ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಗಳು ನೀಡುವ ಪತ್ನಿ ಬೇಡವೆಂದ ಪತಿ!

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಊಟ ಕೇಳಿದರೆ ತಂಗಳು ನೀಡುತ್ತಾಳೆ~ ಎಂದು ಮುನಿಸಿಕೊಂಡ ಪತಿ, ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಕೌಟುಂಬಿಕ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ವಿವಾಹವಾಗಿ ತಿಂಗಳು ತುಂಬುವ ಮೊದಲೇ, ಜಗಳವಾಡಿಕೊಂಡಿದ್ದ ದಂಪತಿಯ ಅಹವಾಲು ಆಲಿಸುವ ಬದಲು ಪತಿಯ ವಾದವನ್ನಷ್ಟೇ ಕೇಳಿ ವಿಚ್ಛೇದನ ನೀಡಿದ್ದ ಕೌಟುಂಬಿಕ    ಕೋರ್ಟ್ ಆದೇಶವನ್ನು ಹೈಕೋರ್ಟ್ ವಜಾ ಮಾಡಿದೆ.

ಪತ್ನಿಗೆ ನೋಟಿಸ್ ನೀಡಿದರೂ ಅವರು ಬಂದಿಲ್ಲ ಎಂಬ ಕಾರಣ ನೀಡಿ, ಅವರ ವಾದವನ್ನು ಕೌಟುಂಬಿಕ ಕೋರ್ಟ್ ಆಲಿಸಿರಲಿಲ್ಲ. ವಿಚ್ಛೇದನ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎನ್.ಕೆ.ಪಾಟೀಲ್ ಹಾಗೂ ಎಸ್.ಎನ್.ಸತ್ಯನಾರಾಯಣ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಹೊಸದಾಗಿ ವಿಚಾರಣೆ ನಡೆಸಿ ಆದೇಶ ಹೊರಡಿಸುವಂತೆ ಕೌಟುಂಬಿಕ ಕೋರ್ಟ್‌ಗೆ ನಿರ್ದೇಶಿಸಿದೆ.

ದಾಂಪತ್ಯ ಎಂಬುದು ಸೂಕ್ಷ್ಮ ವಿಚಾರ: `ದಾಂಪತ್ಯ ಎನ್ನುವುದು ಸೂಕ್ಷ್ಮ ವಿಚಾರ. ದಂಪತಿಯನ್ನು ಪ್ರತ್ಯೇಕ ಮಾಡುವ ಮೊದಲು ಕೋರ್ಟ್‌ಗಳು ಹಲವು ಬಾರಿ ಯೋಚನೆ ಮಾಡಬೇಕು. ಏಕಪಕ್ಷೀಯವಾಗಿ ಆದೇಶ ಹೊರಡಿಸುವುದು ಸರಿಯಲ್ಲ. ನೋಟಿಸ್ ಜಾರಿ ಮಾಡಿದರೂ ಪತ್ನಿ ಹಾಜರು ಆಗಲಿಲ್ಲ ಎಂಬ ಕಾರಣ ನೀಡಿ ವಿಚ್ಛೇದನ ನೀಡಿದುದು ಸಮಂಜಸವಲ್ಲ.

`ಇಂತಹ ಪ್ರಕರಣಗಳಲ್ಲಿ ದಂಪತಿಯಲ್ಲಿ ಒಬ್ಬರು ನೋಟಿಸ್‌ಗೆ ಪ್ರತಿಕ್ರಿಯೆ ನೀಡಲಿಲ್ಲ ಎಂದಾದರೆ ವಾರೆಂಟ್ ಜಾರಿ ಮಾಡಿ ಅವರನ್ನು ಕರೆಸಿಕೊಳ್ಳುವ ಅಧಿಕಾರ ಕೌಟುಂಬಿಕ ಕೋರ್ಟ್‌ಗೆ ಇದೆ. ಕೊನೆಯ ಪಕ್ಷ ಈ ಅಧಿಕಾರವನ್ನಾದರೂ ಈ ಪ್ರಕರಣದಲ್ಲಿ ಬಳಸಿಕೊಂಡು ಪತ್ನಿಯನ್ನು ಕರೆಸಿಕೊಳ್ಳಬಹುದಿತ್ತು. ಅವರ ವಾದ ಆಲಿಸಿ ಆದೇಶ ಹೊರಡಿಸಬಹುದಿತ್ತು.

`ಕೇವಲ ಪತಿ ನೀಡಿರುವ ಹೇಳಿಕೆಗಳ ಮೇಲೆ ವಿಚ್ಛೇದನ ನೀಡಿ ಆದೇಶ ಹೊರಡಿಸಲಾಗಿದೆ. ಆದುದರಿಂದ ಈ ಆದೇಶ ರದ್ದು ಮಾಡದೆ ಬೇರೆ ವಿಧಿಯೇ ಇಲ್ಲ~ ಎಂದ ನ್ಯಾಯಮೂರ್ತಿಗಳು ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿದರು. ಕೌಟುಂಬಿಕ ಕೋರ್ಟ್ ಆದೇಶ ರದ್ದು ಮಾಡಿದರು.

ಪ್ರಕರಣದ ವಿವರ: ಇದು, ಬೆಂಗಳೂರಿನ 25 ವರ್ಷ ವಯಸ್ಸಿನ ಆರತಿ ಹಾಗೂ 29ರ ರವಿ(ಇಬ್ಬರ ಹೆಸರು ಬದಲಾಯಿಸಲಾಗಿದೆ) ಅವರ ಕಥೆ.

`ಮನೆಯಲ್ಲಿ ನನ್ನ ತಾಯಿ ಇಲ್ಲದಾಗ ಊಟ ಕೇಳಿದರೆ ಆರತಿ ತಂಗಳು ನೀಡುತ್ತಿದ್ದಳು~ ಎನ್ನುವುದು ರವಿ ಅವರ ಪ್ರಮುಖ ಆರೋಪ. ಈ ತಂಗಳಿನ ಗುಂಗಿನಲ್ಲಿಯೇ ಪತ್ನಿಯನ್ನು ಕರೆದುಕೊಂಡು ರವಿ ಮಧುಚಂದ್ರಕ್ಕೂ ಹೋಗಿದ್ದರು. ಆದರೆ, ಅಲ್ಲಿಯೂ ಅವರ ಜಗಳ ಮುಂದುವರಿದು, ಮಧುಚಂದ್ರ `ಅರ್ಧಚಂದ್ರ~ವಾಯಿತು ಎನ್ನುತ್ತಾರೆ ಅವರು.

`ನಾನು ಬಿ.ಇ ಅಂತಿಮ ವರ್ಷದಲ್ಲಿ ಓದುತ್ತಿದ್ದೆ. ಕೆಲವು ಮನೆಗಳನ್ನು ನಾವು ಬಾಡಿಗೆಗೆ ನೀಡಿದ್ದರಿಂದ ಅದರಲ್ಲಿ ಬರುವ ಆದಾಯದಲ್ಲಿಯೇ ಜೀವನ ಸಾಗಿಸುತ್ತಿದ್ದೆವು. ನನಗೆ ಬೇರೆ ಉದ್ಯೋಗ ಇರಲಿಲ್ಲ. ಈ ಬಗ್ಗೆ ವಿವಾಹಕ್ಕೂ ಮುಂಚೆ ಆರತಿ ಅವರ ಪೋಷಕರಿಗೆ ತಿಳಿಸಿದ್ದೆ. ಇದರ ಹೊರತಾಗಿಯೂ ಉದ್ಯೋಗ ಮಾಡುವಂತೆ ಆರತಿ ನನ್ನನ್ನು ಒತ್ತಾಯ ಮಾಡುತ್ತಿದ್ದಳು.

`ಬೆಂಗಳೂರಿನಲ್ಲಿಯೇ ಆಕೆಯ ತವರು ಮನೆ ಇದೆ. ಕಾಲೇಜಿಗೆ ಶನಿವಾರ, ಭಾನುವಾರ ರಜೆ. ಆಗಲೂ ಅವಳು ಮನೆಯಲ್ಲಿ ಇರುತ್ತಿರಲಿಲ್ಲ. ಹೇಳದೆ ಕೇಳದೆ ತವರಿಗೆ ಹೋಗುತ್ತಿದ್ದಳು.

ಇವೆಲ್ಲ ಕಾರಣಗಳಿಂದ ಮಾನಸಿಕವಾಗಿ ಜರ್ಜಿತನಾದ ನಾನು ಮದ್ಯವ್ಯಸನಿ ಆಗಬೇಕಾಯಿತು. ಇವೆಲ್ಲ ಒಂದು ತಿಂಗಳಿನಲ್ಲಿಯೇ ನಡೆದು ಹೋಗಿದೆ.

ಇದನ್ನೇ ನೆಪವಾಗಿಟ್ಟುಕೊಂಡು ಆರತಿ, ಮನೆ ಬಿಟ್ಟು ತವರು ಸೇರಿದಳು. 10 ತಿಂಗಳಾದರೂ ಮನೆಗೆ ಬರಲಿಲ್ಲ. ನನ್ನ ಸಂಬಂಧಿಗಳು ಮನವೊಲಿಸುವ ಯತ್ನ ಮಾಡಿದರೂ ಆಕೆ ಅದಕ್ಕೆ ಜಗ್ಗಲಿಲ್ಲ. ಆದುದರಿಂದ ನನಗೆ ಆಕೆಯಿಂದ ವಿಚ್ಛೇದನ ಬೇಕು~ ಎಂದು ಕೋರಿ ರವಿ ಕೌಟುಂಬಿಕ ಕೋರ್ಟ್‌ಗೆ  2009ರ ಜುಲೈನಲ್ಲಿ ಅರ್ಜಿ ಸಲ್ಲಿಸಿದ್ದರು.

ಹಾಜರಾಗದ ಪತ್ನಿ: ಕೋರ್ಟ್ ಆರತಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ, ಅವರು ಖುದ್ದಾಗಿಯಾಗಲೀ, ವಕೀಲರ ಮೂಲಕವಾಗಲೀ ಹಾಜರು ಆಗಲಿಲ್ಲ. ಇದರಿಂದಾಗಿ ಅವರ ಅನುಪಸ್ಥಿತಿಯಲ್ಲಿಯೇ ಕೌಟುಂಬಿಕ ಕೋರ್ಟ್ 2010ರಲ್ಲಿ ರವಿ ಅವರ ಅರ್ಜಿ ಮಾನ್ಯ ಮಾಡಿ, ವಿಚ್ಛೇದನ ನೀಡಿತು. ಇದನ್ನು ಆರತಿ  ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈಗ ಪ್ರಕರಣವನ್ನು ಕೌಟುಂಬಿಕ ಕೋರ್ಟ್‌ಗೆ ಹಿಂದಿರುಗಿಸಿರುವ ಕಾರಣ, ದಾಂಪತ್ಯದ ಭವಿಷ್ಯ ಅದು ನೀಡುವ ಆದೇಶದ ಮೇಲೆ ಅವಲಂಬಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT