ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆಯಿಂದ ಮಗನ ಮೇಲೆ ಮೊಕದ್ದಮೆ

ಅಂತರ್ಜಾತಿ ವಿವಾಹ
Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ಪಟ್ನಾ (ಐಎಎನ್ಎಸ್): ಅಂತರ್ಜಾತಿ ವಿವಾಹವಾದ ಮಗನ ವಿರುದ್ಧವೇ ತಂದೆಯೊಬ್ಬ ರೂ. 1ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಘಟನೆ ಬಿಹಾರದಲ್ಲಿ ನಡೆದಿದೆ.

ಪಟ್ನಾದ ವಕೀಲ ಸಿದ್ದನಾಥ ಶರ್ಮ ಎಂಬುವರೇ ತಮ್ಮ ಮಗ ಸುಶಾಂತ್ ಜಸು ವಿರುದ್ಧ ಮೊಕದ್ದಮೆ ಹೂಡಿದವರು.

‘ಮಗ ಅಂತರ್ಜಾತಿ ವಿವಾಹವಾಗಿ­ದ್ದ­ರಿಂದ ನನ್ನ ವ್ಯಕ್ತಿತ್ವ ಮತ್ತು ಮರ್ಯಾದೆಗೆ  ಧಕ್ಕೆ ಉಂಟಾಗಿದೆ. ನಮ್ಮ ಆಸೆಗೆ ವಿರುದ್ಧವಾಗಿ ಮಗ ವಿವಾಹ ಆಗಿದ್ದಾನೆ. ಹಾಗಾಗಿ, ಅವನು ನಮಗೆ ಪರಿಹಾರ ನೀಡ­ಬೇಕು’ ಎಂದು ಕೋರಿ ಪಟ್ನಾದ ನ್ಯಾಯಾಲಯದಲ್ಲಿ ಸಿದ್ದ­ನಾಥ ಮೊಕದ್ದಮೆ ದಾಖಲಿಸಿದ್ದಾರೆ.

‘ಮಗನ ಆರೈಕೆಗಾಗಿ ನಾನು ಮತ್ತು ನನ್ನ ಹೆಂಡತಿ ತುಂಬಾ ಕಷ್ಟಪಟ್ಟಿ­ದ್ದೇವೆ. ಹಣವನ್ನೂ ಖರ್ಚು ಮಾಡಿ­ದ್ದೇವೆ. ಅವನಿಂದ ನಮಗೆ ಬಹಳಷ್ಟು ನಿರೀಕ್ಷೆ ಇತ್ತು. ಆದರೆ, ಮಗ ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ಪರಿಚಯ­ವಾದ ಇತರ ಜಾತಿಯ ಹುಡುಗಿಯನ್ನು ವಿವಾಹವಾಗಿದ್ದಾನೆ. ಇದರಿಂದ ಸುಮಾರು 400 ವರ್ಷಗಳಷ್ಟು ಹಳೆಯ­ದಾದ ನಮ್ಮ ಕುಟುಂಬದ ಸಂಪ್ರದಾಯಕ್ಕೆ ಧಕ್ಕೆ­ಯಾಗಿದೆ. ಇದುವರೆಗೆ ನಮ್ಮ ಕುಟುಂಬ­ದಲ್ಲಿ ಯಾರೂ ಅಂತ­ರ್ಜಾತಿ ವಿವಾಹವಾಗಿಲ್ಲ’ ಎಂದು ಅವರು ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.

  ಅಷ್ಟೇ ಅಲ್ಲ, ಮಗ ನನ್ನ ಮತ್ತು ಕುಟುಂಬದ ಹೆಸರನ್ನು ಇನ್ನು ಮುಂದೆ ಬಳಸಿಕೊಳ್ಳಬಾರದು. ಆಕಸ್ಮಾತ್ ಬಳಸಿದ್ದಲ್ಲಿ ಪ್ರತಿ ಬಾರಿಯೂ ರೂ. 10 ಸಾವಿರ ಹಣವನ್ನು ಹೆಸರಿನ ಹಕ್ಕು­ಸ್ವಾಮ್ಯ­ಕ್ಕಾಗಿ ನನಗೆ ಪಾವತಿಸಬೇಕು ಎಂದೂ ಹೇಳಿದ್ದಾರೆ.

ಸಿದ್ದನಾಥ ಅವರ ಮಗ ಸುಶಾಂತ್ ಅವರು ಗುಜರಾತಿನ ಪಾಲಂಪುರದಲ್ಲಿ ಹಿರಿಯ ತೆರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಟ್ನಾದ ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡು­ತ್ತಿರುವ ಯುವತಿಯನ್ನು 2013ರ ನ. 19ರಂದು ವಿವಾಹವಾ­ಗಿದ್ದರು.

ಪೋತ್ಸಾಹಧನ: ಬಿಹಾರದಲ್ಲಿ ಅಂತರ್ಜಾತಿ ವಿವಾಹವನ್ನು ಪೋತ್ಸಾಹಿಸುವ ಸಲುವಾಗಿ ಸರ್ಕಾರ ರೂ. 50 ಸಾವಿರ ಪ್ರೋತ್ಸಾಹಧನ ನೀಡುತ್ತಿದೆ. ಈ ಮುನ್ನ ರೂ. 25 ಸಾವಿರ ಹಣವನ್ನು ಪೋತ್ಸಾಹಧನವಾಗಿ ನೀಡುತ್ತಿದ್ದು, ಈಚೆಗಷ್ಟೇ ಸರ್ಕಾರ ಆ ಮೊತ್ತವನ್ನು ದುಪ್ಪಟ್ಟುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT