ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ. ಬಿಡುಗಡೆಗೆ ನಕ್ಸಲ್‌ರಿಂದ ಹೊಸ 5 ಬೇಡಿಕೆ

Last Updated 18 ಫೆಬ್ರುವರಿ 2011, 19:10 IST
ಅಕ್ಷರ ಗಾತ್ರ

ಭುವನೇಶ್ವರ (ಐಎಎನ್‌ಎಸ್, ಪಿಟಿಐ): ನಕ್ಸಲರಿಂದ ಅಪಹರಣಕ್ಕೆ ಒಳಗಾಗಿರುವ ಮಾಲ್ಕನ್‌ಗಿರಿ ಜಿಲ್ಲಾಧಿಕಾರಿ ಹಾಗೂ ಕರ್ನಾಟಕದ ಅಳಿಯ ಆರ್. ವಿನೀಲ್ ಕೃಷ್ಣ ಮತ್ತು ಕಿರಿಯ ಎಂಜಿನಿಯರ್ ಪವಿತ್ರ ಮೋಹನ್ ಮಝಿ ಅವರ ಬಿಡುಗಡೆಗೆ ತೆರೆಮರೆಯಲ್ಲಿ ಭಾರಿ ಯತ್ನ ನಡೆದಿರುವಂತೆಯೇ, ಮಾಲ್ಕನ್‌ಗಿರಿಗೆ ರಾಜ್ಯದ ಹೊರಭಾಗದ ಸಂಪರ್ಕ ಕಡಿದು ಹಾಕಿರುವ ನಕ್ಸಲರು ಹೊಸದಾಗಿ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ನಕ್ಸಲರು ವಿಧಿಸಿದ ಗಡುವು ಶುಕ್ರವಾರ ಸಂಜೆಗೆ ಕೊನೆಗೊಂಡಿದ್ದು, ಅವರ ಬೇಡಿಕೆಗಳ ಈಡೇರಿಕೆಗಾಗಿ ನೀಡಿರುವ ಗಡುವನ್ನು ವಿಸ್ತರಿಸಬೇಕು ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮನವಿ ಮಾಡಿದ್ದಾರೆ.

‘ಇಬ್ಬರೂ ಅಧಿಕಾರಿಗಳಿಗೆ ಯಾವುದೇ ತೊಂದರೆ ನೀಡಬಾರದು. ಸಂಬಂಧಪಟ್ಟವರೊಂದಿಗೆ ಸಂಪರ್ಕ ಸಾಧಿಸಿ ಮಾತುಕತೆ ಮೂಲಕ ಅಪಹೃತರನ್ನು ಬಿಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ಹೇಳುವ ಮೂಲಕ ನಕ್ಸಲರ ಮತ್ತಷ್ಟು ಬೇಡಿಕೆಗಳಿಗೆ ಸ್ಪಂದಿಸುವ ಸೂಚನೆ ನೀಡಿದ್ದಾರೆ.

ಬೇಡಿಕೆಗಳು: ಸರ್ಕಾರವು ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಪಡಿಸಬೇಕು, ಗ್ರೀನ್ ಹಂಟ್ ಆಪರೇಷನ್ ಸ್ಥಗಿತಗೊಳಿಸಬೇಕು, ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಮತ್ತು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ನಕ್ಸಲೀಯರ ಬಗ್ಗೆ ಅನುಕಂಪ ಹೊಂದಿದವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂಬ ಹೊಸ ಬೇಡಿಕೆಗಳು ಸೇರಿವೆ.

ಜಿಲ್ಲಾಧಿಕಾರಿ ಅವರನ್ನು ಅಪಹರಿಸಿದ ಬುಧವಾರ ಸಂಜೆಯಿಂದೀಚೆಗೆ ನಕ್ಸಲರು ಒಟ್ಟು ಏಳು ಬೇಡಿಕೆಗಳನ್ನು ಮುಂದಿಟ್ಟಂತಾಗಿದೆ. ನಕ್ಸಲ್ ವಿರೋಧಿ ಕಾರ್ಯಾಚರಣೆ ಸ್ಥಗಿತಗೊಳಿಸುವುದು- ಬಿಎಸ್‌ಎಫ್ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸುವುದು ಮತ್ತು 700 ಬುಡಕಟ್ಟು ನಕ್ಸಲರನ್ನು ಬಿಡುಗಡೆಗೊಳಿಸುವುದು ಅವರು ಮುಂದಿಟ್ಟ ಮೊದಲ ಎರಡು ಬೇಡಿಕೆಗಳು.

ಪೋಲಾವರಂ ನೀರಾವರಿ ಹಂಚಿಕೆ ಯೋಜನೆಯನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯೂ ಅದರಲ್ಲಿ ಸೇರಿದೆ ಎಂದು ಹೇಳಲಾಗಿದೆ. ತೆಲುಗು ಭಾಷೆಯ ಕೈ ಬರಹದ ಈ ಬೇಡಿಕೆಗಳನ್ನು ಒಳಗೊಂಡ ಪತ್ರವನ್ನು ನಕ್ಸಲರು ಜಿಲ್ಲೆಯ ಕೆಲವು ಪತ್ರಿಕೆಗಳಿಗೆ ರವಾನಿಸಿದ್ದಾರೆ.

ಸಂಪರ್ಕ ಕಡಿತ: ಮಾಲ್ಕನ್‌ಗಿರಿಗೆ ರಾಜ್ಯದ ಇತರ ಭಾಗದ ಸಂಪರ್ಕ ಕಡಿಯಬೇಕು ಎಂಬ ಉದ್ದೇಶದೊಂದಿಗೆ ನಕ್ಸಲರು ಕೊರಾಪುಟ್‌ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 25ರಲ್ಲಿ ಅಲ್ಲಲ್ಲಿ ಮರಗಳನ್ನು ಕಡಿದು ಹಾಕಿ, ಕೆಲವೆಡೆ ಬಂಡೆಕಲ್ಲುಗಳನ್ನು ಇಟ್ಟು, ಮತ್ತೆ ಕೆಲವು ಕಡೆ ರಸ್ತೆಯಲ್ಲಿ ಕಂದಕ ತೋಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಗೋವಿಂದಪಳ್ಳಿ ಘಾಟಿ ರಸ್ತೆಯಲ್ಲಿ ಹೆಚ್ಚಾಗಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಲಾಗಿದೆ.

ಸಂಧಾನ: ಜಿಲ್ಲಾಧಿಕಾರಿ ಅವರನ್ನು ಸುರಕ್ಷಿತವಾಗಿ ಬಿಡುಗಡೆ  ಮಾಡುವ ನಿಟ್ಟಿನಲ್ಲಿ ತೆರೆಮರೆಯ ಸಂಧಾನ ನಡೆಸಲು ತಾವು ಈಗಾಗಲೇ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರೊಂದಿಗೆ ಮಾತನಾಡಿರುವುದಾಗಿ ರಾಜ್ಯದ ಗೃಹ ಕಾರ್ಯದರ್ಶಿ ಯು. ಎನ್. ಬೆಹೆರಾ ತಿಳಿಸಿದ್ದಾರೆ.

‘ನಮ್ಮ ಕೋರಿಕೆಯನ್ನು ಅವರು ಒಪ್ಪಿದ್ದಾರೆ ಮತ್ತು ಕೆಲವು ಪ್ರಮುಖ ನಕ್ಸಲ್ ನಾಯಕರ ಜತೆಗೆ ಸಂಧಾನ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಈ ಮಧ್ಯೆ, ನಕ್ಸಲರ ಪ್ರಮುಖ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ, ಗುರುವಾರದಿಂದಲೇ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ರಾಜ್ಯದ ಎಲ್ಲೆಡೆ ಸ್ಥಗಿತಗೊಳಿಸಿದೆ.
ವರವರರಾವ್ ಸಲಹೆ: ನಕ್ಸಲರು ತಮ್ಮ ಅಂತಿಮ ಗಡುವನ್ನು ವಿಸ್ತರಿಸಬೇಕು ಎಂಬ ಮುಖ್ಯಮಂತ್ರಿ ಅವರ ಮನವಿಗೆ ಪ್ರತಿಕ್ರಿಯಿಸಿರುವ ನಕ್ಸಲ್ ಪರ ಚಿಂತಕ ವರವರರಾವ್, ಕ್ಷುಲ್ಲಕ ಕಾರಣಕ್ಕಾಗಿ ಬಂಧಿತರಾಗಿರುವ ಏಳು ಮಂದಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಶುಕ್ರವಾರ ಸಂಜೆಯೊಳಗೆ ಸರ್ಕಾರ ಭರವಸೆ ನೀಡಿದರೆ ಮಾತ್ರ ನಕ್ಸಲರು ತಮ್ಮ ಗಡುವನ್ನು ವಿಸ್ತರಿಸಬಹುದು ಎಂದಿದ್ದಾರೆ.

ವಿಧಾನಸಭೆಯಲ್ಲಿ ಗದ್ದಲ: ಜಿಲ್ಲಾಧಿಕಾರಿ ಅವರನ್ನು ಬಿಡುಗಡೆಗೊಳಿಸಲು ಸರ್ಕಾರ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ಶುಕ್ರವಾರವೂ ತೀವ್ರ ಗದ್ದಲ ನಡೆಸಿದವು. ‘ಜಿಲ್ಲಾಧಿಕಾರಿಯನ್ನೇ ನಕ್ಸಲರು ಅಪಹರಿಸಿದ್ದಾರೆ, ಈಗ ಯಾರು ಸುರಕ್ಷಿತರು?’ ಎಂದು ಹೇಳುವ ಭಿತ್ತಿಫಲಕವನ್ನು ಸದಸ್ಯರು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಮಧ್ಯವರ್ತಿಗಳೊಂದಿಗೆ ಸಂಪರ್ಕ
ಮಾಲ್ಕನ್‌ಗಿರಿ/ಭುವನೇಶ್ವರ (ಪಿಟಿಐ): ಮಾಲ್ಕನ್‌ಗಿರಿ ಜಿಲ್ಲಾಧಿಕಾರಿ ಆರ್. ವಿ. ಕೃಷ್ಣ ಅವರನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸಂಧಾನ ನಡೆಸುವುದಕ್ಕಾಗಿ ನಕ್ಸಲರೇ ಸೂಚಿಸಿದ ಇಬ್ಬರು ಸಂಧಾನಕಾರರೊಂದಿಗೆ ಒಡಿಶಾ ಸರ್ಕಾರ ಸಂಪರ್ಕ ಸಾಧಿಸಿರುವುದಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಬಿ. ಕೆ. ಪಟ್ನಾಯಕ್ ಹೇಳಿದ್ದಾರೆ.

‘ನಕ್ಸಲರು ಮೂವರು ಸಂಧಾನಕಾರರ ಹೆಸರು ಸೂಚಿಸಿದ್ದರು. ಈ ಪೈಕಿ ಆಂಧ್ರ ಪ್ರದೇಶದವರಾದ ಪ್ರೊ. ಸೋಮೇಶ್ವರ ರಾವ್ ಮತ್ತು ಪ್ರೊ. ಹರ್‌ಗೋಪಾಲ್ ಅವರೊಂದಿಗೆ ಸಂಪರ್ಕ ಸಾಧಿಸಲಾಗಿದ್ದು, ಸಂಧಾನಕಾರರಾಗಲು ಅವರು ಒಪ್ಪಿದ್ದಾರೆ. ಸರ್ಕಾರದ ಪರವಾಗಿ ಗಡುವು ವಿಸ್ತರಿಸುವಂತೆ ಅವರು ನಕ್ಸಲರನ್ನು ಕೋರಲಿದ್ದಾರೆ’ ಎಂದು ಪಟ್ನಾಯಕ್ ಅವರು ಶುಕ್ರವಾರ ಪತ್ರಕರ್ತರಿಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT