ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇರಿ ಹಾಲಿನಲ್ಲಿ ವಿಷದ ವದಂತಿ: ಎಲ್ಲೆಡೆ ಗಾಬರಿ

Last Updated 20 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಂದಿನಿ ಮತ್ತು ಖಾಸಗಿ ಡೇರಿಗಳ ಪ್ಯಾಕೇಟ್ ಹಾಲಿನಲ್ಲಿ ಮತ್ತು ಮೆಹಂದಿಯಲ್ಲಿ ವಿಷ ಬೆರೆಸಲಾಗಿದೆ ಎನ್ನುವ ವದಂತಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ರಮ್ಜಾನ್ ಹಬ್ಬದ ಹಿಂದಿನ ರಾತ್ರಿಯಿಂದ ವ್ಯಾಪಕವಾಗಿ ಹರಿದಾಡಿ ಆತಂಕದ ವಾತಾವರಣ ಸೃಷ್ಟಿಸಿತ್ತು.

ಯಲ್ಲಾಪುರ, ಶಿರಸಿ, ಗದಗ ಸೇರಿದಂತೆ ಹಲವೆಡೆ ಈ ವದಂತಿಯಿಂದ ಸಾವಿರಾರು ಜನರು ಆತಂಕಗೊಂಡು ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗಳ ಮುಂದೆ ಜಮಾಯಿಸಿದ್ದರು. ರಂಜಾನ್ ಹಬ್ಬಕ್ಕೆ ಮೆಹಂದಿ ಹಾಕಿಕೊಂಡ ಹಲವು ಮಹಿಳೆಯರ ಕೈಗಳಲ್ಲಿ ತುರಿಕೆ ಉಂಟಾಗಿ ಬಾವು ಬಂದಿದ್ದರಿಂದ ಗಾಳಿಸುದ್ದಿ ಮತ್ತಷ್ಟು ಬಲ ಪಡೆಯಿತು.
`ಕಳಪೆ ಗುಣಮಟ್ಟದ ಮೆಹಂದಿ ಹಚ್ಚಿಕೊಂಡಿದ್ದರಿಂದ ಕೈಗಳಲ್ಲಿ ತುರಿಕೆ ಕಾಣಿಸಿಕೊಂಡಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
 
ಅದೂ ಒಂದೇ ಬ್ರಾಂಡ್‌ನ ಮೆಹಂದಿ ಹಚ್ಚಿಕೊಂಡವರಲ್ಲಿ ತುರಿಕೆ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೆಹಂದಿಯಲ್ಲಿ ರಾಸಾಯನಿಕ ಸೇರಿದ್ದರಿಂದ ಈ ರೀತಿ ಆಗಿರಬಹುದು ಎಂದು ವೈದ್ಯರು ಹೇಳಿದ್ದಾರೆ~ ಎಂದು ಕಾರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.

ರಂಜಾನ್ ಹಬ್ಬದ ಪ್ರಯುಕ್ತ ಸುಮಾರು ಮೂರು ಸಾವಿರ ಲೀಟರ್‌ನಷ್ಟು ಹೆಚ್ಚುವರಿ ಹಾಲು ಯಲ್ಲಾಪುರ ಪಟ್ಟಣಕ್ಕೆ ಪೂರೈಕೆಯಾಗಿತ್ತು. ವದಂತಿಯಿಂದಾಗಿ ಸೋಮವಾರ ಮಧ್ಯಾಹ್ನದವರೆಗೂ 500 ಲೀಟರ್‌ನಷ್ಟು ಹಾಲು ಮಾರಾಟವಾಗಲಿಲ್ಲ ಎನ್ನಲಾಗಿದೆ.

ಕರಾವಳಿಯಲ್ಲೂ ಆತಂಕ

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ನಂದಿನಿ ಹಾಲು ಕಲಬೆರಕೆಯಾಗಿದೆ ಎಂಬ ವದಂತಿಯಿಂದ ಕರಾವಳಿ ಭಾಗದಲ್ಲಿ ಜನರು ತೀವ್ರವಾಗಿ ಆತಂಕಗೊಂಡ ಘಟನೆ ಸೋಮವಾರ ನಡೆದಿದೆ. ಬೆಳಿಗ್ಗೆ ಮೊಬೈಲ್‌ಗಳಲ್ಲಿ ಹರಿದಾಡಿದ ಸುಳ್ಳು ಎಸ್‌ಎಂಎಸ್‌ಗಳಿಂದ ಈ ವದಂತಿ ವ್ಯಾಪಕವಾಯಿತು. ಟಿವಿ ಚಾನೆಲ್‌ಗಳಲ್ಲಿ ಈ ಸುದ್ದಿ ಸ್ಪೋಟವಾಗುತ್ತಿದ್ದಂತೆಯೇ ಜನ ಇನ್ನಷ್ಟು ಆತಂಕಗೊಂಡರು. ಕೆಲವು ಕಡೆಗಳಲ್ಲಿ ಹಾಲು ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆ, ಮೃತಪಟ್ಟಿದ್ದಾರೆ ಎಂಬ ವದಂತಿ ಸಹ ವ್ಯಾಪಕವಾಗಿ ಹರಿದಾಡಿತು.
 
ಈ ವದಂತಿಯಿಂದಾಗಿ ಮೂಡಬಿದಿರೆ ಮತ್ತಿತರ ಕಡೆ ಹಾಲು ಇಳಿಸಿಕೊಳ್ಳಲು ಕೆಲವು ನಂದಿನಿ ಡೀಲರ್‌ಗಳು ನಿರಾಕರಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು ತುರ್ತು ಪತ್ರಿಕಾಗೋಷ್ಠಿ ನಡೆಸಿ ಹಾಲಿನಲ್ಲಿ ಕಲಬೆರಕೆಯಾಗಿಲ್ಲ, ಕೆಲವು ಸಮಾಜಘಾತುಕ ಶಕ್ತಿಗಳು ಅಶಾಂತಿ ಸೃಷ್ಟಿಸಲು ಇತ್ತೀಚೆಗೆ ಕೈಗೊಳ್ಳುತ್ತಿರುವ ಪ್ರಯತ್ನದ ಮುಂದುವರಿದ ಭಾಗ ಇದು ಎಂದು ಹೇಳಿ, ಗ್ರಾಹಕರು ಧೈರ್ಯವಾಗಿ ಹಾಲು ಮತ್ತು ಹಾಲಿನ ಉತ್ಪನ್ನವನ್ನು ಸೇವಿಸಬಹುದು ಎಂಬ ಭರವಸೆ ನೀಡಿದರು.

ಕಲಬೆರಕೆಯಾಗಿದೆ ಎಂದು ಹೇಳಲಾದ ಭಾನುವಾರ ಸಜ್ಜಾದ ಹಾಲಿನ ಪ್ಯಾಕೆಟ್ ಕತ್ತರಿಸಿ ಹಾಲನ್ನು ಲೋಟಕ್ಕೆ ಸುರಿದು ಮಾಧ್ಯಮದ ಎದುರಿನಲ್ಲೇ ಕುಡಿಯುವ ಮೂಲಕ ಹೆಗ್ಡೆ ಅವರು ಜನರ ಆತಂಕ ನಿವಾರಿಸಲು ಯತ್ನಿಸಿದರು.ಈ ಮಧ್ಯೆ, ಕಲಬೆರಕೆ ಎಸ್‌ಎಂಎಸ್ ಸಂದೇಶದ ಮೂಲವನ್ನು ಹುಡುಕುವ ಪ್ರಯತ್ನವನ್ನು ಪೊಲೀಸರು ಆರಂಭಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT