ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಕ್ಕನ್ ಓಟಗಾರ್ತಿ ತಿಪ್ಪವ್ವ ಸಣ್ಣಕ್ಕಿ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ದೂರ ಅಂತರದ ಓಟಗಾರರ ಪರಂಪರೆಯಲ್ಲಿ ತಿಪ್ಪವ್ವ ಸಣ್ಣಕ್ಕಿಗೆ ಮುಖ್ಯ ಸ್ಥಾನವಿದೆ. ಅಂತರ ವಿಶ್ವವಿದ್ಯಾಲಯ ಮಟ್ಟದ ಮತ್ತು ರಾಷ್ಟ್ರೀಯ  ಕೂಟಗಳಲ್ಲಿ ಗಮನಾರ್ಹ ಸಾಮರ್ಥ್ಯ ತೋರಿರುವ ಇವರು ಬೆಂಗಳೂರಿನ ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ನವರು ಪ್ರತಿ ವರ್ಷವೂ ನಡೆಸುವ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟದಲ್ಲಿ ಎದ್ದು ಕಾಣುವ ಸಾಧನೆ ತೋರುತ್ತಿದ್ದಾರೆ.
 
ಸತತ ಐದು ವರ್ಷಗಳಿಂದ ಈ ಕೂಟದಲ್ಲಿ ಪ್ರಶಸ್ತಿ ಗೆಲ್ಲುತ್ತಲೇ ಬಂದಿದ್ದಾರೆ. ಈ ವರ್ಷವೂ ಜೂನ್ 17ರಂದು ರಾಮನಗರ ಮತ್ತು ಜುಲೈ 1ರಂದು ಬಾಗಲಕೋಟೆಯಲ್ಲಿ ನಡೆದ ರಸ್ತೆ ಓಟಗಳಲ್ಲಿಯೂ ಇವರಿಗೇ ಅಗ್ರಸ್ಥಾನ.

ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ಕಚೇರಿಯಲ್ಲಿ ಉದ್ಯೋಗಿಯಾಗಿರುವ ತಿಪ್ಪವ್ವ ಸಣ್ಣಕ್ಕಿ, ಮೂಲತಃ ಬಾಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಶಿವಾಪುರದವರು. `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್~ ಪ್ರಾಯೋಜಕತ್ವದ ನೆಟ್ಟಕಲ್ಲಪ್ಪ ಸ್ಮಾರಕ ರಾಜ್ಯಮಟ್ಟದ ರಸ್ತೆ ಓಟದ ಸ್ಪರ್ಧೆ ರಾಜ್ಯದ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಹಾಜರಾಗುವ ಸಣ್ಣಕ್ಕಿ ಎಲ್ಲರಿಗಿಂತಲೂ ಮೊದಲು ಗುರಿ ತಲುಪುವುದರಲ್ಲಿ ಎತ್ತಿದ ಕೈ.

ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಈ ಹಿಂದೆ ಮಂಡ್ಯ, ಚಿಕ್ಕಮಗಳೂರು, ಹಾಸನ, ಗುಲ್ಬರ್ಗಾ, ವಿಜಾಪುರ ನಗರಗಳಲ್ಲಿ ಏರ್ಪಡಿಸಿದ್ದ ನೆಟ್ಟಕಲ್ಲಪ್ಪ ಸ್ಮಾರಕ  ರಸ್ತೆ ಓಟದ ಸ್ಪರ್ಧೆಯಲ್ಲೂ ಇವರೇ ಗೆದ್ದಿದ್ದಾರೆ.

ಬೀಳಗಿ ತಾಲ್ಲೂಕಿನ ಶಿವಾಪುರದ ಸಿದ್ದರಾಮಪ್ಪ ಮತ್ತು ರುದ್ರವ್ವ ದಂಪತಿ ಪುತ್ರಿಯಾಗಿರುವ 23 ವರ್ಷ ವಯಸ್ಸಿನ ಸಣ್ಣಕ್ಕಿ, ಮೈಸೂರು ವಿಭಾಗೀಯ ರೈಲ್ವೆ ಕಚೇರಿಯಲ್ಲಿ 2011ಮಾರ್ಚ್‌ನಿಂದ ಟಿ.ಸಿ.ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯೂ ಆಗಿದ್ದಾರೆ.
 
ಒಂದರಿಂದ ಏಳನೇ ತರಗತಿವರೆಗೆ ಬೀಳಗಿ ತಾಲ್ಲೂಕಿನ ಶಿವಾಪುರದ ಸರ್ಕಾರಿ  ಶಾಲೆಯಲ್ಲಿ ಕಲಿತಿರುವ ತನಗೆ ಓಟದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಶಾಲೆಯ ಶಿಕ್ಷಕರಾದ ಆರ್.ಎಲ್.ಕುಂದರಗಿ, ಬಿ.ಟಿ.ಗಲಗಲಿ, ಮತ್ತು ಎಸ್.ಎಸ್.ಸಪ್ಲಿ  ಅವರು ನೀಡಿದ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ ಸಣ್ಣಕ್ಕಿ.

ಬೆಂಗಳೂರು ವಿದ್ಯಾಗಿರಿಯ ಕ್ರೀಡಾಶಾಲೆಯಲ್ಲಿ ಒಂಬತ್ತು ಮತ್ತು ಹತ್ತನೇ  ತರಗತಿವರೆಗೆ  ಕಲಿತಿರುವ ಈ ಓಟಗಾರ್ತಿ, ಬಳಿಕ ಮೈಸೂರಿನ ಮಹಿಳಾ ಕ್ರೀಡಾ ವಸತಿ ನಿಲಯದಲ್ಲಿ ಇದ್ದುಕೊಂಡು ಅಖಿಲ ಭಾರತ ಮಟ್ಟದ ಅಂತರ ವಿ.ವಿ. ಕ್ರೀಡಾಕೂಟ ಮತ್ತು ಕ್ರಾಸ್‌ಕಂಟ್ರಿ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಆರನೇ ತರಗತಿ ಓದುತ್ತಿರುವಾಗಲೇ (2004) ತಿಪ್ಪವ್ವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ಬಾಲಕಿಯರ ವಿಭಾಗದಲ್ಲಿ 5 ಸಾವಿರ ಮೀಟರ್ ಓಟದಲ್ಲಿ ದಾಖಲೆಯೊಂದಿಗೆ ಪ್ರಥಮ ಸ್ಥಾನ, 2005ರ ದಸರಾ ಕ್ರೀಡಾಕೂಟದ 5 ಸಾವಿರ ಮೀಟರ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು.

ಬಳಿಕ 2006ರಲ್ಲಿ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್‌ನ 3ಸಾವಿರ ಮತ್ತು 1500ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಅದೇ ವರ್ಷ ನಡೆದ ರಾಜ್ಯಮಟ್ಟದ ಶಾಲಾ ಕ್ರೀಡಾಕೂಟದಲ್ಲಿ 1500 ಮೀಟರ್ ಓಟದಲ್ಲಿ ದ್ವಿತೀಯ ಮತ್ತು 3ಸಾವಿರ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ತಾವೊಬ್ಬ ಸಮರ್ಥ ಓಟಗಾರ್ತಿ ಎಂಬುದನ್ನು ಖಾತರಿ ಪಡಿಸಿದ್ದರು.

ಕೇರಳದ ಕೊಟ್ಟಾಯಂನಲ್ಲಿ 2010-11ರಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಕ್ರಾಸ್‌ಕಂಟ್ರಿ ಸ್ಪರ್ಧೆಯಲ್ಲಿ ತೃತೀಯ, ಅದೇ ವರ್ಷ ಚೆನ್ಹೈನಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ ಕೂಟದಲ್ಲಿ 10 ಸಾವಿರ ಮೀಟರ್ ಓಟದಲ್ಲಿ ದ್ವಿತೀಯ ಹಾಗೂ ಆಂಧ್ರದ ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಮಟ್ಟದ ಕೂಟದ 10 ಸಾವಿರ ಮೀಟರ್ಸ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಭರವಸೆಯ ಓಟಗಾರ್ತಿ ಎನಿಸಿಕೊಂಡಿದ್ದಾರೆ.

ರಾಜ್ಯಮಟ್ಟದ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 5 ಮತ್ತು 10 ಸಾವಿರ ಮೀಟರ್ಸ್ ಓಟದ ಸ್ಪರ್ಧೆಗಳಲ್ಲಿ  ದಾಖಲೆಯೊಂದಿಗೆ ಪ್ರಥಮ ಮತ್ತು ಕ್ರಾಸ್‌ಕಂಟ್ರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 2007-08ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

`ಕ್ರೀಡೆಯಲ್ಲಿ ಇದುವರೆಗೆ ತಾನು ಮಾಡಿರುವ ಸಾಧನೆ ತೃಪ್ತಿ ತಂದಿಲ್ಲ, ಕ್ಷೇತ್ರದಲ್ಲಿ ನನಗಿಂತ ಉತ್ತಮ  ಓಟಗಾರ್ತಿಯರಿದ್ದಾರೆ,  ಕೆಲಸದ ಒತ್ತಡ  ಇರುವುದರಿಂದ ಇನ್ನೂ ಹೆಚ್ಚಿನ ಸಾಧನೆ ಮಾಡಲು ಕಷ್ಟಸಾಧ್ಯವಾಗಿದೆ~ ಎಂಬುದು ಸಣ್ಣಕ್ಕಿ ಅವರ ಅಭಿಪ್ರಾಯ.

`ಡೆಕ್ಕನ್ ಅಥ್ಲೇಟಿಕ್ ಕ್ಲಬ್ ಆಯೋಜಿಸುತ್ತಿರುವ ರಸ್ತೆ ಓಟದ ಸ್ಪರ್ಧೆ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳ ಪಾಲಿಗೆ ಉತ್ತಮ ವೇದಿಕೆಯಾಗಿದೆ~ ಎಂದು ಸಣ್ಣಕ್ಕಿ ಹೇಳುತ್ತಾರೆ.  ದಾಮೋದರ ಗೌಡ ಅವರಿಂದ ತರಬೇತಿ ಪಡೆಯುತ್ತಿರುವ ಈಕೆ ಮುಂದಿನ ದಿನಗಳಲ್ಲಿ ಇನ್ನೂ ಎತ್ತರದ ಸಾಧನೆ ತೋರುವ ಹುಮ್ಮಸ್ಸಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT