ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಂಬರು ಕಿತ್ತು ಸೇತುವೆಗೆ ಅಪಾಯ

Last Updated 1 ಅಕ್ಟೋಬರ್ 2011, 9:55 IST
ಅಕ್ಷರ ಗಾತ್ರ

ಕಾರವಾರ: ರಾಜ್ಯದ ಎರಡನೇ ಅತಿದೊಡ್ಡ `ಶರಾವತಿ~ ಸೇತುವೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ- 17ರಲ್ಲಿ ಇರುವ ಜಿಲ್ಲೆಯ ನಾಲ್ಕು ಸೇತುವೆಗಳ ಮೇಲಿನ ಡಾಂಬರು ಕಿತ್ತು ಹೋಗಿ ಸ್ಲ್ಯಾಬ್ ಮಾತ್ರ ಕಾಣುತ್ತಿದ್ದು ಅಪಾಯದ ಭೀತಿ ಎದುರಾಗಿದೆ.

ಪಣಜಿ- ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-17ರಲ್ಲಿರುವ ಬಡಗಣಿ, ಅಘನಾಶಿನಿ (ಕುಮಟಾ), ಗಂಗಾವಳಿ (ಅಂಕೋಲಾ) ಸೇತುವೆಗಳ ಸ್ಲ್ಯಾಬ್ ಮೇಲೆ ಹಾಕಿದ್ದ ಸುಮಾರು 3-4 ಇಂಚು ದಪ್ಪ ಡಾಂಬರು ಕಿತ್ತು ಹೋಗಿದೆ.

ಮಳೆಗಾಲ ಆರಂಭಕ್ಕೂ ಮುನ್ನ ಸೇತುವೆ ಮೇಲೆ ಅಲ್ಲಲ್ಲಿ ಡಾಂಬರು ಹೋಗಿತ್ತು ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಿರಂತರವಾಗಿ ಮಳೆ ಸುರಿದಿದ್ದರಿಂದ ಸಂಪೂರ್ಣ ಹಾಳಾಗಿದೆ. 

ಭಟ್ಕಳ ತಾಲ್ಲೂಕಿನ ಮೂಡಭಟ್ಕಳ, ವೆಂಕಟಾಪುರ, ಅಂಕೋಲಾ ತಾಲ್ಲೂಕಿನ ಬಾಳೆಗುಳಿ ಸಮೀಪವಿರುವ ಸೇತುವೆಗಳ ಮೇಲೆ ಡಾಂಬರು ಕಿತ್ತುಹೋಗಿ ದುಃಸ್ಥಿತಿಗೆ ತಲುಪಿದ ನಂತರ ಮೇ ನಲ್ಲಿ ದುರಸ್ತಿ ಮಾಡಲಾಗಿತ್ತು. ಈಗ ಮೂರು ತಿಂಗಳ ಅವಧಿಯೊಳಗೆ ನಾಲ್ಕು ಸೇತುವೆಗಳ ಡಾಂಬರು ಕಿತ್ತುಹೋಗಿ ದುರಸ್ತಿಗಾಗಿ ಕಾದಿವೆ.

ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಸಹಜವಾಗಿಯೇ ವಾಹನಗಳು ವೇಗವಾಗಿ ಸಂಚರಿಸುತ್ತವೆ. ಹೀಗೆ ವಾಹನಗಳು ಹೋಗುವಾಗ ಬರುವ ಧಡ್‌ಧಡ್ ಶಬ್ದಕ್ಕೆ ಪ್ರಯಾಣಿಕರು ಹೌಹಾರಿ ಬೆಚ್ಚಿ ಬೀಳುವಂತಾಗಿದೆ. ಭಾರಿ ವಾಹನಗಳು ವೇಗವಾಗಿ ಸಂಚರಿಸಿದಾಗ ಸೇತುವೆಯೇ ಅಲ್ಲಾಡಿದ ಅನುಭವ ಆಗುತ್ತದೆ. 

ಸೇತುವೆ ಮೇಲೆ ಪ್ರತಿನಿತ್ಯ ಸಂಚರಿಸುವ ವಾಹನಗಳು ಗುಂಡಿಗಳಲ್ಲಿ ಏಳುತ್ತ, ಬೀಳುತ್ತ ಸಾಗುವಾಗ ಎಂಜಿನ್, ಇತರ ಭಾಗಗಳಲ್ಲಿ ದೋಷ ಕಂಡುಬಂದು ಕೆಟ್ಟು ರಿಪೇರಿಗಾಗಿ ವಾಹನಗಳನ್ನು ಮಾರ್ಗ ಮಧ್ಯೆ ನಿಲ್ಲಿಸುವ ದೃಶ್ಯ ಹೆದ್ದಾರಿಯಲ್ಲಿ ಸಾಮಾನ್ಯವಾಗಿದೆ.

`ಸೇತುವೆ ಮೇಲೆ ಕಾಂಕ್ರೀಟ್‌ನೊಂದಿಗೆ ಟಾರ್ ಕುಳಿತುಕೊಳ್ಳುತ್ತಿಲ್ಲ. ಹೀಗಾಗಿ ಪ್ರತಿ ಮಳೆಗಾಲದಲ್ಲೂ ಡಾಂಬರು ಕಿತ್ತು ಹೋಗುತ್ತಿದೆ. ಸೇತುವೆ ಮೇಲೆ `ಮ್ಯಾಸ್ಟಿಕ್ ಆ್ಯಸ್ಫಾಲ್ಟ್~ (ಕಂದು ಬಣ್ಣದ ಅಂಟು ಮಿಶ್ರಿತ ಡಾಂಬರು) ಹಾಕುವುದೊಂದೇ ಇದಕ್ಕೆ ಪರಿಹಾರ. ಡಾಂಬರು ಕಿತ್ತು ಹೋಗಿರುವುದರಿಂದ ಸೇತುವೆಗೆ ಯಾವುದೇ ರೀತಿಯ ಧಕ್ಕೆಯಿಲ್ಲ~ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು.

ಜಿಲ್ಲೆಯ ಹೆದ್ದಾರಿಯಲ್ಲಿರುವ ಎಲ್ಲ ಪ್ರಮುಖ ಸೇತುವೆಗಳ ಮೇಲೆ ಮ್ಯಾಸ್ಟಿಕ್ ಆ್ಯಸ್ಫಾಲ್ಟ್ ಹಾಕಲು ರೂ 70 ಲಕ್ಷ ಮೊತ್ತದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT