ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಉನ್ನತಾಧಿಕಾರ ಸಮಿತಿ ರಚನೆ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಸ್ರೊ ಅಂಗಸಂಸ್ಥೆಯಾದ ಅಂತರಿಕ್ಷ್ ಹಾಗೂ ದೇವಾಸ್ ಸಂಸ್ಥೆ ನಡುವೆ ಎಸ್-ಬ್ಯಾಂಡ್ ನೀಡಿಕೆ ಸಂಬಂಧ 2005ರಲ್ಲಿ ಏರ್ಪಟ್ಟ ವಿವಾದಾತ್ಮಕ ಒಪ್ಪಂದದ ಬಗ್ಗೆ ಸಮಗ್ರ ಪರಾಮರ್ಶೆ ನಡೆಸಲು ಸರ್ಕಾರ ಗುರುವಾರ ಉನ್ನತಾಧಿಕಾರ ಸಮಿತಿ ರಚಿಸಿದೆ. ಇಬ್ಬರು ಸದಸ್ಯರನ್ನು ಸಮಿತಿ ಒಳಗೊಂಡಿದ್ದು, ಯೋಜನಾ ಆಯೋಗದ ಸದಸ್ಯ ಬಿ.ಕೆ.ಚತುರ್ವೇದಿ ಇದರ ಮುಖ್ಯಸ್ಥರಾಗಿದ್ದಾರೆ.

ಒಪ್ಪಂದ ಏರ್ಪಟ್ಟ ಅವಧಿಯಲ್ಲಿ ಸ್ವತಃ ಚತುರ್ವೇದಿ ಅವರು ಸಂಪುಟ ಕಾರ್ಯದರ್ಶಿಯಾಗಿದ್ದುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಬಾಹ್ಯಾಕಾಶ ಆಯೋಗದ ಸದಸ್ಯರಾದ ತಜ್ಞ ರೊದ್ದಂ ನರಸಿಂಹ ಸಮಿತಿಯ ಮತ್ತೊಬ್ಬ ಸದಸ್ಯರು.ಬಾಹ್ಯಾಕಾಶ ಇಲಾಖೆಯ ಉಸ್ತುವಾರಿ ಹೊಂದಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಒಂದು ತಿಂಗಳೊಳಗೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ.

ಒಪ್ಪಂದದ ತಾಂತ್ರಿಕ, ವಾಣಿಜ್ಯ, ಕಾರ್ಯವಿಧಾನ ಹಾಗೂ ಹಣಕಾಸು ಅಂಶಗಳ ಬಗ್ಗೆ ಸಮಿತಿ ಪರಿಶೀಲನೆ ನಡೆಸಲಿದೆ. ಅಂತರಿಕ್ಷ್, ಇಸ್ರೊ, ಬಾಹ್ಯಾಕಾಶ ಇಲಾಖೆಗಳು ಅನುಸರಿಸುತ್ತಿರುವ ಅನುಮತಿ ಪ್ರಕ್ರಿಯೆಗಳ ಕುರಿತೂ ಇದು ಪರಾಮರ್ಶೆ ನಡೆಸಿ ಸುಧಾರಣೆ ಮತ್ತು ಬದಲಾವಣೆಗಳ ಬಗ್ಗೆ ಸಲಹೆ ನೀಡಲಿದೆ ಎಂದು  ಅಧಿಕೃತ ಪ್ರಕಟಣೆ ತಿಳಿಸಿದೆ. ಬಿಜೆಪಿ ಲೇವಡಿ: 2005ರಲ್ಲಿ ಎಸ್-ಬ್ಯಾಂಡ್ ಒಪ್ಪಂದಕ್ಕೆ ಅನುಮತಿ ನೀಡಿದ್ದ ಸಂದರ್ಭದಲ್ಲಿ ಸಂಪುಟ ಕಾರ್ಯದರ್ಶಿಯಾಗಿದ್ದ ಬಿ.ಕೆ.ಚತುರ್ವೇದಿ ಅವರಿಗೇ ತನಿಖೆಯ ನೇತೃತ್ವ ವಹಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಕೇಳಿದೆ.

‘ನಿರ್ಧಾರ ತೆಗೆದುಕೊಂಡವರಿಂದಲೇ ಸಂಶಯಾಸ್ಪದ ಹಗರಣದ ಕುರಿತು ತನಿಖೆ ನಡೆಸುವುದು ಎಷ್ಟರಮಟ್ಟಿಗೆ ಸರಿ?’- ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ. ವಿವಾದದ ಕುರಿತು ಸ್ಪಷ್ಟನೆ ನೀಡಬೇಕಿರುವ ಸರ್ಕಾರ ಪ್ರತಿ ಹಂತದಲ್ಲೂ ಅದನ್ನು ಮುಚ್ಚಿಹಾಕಲು ಯತ್ನಿಸುತ್ತಿರುವುದು ಇದರಿಂದ ಸಾಬೀತಾಗಿದೆ ಎಂದು ನಿರ್ಮಲಾ ಇದೇ ವೇಳೆ ಗಂಭೀರ ಆರೋಪ ಮಾಡಿದ್ದಾರೆ.

‘ಮೊದಲು ಬಂದವರಿಗೆ ಆದ್ಯತೆ’ ನೀತಿ- ಸಮಿತಿ ಖಂಡನೆ
 2001ರಿಂದ 2009ರವರೆಗಿನ  ತರಂಗಾಂತರ ಹಂಚಿಕೆ ಕುರಿತು ತನಿಖೆ ನಡೆಸಿದ ಏಕ ಸದಸ್ಯ ಸಮಿತಿಯು ‘ಮೊದಲು ಬಂದವರಿಗೆ ಮೊದಲು ಆದ್ಯತೆ’ ನೀತಿಯನ್ನು ಕಟುವಾಗಿ ಖಂಡಿಸಿದೆ. ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್  ಅವರು ಈ ಸಂಬಂಧ 143 ಪುಟಗಳ ವರದಿ ಸಿದ್ದಪಡಿಸಿದ್ದು, ತರಂಗಾಂತರ ಹಂಚಿಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಜಾರಿಯಾಗಬೇಕು ಎಂದೂ ಹೇಳಿದ್ದಾರೆ.

ಬೇರೆ ದೇಶಗಳಲ್ಲಿರುವಂತೆ ನಮ್ಮಲ್ಲಿಯೂ ದೂರಸಂಪರ್ಕ ಕ್ಷೇತ್ರಕ್ಕೆ ಹೊಸ ಶಾಸನಗಳ ಅಗತ್ಯವಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿರುವ ‘ರೇಡಿಯೊ ಕಮ್ಯುನಿಕೇಷನ್ಸ್ ಆಕ್ಟ್’ನಂತಹ ಕಾನೂನು ಇಲ್ಲಿಯೂ ಜಾರಿಯಾಗಬೇಕು.ತರಂಗಾಂತರ ನಿರ್ವಹಣೆ ಹಾಗೂ ಸ್ವತಂತ್ರ ತರಂಗಾಂತರ ಪ್ರಾಧಿಕಾರ ರಚನೆ, ಸ್ಪರ್ಧಾತ್ಮಕತೆ ಹುಟ್ಟುಹಾಕುವಿಕೆ ಹಾಗೂ ತರಂಗಾಂತರ ಬಳಕೆಯ ಗರಿಷ್ಠ ಪ್ರಯೋಜನ ಸಮಾಜಕ್ಕೆ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಈ ಕಾಯಿದೆ ಹೊಂದಿರಬೇಕು ಎಂದು ಸೂಚಿಸಲಾಗಿದೆ.

ಅರ್ಹತೆ ಆಧರಿಸಿ ಅಭ್ಯರ್ಥಿಗಳ ಆಯ್ಕೆ ನಡೆಯಬೇಕೇ ಹೊರತು ಸುಖಾಸುಮ್ಮನೆ ಯಾರನ್ನೂ ಆಯ್ಕೆ ಮಾಡಬಾರದು.ತರಂಗಾಂತರಗಳ ಲಭ್ಯತೆಯೇ ದುರ್ಲಭವಾಗಿದ್ದು ಅಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿರುವಾಗ ‘ಮೊದಲು ಬಂದವರಿಗೆ ಆದ್ಯತೆ’ ಅನುಸರಿಸುವುದು ಸರಿಯಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಪಾರದರ್ಶಕತೆ ಅಳವಡಿಸಿಕೊಳ್ಳುವ ಮೊದಲ ಹೆಜ್ಜೆಯಾಗಿ ದೂರಸಂಪರ್ಕ ಇಲಾಖೆಯು, ವಿವಿಧ ನಿರ್ವಹಣಾ ಕಂಪೆನಿಗಳಿಗೆ ನೀಡಿರುವ ತರಂಗಾಂತರಗಳ ಒಪ್ಪಂದವನ್ನು ಬಹಿರಂಗಗೊಳಿಸಿ ನಂತರ ಅದನ್ನು ನಿಯಮಿತವಾಗಿ ಪರಿಷ್ಕೃತಗೊಳಿಸುತ್ತಿರಬೇಕು.

ದೂರಸಂಪರ್ಕ ಇಲಾಖೆಯು ವಿವಿಧ ಕಂಪೆನಿಗಳಿಗೆ ನೀಡಿರುವ ತರಂಗಾಂತರಗಳ ವಿವರ, ಭೌಗೋಳಿಕ ಪ್ರದೇಶ, ತಂತ್ರಜ್ಞಾನದ ಅಳವಡಿಕೆ ಇತ್ಯಾದಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ವ್ಯವಸ್ಥೆ ಇರಬೇಕು ಎಂದು ನ್ಯಾ.ಶಿವರಾಜ್ ಪಾಟೀಲ್ ಅವರು ವರದಿಯಲ್ಲಿ ಸೂಚಿಸಿದ್ದಾರೆ. ತರಂಗಾಂತರಗಳ ಸಮರ್ಥ ಹಾಗೂ ಯುಕ್ತ ಬಳಕೆ ಮೇಲೆ ನಿಗಾ ಇರಿಸುವ ಸಲುವಾಗಿ ಕಂಪೆನಿಗಳ ಲೆಕ್ಕಪರಿಶೋಧನೆ ನಡೆಸಬೇಕು.

ಪರವಾನಗಿ ಹೊಂದಲು ವಿಧಿಸಲಾಗುವ ಪ್ರವೇಶ ಶುಲ್ಕವನ್ನು ತರಂಗಾಂತರ ದರದೊಂದಿಗೆ ಹೊಂದಾಣಿಕೆ ಮಾಡಬಾರದು.ತರಂಗಾಂತರವನ್ನು ಹರಾಜು ಮೂಲಕ ಹಂಚುವ ಪ್ರಕ್ರಿಯೆಯೇ ಸೂಕ್ತ ಎಂದೂ ಸಹ ಈ ಸಮಿತಿ ಅಭಿಪ್ರಾಯಪಟ್ಟಿದೆ. ನಿಯಮಾವಳಿಗೆ ವಿರುದ್ಧವಾಗಿ ಹೋಗಲು ಬಯಸದ ಅಧಿಕಾರಿಗಳಿಗೆ ಭದ್ರತೆಯ ಖಾತ್ರಿ ಒದಗಿಸಬೇಕು.ಅಧಿಕಾರಿಗಳ ಬಡ್ತಿ ಅಥವಾ ವರ್ಗಾವಣೆಗೆ ಸಂಬಂಧಪಟ್ಟ ಗೋಪ್ಯ ವರದಿಗಳನ್ನು ಸ್ವತಂತ್ರ  ಪರಿಶೀಲನೆ ನಡೆಸುವ ಸಲುವಾಗಿ ಸ್ವತಂತ್ರ ಸಂಸ್ಥೆಯೊಂದನ್ನು ರಚಿಸಬೇಕು ಎಂದೂ ವರದಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಟಿಟಿಎಸ್‌ಎಲ್‌ಗೆ ಅನುಕೂಲ
ಸಮ್ಮತಿ ಪತ್ರಕ್ಕೆ ಅನುಗುಣವಾಗಿ ನಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಸಿಕ್ಕ ವಿನಾಯಿತಿ ಸಿಕ್ಕಿದ್ದರಿಂದಾಗಿ ಟಾಟಾ ಸಮೂಹದ ದೂರಸಂಪರ್ಕ ಸೇವಾ ಕಂಪೆನಿ ಟಾಟಾ ಟೆಲಿ ಸರ್ವೀಸಸ್‌ಗೆ (ಟಿಟಿಎಸ್‌ಎಲ್) 2001ರಲ್ಲಿ ಮೂಲ ಸೇವಾ ಪರವಾನಗಿ ಪಡೆಯಲು ಅನುಕೂಲವಾಗಿರುವ ಸಾಧ್ಯತೆ ಇದೆ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.ಮಹಾರಾಷ್ಟ್ರ, ಹರಿಯಾಣ, ಕೇರಳ, ಪಂಜಾಬ್ ಮತ್ತು  ರಾಜಸ್ತಾನಗಳಲ್ಲಿನ  ದೂರಸಂಪರ್ಕ ನಿರ್ವಹಣೆಗೆ ಮೂಲ ಸೇವಾ ಪರವಾನಗಿ ನೀಡುವ ಮುನ್ನ ಟಿಟಿಎಸ್‌ಎಲ್‌ಗೆ ಹಲವು ಬಾರಿ ವಿನಾಯಿತಿ ನೀಡಲಾಗಿತ್ತು ಎಂದು ವರದಿ ಹೇಳಿದೆ.

ತರಂಗಾಂತರಕ್ಕೆ ಕಾಯುತ್ತಿದ್ದೇವೆ- ದೇವಾಸ್ ಸಮರ್ಥನೆ
ಇತ್ತ ಎಸ್-ಬ್ಯಾಂಡ್ ಒಪ್ಪಂದ ರದ್ದುಗೊಳಿಸಲು ಕೇಂದ್ರ ಸರ್ಕಾರ ತರಾತುರಿಯಲ್ಲಿದ್ದರೆ ಅತ್ತ ತನ್ನ ಯೋಜಿತ ವಹಿವಾಟಿಗೆ ಅಗತ್ಯವಾದ ಸೂಕ್ತ ಅನುಮತಿಗಳೆಲ್ಲವನ್ನೂ ತಾನು ಪಡೆದಿರುವುದಾಗಿ ದೇವಾಸ್ ಮಲ್ಟಿಮೀಡಿಯಾ ಸಮರ್ಥಿಸಿಕೊಂಡಿದೆ.‘ಅಂತರಿಕ್ಷ್‌ದೊಂದಿಗೆ ಕಾನೂನುಬದ್ಧವಾಗಿ ಮಾಡಿಕೊಂಡಿರುವ ಒಪ್ಪಂದ ಈಗಲೂ ಚಾಲ್ತಿಯಲ್ಲಿದೆ.ಒಪ್ಪಂದದ ಪ್ರಕಾರ ಇಸ್ರೊ ನಮಗೆ ನೀಡಬೇಕಿರುವ ತರಂಗಾಂತರಕ್ಕಾಗಿ ಕಾಯುತ್ತಿದ್ದೇವೆ’ ಎಂದು ದೇವಾಸ್ ಅಧ್ಯಕ್ಷ ಹಾಗೂ ಸಿಇಒ ರಾಮಚಂದ್ರನ್ ವಿಶ್ವನಾಥನ್ ಸ್ಪಷ್ಟಪಡಿಸಿದ್ದಾರೆ.

‘ಕಳೆದ ಆರು ವರ್ಷಗಳಿಂದ ಒಪ್ಪಂದದ ಎಲ್ಲಾ ಬಾಧ್ಯತೆಗಳನ್ನೂ ನಾವು ಪಾಲಿಸಿಕೊಂಡು ಬಂದಿದ್ದೇವೆ. ನಿಗದಿತ ತರಂಗಾಂತರ ನೀಡುವಲ್ಲಿ ಈಗಾಗಲೇ ಎರಡು ವರ್ಷಕ್ಕೂ ಹೆಚ್ಚು ಕಾಲ ವಿಳಂಬವಾಗಿದೆ’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದಿಂದ ಅಗತ್ಯ ಒಪ್ಪಿಗೆ ಹಾಗೂ ಅನುಮತಿಗಳನ್ನು ಪಡೆದ ನಂತರವೇ ದೇವಾಸ್ ಯೋಜನೆಗಳನ್ನು ಕೈಗೊಂಡಿತ್ತು. ನಂತರ ಎಲ್ಲವನ್ನೂ ಬಾಹ್ಯಾಕಾಶ ಆಯೋಗ ಮತ್ತು ಕೇಂದ್ರ ಸಚಿವ ಸಂಪುಟಗಳ ಗಮನಕ್ಕೆ ಕೂಡ ತರಲಾಗಿತ್ತು. ಕಡೆಯದಾಗಿ 2006ರ ಫೆಬ್ರುವರಿಯಲ್ಲಿ ಅಂತರಿಕ್ಷ್ ಇದಕ್ಕೆ ಒಪ್ಪಿಗೆಯ ಮುದ್ರೆ ಹಾಕಿತ್ತು ಎಂದು ಅವರು ವಿವರಿಸಿದ್ದಾರೆ.

ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯ (ಎಫ್‌ಐಪಿಬಿ) ಅನುಮತಿ ಪಡೆದು ಹಾಗೂ ಸರ್ಕಾರದ ನೀತಿ ನಿಯಮಗಳ ಚೌಕಟ್ಟಿನ ವ್ಯಾಪ್ತಿಯಲ್ಲೇ ದೇವಾಸ್‌ದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ. ಇಸ್ರೊದ ಜಿಸ್ಯಾಟ್ 6 ಮತ್ತು ಜಿಸ್ಯಾಟ್ 6ಎ ಉಪಗ್ರಹಗಳ ನೆರವಿನಿಂದ ಸಾಧ್ಯವಾಗುವ ಅತ್ಯಾಧುನಿಕ ತಂತ್ರಜ್ಞಾನವನ್ನು ದೇವಾಸ್ ಅಭಿವೃದ್ಧಿಪಡಿಸಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ. ದೇವಾಸ್ ಸಂಸ್ಥೆಯೊಂದಿಗೆ ಇಸ್ರೊದ ನಿವೃತ್ತ ಅಧಿಕಾರಿಗಳು ಹೊಂದಿರುವ ಸಂಬಂಧ ಸರ್ಕಾರದ ನಿಯಮಾವಳಿಗೆ ಅನುಗುಣವಾಗಿಯೇ ಇದೆ ಎಂದು ರಾಮನಾಥನ್ ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT