂಧಾನ ಮಾಡಿ ಟೆಂಡರ್ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ನಗರಸಭೆಯ ಕಾಮಗಾರಿಗಳಿಗೆ ಗುತ್ತಿಗೆದಾರರು ಟೆಂಡರ್ ಹಾಕಲು ಬರುತ್ತಿಲ್ಲ. ರಸ್ತೆ ಸೇರಿದಂತೆ ನಗರಸಭೆಯ ಎಂಟು ಕಾಮಗಾರಿಗಳಿಗೆ ಗುತ್ತಿಗೆದಾರರೇ ಇಲ್ಲ. ಕೆಲವೊಮ್ಮೆ ಕೆಲವು ಗುತ್ತಿಗೆದಾರರು ಎಸ್‌ಆರ್ ದರಗಿಂತ ಕಡಿಮೆಗೆ ಟೆಂಡರ್ ತೆಗೆದುಕೊಳ್ಳುತ್ತಾರೆ. ಅಂತಹವರಿಗೆ ಗುಣಮಟ್ಟದ ಕಾಮಗಾರಿಗಳಾಗಲಿ ಎನ್ನುವ ದೃಷ್ಟಿಯಿಂದ ಎಸ್‌ಆರ್ ದರಕ್ಕಿಂತ ಹೆಚ್ಚಿನ ದರ ನೀಡಲಾಗಿದೆ ಎಂದು ಗಂಗಾಧರಪ್ಪ ನಗರಸಭೆ ನಿಲುವನ್ನು ಸಮರ್ಥಿಸಿಕೊಂಡರು. 

ಸಚಿವ ಸುರೇಶ್‌ಕುಮಾರ್ ಯಾವುದೋ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಪ್ರತಿಕ್ರಿಯಿಸಿರಬಹುದು. ಆದರೆ, ಅವರು ನಗರಸಭೆ ಈ ಬಾರಿ ರಾಜ್ಯದಲ್ಲಿ ಉತ್ತಮ ಕಾರ್ಯನಿರ್ವಹಣೆಗೆ ಮೂರನೇ ಬಹುಮಾನ ಪಡೆದಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.ಪ್ರಶಸ್ತಿಗೆ ಹಿಂದಿನ ಅಧ್ಯಕ್ಷರಾದ ಎನ್.ಜೆ. ರಾಜಶೇಖರ್, ಎಂ. ಶಂಕರ್, ಆಯುಕ್ತರು, ಸಿಬ್ಬಂದಿ, ಸದಸ್ಯರು ಹಾಗೂ ಸಹಕರಿಸಿದ ನಾಗರಿಕರು ಕಾರಣ ಎಂದು ಸ್ಮರಿಸಿದರು.

ನಗರಸಭೆ ಸದಸ್ಯರಾದ ಚನ್ನಬಸಪ್ಪ, ಎನ್.ಜೆ. ರಾಜಶೇಖರ್ ಮಾತನಾಡಿ, ವಿಶೇಷ ಕಾಮಗಾರಿಗಳಿಗೆ ಎಸ್‌ಆರ್ ದರಕ್ಕಿಂತ ಶೇ.8ರವರೆಗೆ ಹೆಚ್ಚು ನೀಡುವ ಅಧಿಕಾರ ನಗರಸಭೆಗಿದೆ. ಈ ಬಗ್ಗೆ ಚರ್ಚೆ ಆರಂಭವಾಗಿರುವುದು ಒಳ್ಳೆಯ ಸೂಚನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿಯೂ ಈ ಕುರಿತಂತೆ ಚರ್ಚಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸತ್ಯನಾರಾಯಣ, ಆಯುಕ್ತ ಬಿ. ಜಯಣ್ಣ, ಸ್ಥಾಯಿ ಸಮಿತಿ ಸದಸ್ಯ ಮೋಹನ್ ರೆಡ್ಡಿ, ಸದಸ್ಯರಾದ ಗನ್ನಿ ಶಂಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT