ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಂಗ್ರಿ-ಬಿರಾದಾರ್‌ಗೆ ರಂಗದ ಗರಿ!

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಿನಿಮಾಗಳ ಹೀರೋ ಹೀರೋಯಿನ್‌ಗಳಿಗಿಂತ ಪೋಷಕ, ಹಾಸ್ಯ ಕಲಾವಿದರೇ ಹೆಚ್ಚು ಪ್ರತಿಭಾವಂತರು. ಬಹುತೇಕ ಹೀರೋಗಳ ವಿಷಯದಲ್ಲಿ ಇದು ಸತ್ಯ. ಹೀರೋ ಅಥವಾ ಹೀರೋಯಿನ್‌ಗೆ ಆಕಾರ, ಬಣ್ಣ, ಒಂದಿಷ್ಟು ಹಾವಭಾವ ಇದ್ದರೆ ಹೇಗೋ ನಡೆದುಬಿಡಬಹುದು! ಆದರೆ ಹಾಸ್ಯ ಕಲಾವಿದರಿಗೆ, ಪೋಷಕ ನಟ ನಟಿಯರಿಗೆ ಈ ವಿಷಯದಲ್ಲಿ ರಿಯಾಯಿತಿ ಇಲ್ಲ. ಅವರು ಅಪ್ಪಟ ಪ್ರತಿಭಾವಂತರಾಗಿರಲೇಬೇಕು. ಕನ್ನಡ ಚಲನಚಿತ್ರರಂಗದಲ್ಲಿ ಇಂತಹ ಪ್ರತಿಭಾವಂತರ ಹಿಂಡೇ ಇದೆ. ಅವರಲ್ಲಿ ಬಹುತೇಕ ಕಲಾವಿದರು ರಂಗಭೂಮಿಯ ಹಿನ್ನೆಲೆಯವರು.
 
ಸಿನಿಮಾದ ಅನಿಶ್ಚಿತ ನೆಲೆಯಲ್ಲಿ ಮತ್ತೆ ಮತ್ತೆ ಅವರ ಕೈಹಿಡಿದು ಕಾಪಾಡುವುದು ರಂಗಭೂಮಿಯೇ. ಅಂತಹ ಇಬ್ಬರು ಪ್ರತಿಭಾವಂತ ಸಿನಿಮಾ ನಟರಾದ ಡಿಂಗ್ರಿ ನಾಗರಾಜ ಹಾಗೂ ವೈಜನಾಥ ಬಿರಾದಾರ ಅವರಿಗೆ ಈ ಬಾರಿಯ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ.
 
ಒಂದಷ್ಟು ಜನಪ್ರಿಯತೆ ಇವರಿಗೆ ಸಿನಿಮಾದಿಂದ ಲಭಿಸಿದೆ. ಅಷ್ಟನ್ನೇ ನೆಚ್ಚಿಕೊಂಡಿದ್ದರೆ ಅವರ ಹೊಟ್ಟೆಬಟ್ಟೆಗೆ ಸಾಕಾಗುತ್ತಿರಲಿಲ್ಲ. ಸಿನಿಮಾ, ನಾಟಕ, ರಸಮಂಜರಿ - ಒಟ್ಟು ಕಾರ್ಯಕ್ರಮಗಳಲ್ಲಿ ಅವರ ತುತ್ತಿನ ಚೀಲ ತುಂಬುತ್ತದೆ.

ಅನುಪಮ ಡಿಂಗ್ರಿ
ಡಿಂಗ್ರಿ ನಾಗರಾಜ ಇದುವರೆಗೆ ನಟಿಸಿದ ಚಿತ್ರಗಳ ಸಂಖ್ಯೆ 380 ಮೀರುತ್ತದೆ. `ಪರಸಂಗದ ಗೆಂಡೆತಿಮ್ಮ~ದಲ್ಲಿ ಲೋಕೇಶ್ ಜತೆಗಾರನಾಗಿ, `ಅನುಪಮಾ~ ಸಿನಿಮಾದ ಬರ‌್ತಾಳೆ ಕನಸಸಿನ ರಾಣಿ ಹಾಡಿಗೆ ಹೆಜ್ಜೆ ಹಾಕಿದ ದೃಶ್ಯಗಳನ್ನು ಸಿನಿ ರಸಿಕರು ಇನ್ನೂ ಮರೆತಿಲ್ಲ.
 
ಮನಕಲಕುವ, ನಕ್ಕು ನಲಿಸುವ ಇಂತಹ ನೂರಾರು ದೃಶ್ಯಗಳನ್ನು ನಿರ್ದೇಶಕರು ಚಿತ್ರೀಕರಿಸಿಕೊಂಡಿದ್ದಾರೆ, ನಿಜ. ಆದರೆ ಚಿತ್ರ ಬಿಡುಗಡೆಯಾದಾಗ ಚಿತ್ರಿಸಿದ ಎಲ್ಲ ದೃಶ್ಯಗಳು ಇರುತ್ತವೆಂಬ ಖಾತ್ರಿಯಿಲ್ಲ! ಇಂತಹ ಬೆಚ್ಚಿಬೀಳಿಸುವ ಸಂಗತಿಯನ್ನು ಸ್ವತಃ ನಾಗರಾಜು ಅವರೇ ಹೊರಗೆಡಹುತ್ತಾರೆ.

ಹಾಸ್ಯ ನಟರ ದೃಶ್ಯಗಳು ಹೆಚ್ಚಿದ್ದರೆ ತಮ್ಮ ಪ್ರಾಮುಖ್ಯತೆ ಕಡಿಮೆಯಾಗಿಬಿಡುತ್ತದೆ ಎಂಬ ಕಾರಣಕ್ಕೆ ಕೆಲವು ಹೀರೋಗಳೇ ಚಿತ್ರೀಕರಣ ಆಗಿದ್ದನ್ನೂ ತೆಗೆಸಿಹಾಕಿಬಿಡುತ್ತಾರಂತೆ! ಈ ಪ್ರವೃತ್ತಿ ಶುರುವಾಗಿರುವುದು ಇತ್ತೀಚಿನ ವರ್ಷಗಳಲ್ಲಿ.

ರಂಗಭೂಮಿಯ ಗರಡಿಯಲ್ಲಿ ಸಖತ್ ಸಾಮು ಮಾಡಿಯೇ ಅಖಾಡಕ್ಕಿಳಿದಿರುವ ನಾಗರಾಜು ಅವರಂತಹ ಅಪ್ಪಟ ಪ್ರತಿಭಾವಂತರಿಗೆ ಈ ತೆರನ ಭಯ, ಕೀಳರಿಮೆ ಕಾಡಲು ಸಾಧ್ಯವಿಲ್ಲ. ಬೆಂಗಳೂರಿನ ಕೇಶವಲು ನಾಯ್ಡು- ಶಾರದಮ್ಮ ದಂಪತಿಗೆ 1948ರಲ್ಲಿ ಜನಿಸಿದ ನಾಗರಾಜು ಪ್ರೌಢಶಾಲೆ ಓದುವ ಹಂತದಲ್ಲೇ ಬಾಲನಟನಾಗಿ ಸುಬ್ಬಯ್ಯನಾಯ್ಡು ನಾಟಕ ಕಂಪೆನಿ ಸೇರಿದರು.
 
ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ 10 ವರ್ಷ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯ ಕರಗತ ಮಾಡಿಕೊಂಡವರು. `ಕೃಷ್ಣಲೀಲ~ ನಾಟಕದ ಮಕರಂದ, `ಮಹಾತಾಯಿ~ ನಾಟಕದ ಉಡಾಳನ ಪಾತ್ರ ಹೆಚ್ಚು ಹೆಸರು ತಂದುಕೊಟ್ಟಿದ್ದವು. ನಂತರ ಹೊನ್ನಪ್ಪ ಭಾಗವತರ್, ಯೋಗನರಸಿಂಹ, ಮಾಸ್ಟರ್ ಹಿರಣ್ಣಯ್ಯ ಮಿತ್ರಮಂಡಳಿಯಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಬಣ್ಣ ಹಚ್ಚಿ ಪರಿಣತ ಕಲಾವಿದನಾದ ನಾಗರಾಜು ಯಾವುದೇ ಪಾತ್ರಕ್ಕೆ ಜೀವತುಂಬುವ ಶಕ್ತಿ ಪಡೆದರು.
 
ಈ ಮಧ್ಯೆ 1977ರಲ್ಲಿ `ಪರಸಂಗದ ಗೆಂಡೆತಿಮ್ಮ~ನ ಮೂಲಕ ಚಿತ್ರರಂಗ ಪ್ರವೇಶಿಸಿ, ಹಾಸ್ಯ ಪಾತ್ರಗಳ ಜತೆಗೆ ಪೋಷಕ ಪಾತ್ರಗಳಲ್ಲೂ ನಟಿಸುತ್ತ ಆ ಕಾಲದ ಬಹುತೇಕ ಸಿನಿಮಾಗಳ ಅನಿವಾರ್ಯ ಕಲಾವಿದನಾದರು.

ಆದರೂ ನಾಟಕ ಕಂಪೆನಿಯ ನಂಟು ಬಿಡಲಿಲ್ಲ. ಬಿಡದೇ ಇರುವಂತಹ ಅನಿವಾರ್ಯತೆಯೂ ಇತ್ತು. ಈ ಮಧ್ಯೆ `ಡಿಂಗ್ರಿ ನಾಗರಾಜ ಮಿತ್ರ ಮಂಡಳಿ~ ಸ್ಥಾಪಿಸಿ ನಿರಂತರವಾಗಿ ನಾಟಕಗಳಲ್ಲಿ ಮಾಡುತ್ತಲೇ ಇದ್ದಾರೆ. ಮಧ್ಯೆ ಆಗಾಗ ನಾಟಕ ಕಂಪೆನಿಗಳ ಅತಿಥಿ ನಟನಾಗಿಯೂ ಆಹ್ವಾನ ಇದ್ದೇ ಇರುತ್ತದೆ.
 
`ಸದಾರಮೆ~ಯ ಆದಿಮೂರ್ತಿ, `ನನ ಗಂಡ ಬಲು ಭಂಡ~ದ ಗುಂಡ, `ಚಿನ್ನದ ಗೊಂಬೆ~ಯ ಕುರಟ್ಟಿ ಮಾಸ್ತರ್, `ಚೆನ್ನಪ್ಪ ಚೆನ್ನೇಗೌಡ~ ನಾಟಕದ ಪಕೀರನಾಗಿ ನಾಡಿನಾದ್ಯಂತ ಜನಪ್ರಿಯ ನಟನಾಗಿದ್ದಾರೆ. ತಿಂಗಳಲ್ಲಿ ಕನಿಷ್ಠ 10-15ದಿನಗಳ ನಾಟಕ ಇದ್ದೇ ಇರುತ್ತವೆ.

ಆದರೆ ಅಷ್ಟು ದಿನಗಳ ಚಿತ್ರೀಕರಣ ಇರುವುದಿಲ್ಲ! ಹೆಚ್ಚು ಸಂಭಾವನೆ ಕೊಡಲು ಮನಸ್ಸಿಲ್ಲದ ನಿರ್ಮಾಪಕರುಗಳು ನಾಗರಾಜ ಅಂತಹ ಕಲಾವಿದರ ದೃಶ್ಯಗಳನ್ನು ಭರದಿಂದ ಚಿತ್ರಿಸಿ (ರೀಲು ಸುತ್ತುವುದು ಎನ್ನುತ್ತಾರೆ) ವಾಪಸ್ ಕಳಿಸುವುದೇ ಹೆಚ್ಚು.

ನಾಟಕದಲ್ಲಿ ನಟನ ಪ್ರವೇಶ ಆದಕೂಡಲೇ ಪ್ರೇಕ್ಷಕ ಚಪ್ಪಾಳೆ ತಟ್ಟುವುದೇನು? ಸಿಳ್ಳೆ ಹೊಡೆಯುವುದೇನು? ಸಿನಿಮಾದಲ್ಲಿ ಏನಿದೆ? ಎಷ್ಟಿದ್ದರೂ ಕ್ಯಾಮೆರಾಕ್ಕೆ ತಾನೇ ನಟಿಸುವುದು. ಆದ್ದರಿಂದಲೇ `ನಾಟಕ ಗಂಡು, ಸಿನಿಮಾ ಹೆಣ್ಣು~ ಎನ್ನುತ್ತಲೇ ಮತ್ತೊಂದು ನಾಟಕ ಪ್ರದರ್ಶನಕ್ಕೆ ಅಣಿಯಾಗುತ್ತಾರೆ ನಾಗರಾಜು.

ಪ್ರತಿಭೆಯ ಕುದುರೆಯನೇರಿದ ವೈಜನಾಥ!
ಭಿಕ್ಷುಕನ ಪಾತ್ರದಲ್ಲಿ ತುಸು ಹೆಚ್ಚಾಗಿ ಅಭಿನಯಿಸಿದರು ಎಂಬ ನೆಪದ ಮೇಲೆ ವೈಜನಾಥ ಬಿರಾದಾರ ಅವರಂತಹ ಅಸಾಮಾನ್ಯ ಪ್ರತಿಭೆಯನ್ನು ಚಿತ್ರರಂಗ ಅಕ್ಷರಶಃ ಭಿಕ್ಷುಕನಂತೆ ನಡೆಸಿಕೊಂಡಿತೇ? ಹಾಗೊಂದು ಅನುಮಾನ ಬಂದರೆ ಅದು ಸಹಜ. ಸ್ವತಃ ಬಿರಾದಾರ ಅವರಿಗೆ ಅಂತಹ ಯಾವುದೇ ಕೀಳರಿಮೆ ಇಲ್ಲ.
 
ತನ್ನೊಳಗಿನ ನಟನಾ ಪ್ರತಿಭೆ ಬಗ್ಗೆ ಅವರಿಗೆ ಅದಮ್ಯ ಆತ್ಮವಿಶ್ವಾಸ ಇದೆ. `ಭಿಕ್ಷುಕ ಆದರೆ ಏನಾಯಿತು? ಶಿವ ಕೊಡುವ ಭಿಕ್ಷೆ ಅದು...~ ಎಂದು ಪರರ ಆರೋಪಿತ ಕೀಳರಿಮೆಯನ್ನು ಮೀರುವ ಯತ್ನವನ್ನು ಅವರು ಮಾಡುತ್ತಲೇ ಇರುತ್ತಾರೆ.

ಗಿರೀಶ ಕಾಸರವಳ್ಳಿ ನಿರ್ದೇಶನದ `ಕನಸೆಂಬೋ ಕುದುರೆಯನೇರಿ~ ಸಿನಿಮಾಕ್ಕೆ ರಾಷ್ಟ್ರಮಟ್ಟದ ಸ್ಪರ್ಧೆಯ ಅತ್ಯುತ್ತಮ ನಟ ಪ್ರಶಸ್ತಿ ಬಿರಾದಾರರಿಗೆ ಕೂದಲೆಳೆಯ ಅಂತರದಲ್ಲಿ ತಪ್ಪಿತೋ ತಪ್ಪಿಸಲಾಯಿತೋ ಗೊತ್ತಿಲ್ಲ.

ಯಾಕೆಂದರೆ ಬಿರಾದಾರ ಅವರ ಜತೆ ಸ್ಪರ್ಧೆಯಲ್ಲಿದ್ದದ್ದು ಬಿಗ್ ಬಿ ಅಮಿತಾಭ್ ಬಚ್ಚನ್. ಕೊನೆಗೂ ಅದು ಬಚ್ಚನ್ ಪಾಲಾಯಿತು. ಒಂದು ಪಕ್ಷ ಆ ಪ್ರಶಸ್ತಿ ಬಿರಾದಾರ ಅವರಿಗೆ ಲಭಿಸಿದ್ದರೆ ಅವರ ಬೇಡಿಕೆ ಹೆಚ್ಚುತ್ತಿತ್ತೆ? ಸ್ವತಃ ಬಿರಾದಾರ ಅವರಿಗೆ ಅಂತಹ ಯಾವುದೇ ಭ್ರಮೆಗಳಿಲ್ಲ.
 
ಚೋಮನ ಪಾತ್ರಕ್ಕೆ ವಾಸುದೇವರಾವ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದರೂ, ಅವರಿಗೆ ಅವಕಾಶಗಳ ಬಾಗಿಲುಗಳನ್ನು ನಮ್ಮ ಸಿನಿಮಾರಂಗ ತೆರೆಯಲಿಲ್ಲ! ಎಂಬ ಜ್ವಲಂತ ಉದಾಹರಣೆ ಅವರ ಕಣ್ಣೆದುರಿಗಿದೆ. ಆದರೂ ಬಿರಾದಾರರ ಆತ್ಮವಿಶ್ವಾಸಕ್ಕೆ ಕುಂದಿಲ್ಲ. ಯಾಕೆಂದರೆ ಅವರೂ ರಂಗಭೂಮಿಯ ತಾಜಾ ಪ್ರತಿಭೆ.

ಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕು ತೇಗಂಪುರದ ಬಸಪ್ಪ- ನಾಗಮ್ಮ ಕೃಷಿ ಕೂಲಿಕಾರ ದಂಪತಿಗೆ ಜನಿಸಿದ ವೈಜನಾಥ ಚಿಕ್ಕ ವಯಸ್ಸಿನಲ್ಲಿಯೇ ಕೋಲಾಟ, ಡಪ್ಪಿನಾಟ, ನಾಟಕ, ಮೊಹರಂ ಪದಗಳ ಮೂಲಕ ಕಲಾಲೋಕಕ್ಕೆ ತೆರೆದುಕೊಂಡು, ಹದಿ ಹರೆಯದಲ್ಲೇ ಪಂಚಲಿಂಗೇಶ್ವರ ನಾಟ್ಯ ಸಂಘ ಸೇರಿ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯದ ತರಬೇತಿ ಪಡೆದವರು. ರಾಮರಾವ್ ದೇಸಾಯಿ, ವರವಿ ಫಕೀರಪ್ಪ, ಹೊಸಪೇಟೆ ಮರಿಯಣ್ಣ, ಎ.ಬಿ.ಸವಸುದ್ದಿ ಅವರ ನಾಟಕ ಕಂಪೆನಿಗಳ ವಿಭಿನ್ನ ಪಾತ್ರಗಳಲ್ಲಿ ಪಳಗಿ ಸಿನಿಮಾದ ಕನಸು ಕಂಡವರು.

1978ರಲ್ಲಿ ಎಂ.ಎಸ್.ಸತ್ಯು ನಿರ್ದೇಶನದ `ಬರ~ ಚಿತ್ರೀಕರಣ ಬೀದರನಲ್ಲಿ ನಡೆದಿತ್ತು. ನಾಟಕ ಕಂಪೆನಿಯಿಂದ ತವರಿಗೆ ಮರಳಿದ್ದ ವೈಜನಾಥ ಚಿತ್ರೀಕರಣದ ಸ್ಥಳಕ್ಕೆ ಹೋಗಿ ನಟ ಅನಂತನಾಗ್ ಅವರಿಗೆ ಆಪ್ತವಾದ ಮರಾಠಿ ಭಾಷೆಯಲ್ಲಿ ಮಾತನಾಡಿಸಿ ಆತ್ಮೀಯರಾದರು.
 
ವೈಜನಾಥರ ನಾಟಕ ಕಂಪೆನಿಯ ಹಿನ್ನೆಲೆಯೇ ಅವರಿಗೆ ಪಾತ್ರವೊಂದನ್ನು ಗಿಟ್ಟಿಸಿಕೊಟ್ಟಿತು. ಈ ಮಧ್ಯೆ ತೆಕ್ಕಟ್ಟೆ ಗೋಪಾಲ ಎಂಬ ಕಲಾವಿದರನ್ನು ನೋಡಿ ತಾವೂ ಏಕಪಾತ್ರಾಭಿನಯ ಶುರು ಮಾಡಿಕೊಂಡು ಶಾಲೆ ಕಾಲೇಜುಗಳಲ್ಲಿ ಪ್ರದರ್ಶನ ನೀಡಲು ಆರಂಭಿಸಿದರು.

ತೆಕ್ಕೆಟ್ಟೆಯಿಂದ ಶಂಖನಾದ ಅರವಿಂದ ಹಾಗೂ ಉಮೇಶ ಕುಲಕರ್ಣಿಯ ಪರಿಚಯವಾಗಿ ಸಿನಿಮಾದಲ್ಲಿ ಒಂದೊಂದೇ ಮೆಟ್ಟಲೇರುತ್ತ, `ಅಜ ಗಜಾಂತರ~, `ಓ ಮಲ್ಲಿಗೆ~, `ಜಾಕಿ~, `ಲಕ್ಕಿ~ವರೆಗೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದರೂ, ನಾಟಕವನ್ನು ನೆಚ್ಚಲೇಬೇಕಾಯಿತು! `ಸಂಗಮೇಶ್ವರ ಕಲಾವೃಂದ~ ಸ್ಥಾಪಿಸಿ ನಿರಂತರವಾಗಿ ನಾಟಕಗಳನ್ನು ಅಭಿನಯಿಸುತ್ತಲೇ ಹೋದರು. ಮಧ್ಯೆ ರಸಮಂಜರಿ ಕಾರ್ಯಕ್ರಮ. ಎಲ್ಲ ಸೇರಿ ಬದುಕಿನ ಜಟಕಾ ಬಂಡಿ ಚಲಿಸಿದೆ.

ಉರ್ದು ಮಿಶ್ರಿತ ಕನ್ನಡ ಭಾಷೆಯಾಡುವ ರಾಜ್ಯದ ತುತ್ತ ತುದಿಯ ಜಿಲ್ಲೆಯಿಂದ ಬಂದ ಬಿರಾದಾರರು, ರಾಜ್ಯದ ಬೇರೆ ಬೇರೆ ಭಾಗದ ಆಡುಭಾಷೆಯನ್ನು ಆಡುವುದರಲ್ಲಿ ಪ್ರವೀಣರು. ಅದನ್ನು ಅವರ ಬಾಯಿಂದ ಕೇಳಿಯೇ ಆಸ್ವಾದಿಸಬೇಕು. ಬಿರಾದಾರರ ಪ್ರತಿಭೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಚಿತ್ರರಂಗ ವಿಫಲವಾಗಿದೆ.
 
ಬಿರಾದಾರ, ನಾಗರಾಜ ಅವರಂತಹ ಪ್ರತಿಭಾವಂತರನ್ನು ಸರಿಯಾಗಿ ಬಳಸಿಕೊಂಡಿದ್ದರೆ ನಮ್ಮ ಚಿತ್ರರಂಗ ಮತ್ತಷ್ಟು ಶ್ರೀಮಂತವಾಗುತ್ತಿತ್ತು. ನಟರ ಘನತೆಯೂ ಹೆಚ್ಚುತ್ತಿತ್ತು. ಆದರೆ ರಂಗಭೂಮಿ ಅವರ ಕೈಬಿಟ್ಟಿಲ್ಲ ಎಂಬುದೊಂದೇ ಆಶಾದಾಯಕ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT