ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆಯ ಬಂಧನ: ಕಣ್ಣೀರು ಹಾಕಿದ ಪುತ್ರರು

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶನಿವಾರ ಸಂಜೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಶರಣಾದ ಸಂದರ್ಭದಲ್ಲಿ ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್‌ಕುಮಾರ್ ಹಾಜರಿದ್ದರು. ಯಡಿಯೂರಪ್ಪ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆ ಅವರ ಪುತ್ರರು ಕಣ್ಣೀರು ಹಾಕಿದರು.

ರಾಘವೇಂದ್ರ ಅವರು ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಳ್ಳಲು ಯತ್ನಿಸುತ್ತಿದ್ದರು. ಆದರೆ, ವಿಜಯೇಂದ್ರ ಅವರು ಕರವಸ್ತ್ರದಿಂದ ಕಣ್ಣೀರು ಒರೆಸಿಕೊಳ್ಳುತ್ತಲೇ ವಕೀಲರ ಜೊತೆ ಮಾತನಾಡುತ್ತಿದ್ದರು. ಅವರು ದೀರ್ಘಕಾಲ ಅಳುತ್ತಲೇ ಇದ್ದರು.

ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಿದ್ದಲಿಂಗಸ್ವಾಮಿ ಬೆಳಿಗ್ಗೆಯೇ ನ್ಯಾಯಾಲಯದ ಆವರಣದಲ್ಲಿ ಹಾಜರಿದ್ದರು. ಜಾಮೀನು ಅರ್ಜಿಯ ಆದೇಶ ಪ್ರಕಟವಾಗುತ್ತಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಮೊಗಸಾಲೆಯಲ್ಲಿ ಕಿಟಕಿ ಪಕ್ಕದಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದರು. ಯಡಿಯೂರಪ್ಪ ಅವರನ್ನು ಕಾರಾಗೃಹಕ್ಕೆ ಕರೆದೊಯ್ಯುವಾಗಲೂ ಅಲ್ಲಿದ್ದರು.

ಆಸ್ಪತ್ರೆ, ಅಂಬುಲೆನ್ಸ್: ಕೃಷ್ಣಯ್ಯ ಶೆಟ್ಟಿ ಅವರನ್ನು ಬೆಳಿಗ್ಗೆಯೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಲ್ಲಿನ ಮಂಚವೊಂದರ ಮೇಲೆ ಅವರನ್ನು ಕುಳ್ಳಿರಿಸಲಾಗಿತ್ತು. ಲೋಕಾಯುಕ್ತ ಪೊಲೀಸರ ವಶದಲ್ಲಿದ್ದ ಅವರ ಜೊತೆ ಮಧ್ಯಾಹ್ನ 1.15ರ ಸುಮಾರಿಗೆ ಅವರ ವಕೀಲ ಸೆಬಾಸ್ಟಿಯನ್ ಕೆಲ ನಿಮಿಷಗಳ ಕಾಲ ಚರ್ಚಿಸಿದರು.

ಕೆಲವೇ ಹೊತ್ತಿನಲ್ಲಿ ಕೃಷ್ಣಯ್ಯ ಶೆಟ್ಟಿ ಕುಸಿದುಬಿದ್ದರು. ಆಗ ಅಲ್ಲಿದ್ದ ಅವರ ಬೆಂಬಲಿಗರು `ನೀರು ತನ್ನಿ~, `ಅಂಬುಲೆನ್ಸ್ ತಂದು ಆಸ್ಪತ್ರೆಗೆ ಕಳಿಸಿ~ ಎಂದು ಕೂಗಾಡತೊಡಗಿದರು. ಹಲವು ನಿಮಿಷಗಳ ಕಾಲ ಗದ್ದಲ ಮುಂದುವರಿಯಿತು.
ಎಲ್ಲವನ್ನೂ ಮೌನವಾಗಿ ಗಮನಿಸುತ್ತಿದ್ದ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್, ಅಂಬುಲೆನ್ಸ್ ತರಿಸುವಂತೆ ಲೋಕಾಯುಕ್ತ ಡಿವೈಎಸ್‌ಪಿ ಗಿರೀಶ್ ಅವರಿಗೆ ಸೂಚಿಸಿದರು.

ನಂತರ, `ಕಾರಾಗೃಹದ ಆಸ್ಪತ್ರೆಯಲ್ಲಿ ಆರೋಪಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಬೇಕು~ ಎಂಬ ಆದೇಶ ವನ್ನು ಕಾರಾಗೃಹದ ಅಧಿಕಾರಿಗಳಿಗೆ ನೀಡಿದರು. ಆದೇಶದ ಪ್ರತಿಯೊಂದಿಗೆ ಆರೋಪಿಯನ್ನು ಅಂಬು ಲೆನ್ಸ್‌ನಲ್ಲೇ ಕಾರಾಗೃಹಕ್ಕೆ ರವಾನಿಸುವಂತೆ ಗಿರೀಶ್ ಅವರಿಗೆ ನಿರ್ದೇಶನ ನೀಡಿದರು.

ಬೆರಳೆಣಿಕೆಯ ಬೆಂಬಲಿಗರು: ಸದಾ ಯಡಿಯೂ ರಪ್ಪ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಸಚಿವರು, ಶಾಸಕರ ದಂಡು ಶನಿವಾರ ಇರಲಿಲ್ಲ. ಶಾಸಕರಾದ ಎಚ್.ಹಾಲಪ್ಪ, ಬಿ.ಪಿ.ಹರೀಶ್ ಮತ್ತು ಬೇಳೂರು ಗೋಪಾಲಕೃಷ್ಣ ಬೆಳಿಗ್ಗೆಯಿಂದಲೂ ನ್ಯಾಯಾಲಯದ ಆವರಣದಲ್ಲಿದ್ದರು. ಯಡಿಯೂರಪ್ಪ ಶರಣಾಗುವ ವೇಳೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ವಿಧಾನ ಪರಿಷತ್ ಸದಸ್ಯ ಲೇಹರ್ ಸಿಂಗ್ ಅಲ್ಲಿದ್ದರು. ಉಳಿದಂತೆ ಅವರ ಕಟ್ಟಾ ಬೆಂಬಲಿಗರಾರೂ ಕಾಣಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT