ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪಸ್ವಿಯ ಜೀವಂತ ಸಮಾಧಿ ಯತ್ನಕ್ಕೆ ತಡೆ

Last Updated 22 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಜಮಖಂಡಿ: ಜೀವಂತ ಸಮಾಧಿ ಹೊಂದಲು ತಪಸ್ವಿಯೊಬ್ಬರು ನಡೆಸಿದ ಪ್ರಯತ್ನವನ್ನು ಪೊಲೀಸರು ತಪ್ಪಿಸಿದ ಘಟನೆ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಸಮಾಧಿ ಹೊಂದಲು ಬಯಸಿದ್ದ ಗ್ರಾಮದ ದುಂಡೇಶ್ವರ ಮಹಾರಾಜ (70) ಅವರಿಗೆ ಚಿಕ್ಕಪಡಸಲಗಿ ಪುನರ್ವಸತಿ ಕೇಂದ್ರದಲ್ಲಿ ಶ್ರೀಗುರು ರಾಮಾವಧೂತ ಮಠದ ನೆಲಮಾಳಿಗೆಯಲ್ಲಿ ಸಮಾಧಿಗಾಗಿ ಸ್ಥಳ  ಸಿದ್ಧಪಡಿಸಿ, ಸಂಜೆ 5ಕ್ಕೆ ಸಮಾಧಿ ಪ್ರವೇಶಕ್ಕೆ ಮುಹೂರ್ತ ನಿಗದಿಪಡಿಸಲಾಗಿತ್ತು. ಇದನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ  ಭಕ್ತರು ಸೇರಿದ್ದರು.

ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಾವಳಗಿ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ವೆಂಕಟೇಶ ಯಡಹಳ್ಳಿ ಮತ್ತು ಸಿಬ್ಬಂದಿ, ತಪಸ್ವಿ ಸಮಾಧಿಯಾಗಲು ಸಿದ್ಧಪಡಿಸಿದ್ದ ಸ್ಥಳಕ್ಕೆ ಹೋಗುವ ಬಾಗಿಲಿಗೆ ಬೀಗ ಹಾಕಿ, ಕೀಲಿಕೈಯನ್ನು ತೆಗೆದು ಇಟ್ಟುಕೊಂಡರು. ಹಾಗಾಗಿ ದುಂಡೇಶ್ವರ ಮಹಾರಾಜರಿಗೆ ಆ ಸ್ಥಳಕ್ಕೆ ಹೋಗಲು ಆಗಲಿಲ್ಲ.

ಮಠದಲ್ಲಿ ಐದು ದಿನಗಳಿಂದ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಹಲವು ಮಂದಿ ರಾಜಕೀಯ ಧುರೀಣರೂ ಸ್ಥಳಕ್ಕೆ ಭೇಟಿ ನೀಡಿದ್ದರು. ಸಮಾಧಿ ಸ್ಥಳ  ಪ್ರವೇಶಿಸಿ ಒಳಗಿಂದ ದ್ವಾರವನ್ನು ಮುಚ್ಚಿಕೊಂಡರೆ ಅದನ್ನು ತೆರೆಯಲು ಆಗುತ್ತಿರಲಿಲ್ಲ ಎನ್ನಲಾಗಿದೆ. ಇದರ ನಿರ್ಮಾಣಕ್ಕೆ ರೂ. 50 ಸಾವಿರ  ವ್ಯಯಿಸಲಾಗಿತ್ತು ಎಂದು ಹೇಳಲಾಗಿದೆ. ದುಂಡೇಶ್ವರ ಅವರು ಶ್ರೀಗುರು ರಾಮಾವಧೂತ ಶರಣರ ವಿದ್ಯಾವರ್ಧಕ ಸಂಘ ಸ್ಥಾಪಿಸಿ, ಆ ಮೂಲಕ ಚಿಕ್ಕಪಡಸಲಗಿ ಪುನರ್ವಸತಿ ಕೇಂದ್ರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಆರಂಭಿಸಿದ್ದಾರೆ.

ಸಮಾಧಿ ಹೊಂದುವುದನ್ನು ತಪ್ಪಿಸಿದರೂ ತಮ್ಮ ಈ ಸಂಕಲ್ಪದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಭಕ್ತರ ಸಮ್ಮುಖದಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT