ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿನಲ್ಲಿ ಕಂಬಾರರಿಗೆ ಜ್ಞಾನಪೀಠ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕನ್ನಡ ಭಾಷೆಗೆ ಎಂಟನೆ  ಪ್ರಶಸ್ತಿ  ತಂದುಕೊಟ್ಟ ಡಾ. ಚಂದ್ರಶೇಖರ ಕಂಬಾರರು ಗುರುವಾರ ತವರಿನಲ್ಲೇ `ಜ್ಞಾನ ಪೀಠ~ ಅಲಂಕರಿಸುತ್ತಿದ್ದರೆ ಜನರಿಂದ ಚಪ್ಪಾಳೆಯ ಸುರಿಮಳೆ.
ತಮ್ಮೂರಿನ `ಜೈಸಿದ್ದ ನಾಯಕ~ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯನ್ನು ಬೆಳಗಾವಿಯಲ್ಲಿ ಸ್ವೀಕರಿಸಿದ್ದನ್ನು ಕಣ್ತುಂಬಿಕೊಂಡ ಘೋಡಗೇರಿಯ ಜನರ ಮನದಲ್ಲಿ ಧನ್ಯತಾ ಭಾವ.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ 2010ನೇ ಸಾಲಿನ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆಯೇ ಮುಸ್ಸಂಜೆಯಲ್ಲೂ ಕನ್ನಡದ `ಶಿಖರ ಸೂರ್ಯ~ ಪ್ರಜ್ವಲಿಸಿದರು.

ಬೆಳಗಾವಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 46ನೇ ಜ್ಞಾನ ಪೀಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿಯವರು ಚಂದ್ರಶೇಖರ ಕಂಬಾರರಿಗೆ ವಾಗ್ದೇವಿ ಪುತ್ಥಳಿ, ಏಳು ಲಕ್ಷ ರೂಪಾಯಿ ನಗದು ಒಳಗೊಂಡ `ಜ್ಞಾನ ಪೀಠ~ ಪ್ರಶಸ್ತಿ  ಪ್ರದಾನ ಮಾಡಿದರು. ಈ ಮೂಲಕ ತವರಿನಲ್ಲೇ `ಜ್ಞಾನ ಪೀಠ~ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಎಂಬ ಗೌರವಕ್ಕೆ    `ಜೋಕುಮಾರಸ್ವಾಮಿ~ ಪಾತ್ರರಾದರು.

`ಭಾರತೀಯ ಭಾಷೆಗಳಲ್ಲಿ ಸೃಜನಶೀಲ ಬರಹಗಳಿದ್ದು, ಸೂಕ್ತ ವೇದಿಕೆ ಕಲ್ಪಿಸುವ ಮೂಲಕ  ಅವುಗಳನ್ನು ಪ್ರೋತ್ಸಾಹಿಸಬೇಕು. `ಸಾಹಿತ್ಯದ ಬೆಳವಣಿಗೆ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಸಮಾಜ, ಖಾಸಗಿ ಸಂಘ-ಸಂಸ್ಥೆಗಳೂ ಭಾರತೀಯ ಭಾಷೆಗಳ ಹಾಗೂ ಸಾಹಿತ್ಯಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು. ಕಂಬಾರರ ಉತ್ತಮ ಕೃತಿಗಳು ಭಾರತದ ಇತರ ಭಾಷೆಗಳ ಜೊತೆಗೆ ಇಂಗ್ಲಿಷ್‌ಗೂ ಅನುವಾದಗೊಳ್ಳಬೇಕು. ಸಾಹಿತ್ಯ ಅಕಾಡೆಮಿ ಅನುವಾದ ಕಾರ್ಯ ಮಾಡುತ್ತಿದ್ದರೂ, ಇದು ಸಾಲದು. ರಾಜ್ಯ ಸರ್ಕಾರ, ಲೇಖಕರು, ಅನುವಾದಕರು ಹಾಗೂ ಸಾಹಿತ್ಯ ಪ್ರೇಮಿಗಳೂ ಈ ಕೆಲಸದಲ್ಲಿ ಕೈಜೋಡಿಸಬೇಕು~ ಎಂದು ರಾಷ್ಟ್ರಪತಿ ಹೇಳಿದರು.


ಜೀವಂತಿಕೆ ಉಳಿಸಿ- ಕಂಬಾರ
ಪ್ರಶಸ್ತಿ ಸ್ವೀಕರಿಸಿದ ಡಾ. ಕಂಬಾರ ಅವರು, `ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವು ಇಂದು ವಿಷಮಗೊಳ್ಳುತ್ತಿದೆ. ಪ್ರಗತಿಯ ಅಬ್ಬರದಲ್ಲಿ ನಮ್ಮ ಕಾಲದ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೇವೆ. ಆಧುನಿಕ ಪ್ರಪಂಚದಲ್ಲೂ ಜೀವಂತಿಕೆ ಉಳಿಸಿಕೊಂಡು ಹೋಗಬೇಕಾಗಿದೆ. ನನ್ನ ಜನರ ನೋವು ಬರವಣಿಗೆಯಾಗಿ ಹೊರಹೊಮ್ಮಿದೆ~ ಎಂದು ಹೇಳಿದರು.

`ಲಾವಣಿ, ಗಾದೆಗಳ ಮೂಲಕ ನನ್ನಲ್ಲಿ ಕಾಲ್ಪನಿಕ ಮೌಖಿಕ ಪರಂಪರೆ ಬೆಳೆಸಿದ ಘೋಡಗೇರಿ ಜನರಿಗೆ ಹಾಗೂ ಕನ್ನಡ ನಾಡಿಗೆ ಜ್ಞಾನ ಪೀಠ ಪ್ರಶಸ್ತಿಯ ಗೌರವ ಸಲ್ಲುತ್ತದೆ~ ಎಂದು ಭಾವುಕರಾಗಿ ಅವರು ನುಡಿದರು.

ರಾಜ್ಯಪಾಲ ಎಚ್.ಆರ್.ಭಾರದ್ವಾಜ್, `ಕರ್ನಾಟಕ ಹಾಗೂ ಕನ್ನಡ ಭಾಷೆ ಶ್ರೀಮಂತವಾಗಿದೆ. ವೈವಿಧ್ಯತೆಯನ್ನು ಹೊಂದಿರುವ ಕನ್ನಡವು ಹೀಗಾಗಿಯೇ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದೆ. ರಾಜ್ಯದ ವೈವಿಧ್ಯಮಯವಾಗಿರುವ ಸಂಸ್ಕೃತಿಯನ್ನು ಒಂದು ಶಕ್ತಿಯನ್ನಾಗಿ ರೂಪಿಸಬೇಕಾಗಿದೆ~ ಎಂದು ಅಭಿಪ್ರಾಯಪಟ್ಟರು.   ಸಮಾರಂಭದ ಬಳಿಕ ನೂರಾರು ಅಭಿಮಾನಿಗಳು ಡಾ. ಕಂಬಾರ ಅವರನ್ನು ಸತ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT