ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ತಾಂಡಾ ಸ್ಥಳಾಂತರ: ಸಚಿವರ ಜೊತೆ ಚರ್ಚೆ ಶೀಘ್ರ'

ಕಿರದಳ್ಳಿ ತಾಂಡಾದಲ್ಲಿ ನೀರು ಶುದ್ಧೀಕರಣ ಘಟಕ ಆರಂಭ
Last Updated 11 ಜುಲೈ 2013, 10:42 IST
ಅಕ್ಷರ ಗಾತ್ರ

ಕೆಂಭಾವಿ: ಅರ್ಸೇನಿಕ್ ನೀರಿನಿಂದ ಬಳಲುತ್ತಿರುವ ಕಿರದಳ್ಳಿ ತಾಂಡಾದ ಬಡ ಜನರಿಗಾಗಿ ರಾಜ್ಯ ಸರ್ಕಾರ ಕೇವಲ 15 ದಿನಗಳಲ್ಲಿ ನೀರು ಶುದ್ದಿಕರಿಸುವ ಘಟಕವನ್ನು ಸ್ಥಾಪಿಸಿದ್ದು, ಈಮೂಲಕ ಬಡ ಜನರಿಗಾಗಿ ಇರುವ ಕಳಕಳಿ ಮತ್ತು ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ವಾಟರ್ ಲೈಫ್ ಇಂಡಿಯಾಗಳ ಸಹಯೋಗದಲ್ಲಿ ಸಮೀಪದ ಕಿರದಳ್ಳಿ ತಾಂಡಾದಲ್ಲಿ ಸ್ಥಾಪಿಸಲಾದ ನೀರು ಶುದ್ಧೀಕರಣ ಘಟಕವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿಗಳು ಇತ್ತೀಚಿಗೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ  ಸಭೆ ನಡೆಸಿದ್ದು, ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ತಕ್ಷಣ ನೀರಿನ ವ್ಯವಸ್ಥೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇತ್ತೀಚಿಗೆ ಸಚಿವನಾಗಿ ಕಿರದಳ್ಳಿ ತಾಂಡಾಕ್ಕೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಇಲ್ಲಿನ ಆರ್ಸೇನಿಕ್ ನೀರಿನ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದೆ. ಈ ಹಿನ್ನೆಲೆಯಲ್ಲಿ ಕೇವಲ 15 ದಿನಗಳಲ್ಲಿ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಂಡು ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ರಾಜ್ಯದಲ್ಲಿಯೇ ಇಷ್ಟು ಶೀಘ್ರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಉದಾಹರಣೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದು ಹೇಳಿದರು.

ಅರ್ಸೇನಿಕ್ ಪೀಡಿತ ಕಿರದಳ್ಳಿ ತಾಂಡಾದ ಸ್ಥಳಾಂತರ ಮಾಡುವ ಕುರಿತು ಶೀಘ್ರ ಕಂದಾಯ ಸಚಿವರೊಂದಿಗೆ ಚರ್ಚಿಸಲಾಗುವುದು. ಅವಶ್ಯಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಯಾದಗಿರಿ ಜಿಲ್ಲೆಯ 19 ಹಳ್ಳಿಗಳು ಆರ್ಸೇನಿಕ್ ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ಈ ಹಿನ್ನೆಲೆಯಲ್ಲಿ 25 ಬಾವಿಗಳು ಹಾಗೂ 57 ಕೊಳವೆ ಬಾವಿಗಳನ್ನು ನಿಷೇಧಿಸಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ.  ಮಾವಿನ ಮಟ್ಟಿ, ಜೈನಾಪೂರ, ಕಿರದಳ್ಳಿ-2, ಗೊಡ್ರಿಹಾಳ, ಗೌಡಗೇರಾ, ಚಿಗರಿಹಾಳ ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕ ಆಳವಡಿಸಲಾಗಿದೆ. ರೂ. 24 ಕೋಟಿ ವೆಚ್ಚದಲ್ಲಿ 14 ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಕಾಮಗಾರಿ ಇನ್ನಷ್ಟು ಚುರುಕಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.

ಶಾಸಕ ಗುರು ಪಾಟೀಲ ಶಿರವಾಳ ಮಾತನಾಡಿ, ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಸಚಿವರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಯಾದಗಿರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ  ಲಕ್ಷ್ಮಿ ಚಂಡ್ರಕಿ, ಡಿವೈಎಸ್ಪಿ ಕಟ್ಟಿಮನಿ, ಸುರಪುರ ತಾಲ್ಲೂಕು ಪಂಚಾಯಿತಿ ಸದಸ್ಯ ನಂದರೆಡ್ಡೆಪ್ಪ ಮೇಟಿ, ಮಾನಪ್ಪ ಸೂಗುರು, ಮಲ್ಲಣ್ಣ ಮೇಟಿ, ವಾಟರ್ ಲೈಫ್ ಮುಖ್ಯಸ್ಥ ಸುರೇಶ ಕುಲಕರ್ಣಿ, ಪಂಚಾಯತ್ ರಾಜ್ ಎಂಜಿನಿಯರಿಂಗ್‌ನ ಎಂ.ಆರ್, ಖಾಂದಾರೆ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT