ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಡಾಗಳಿಗೆ ಮೂಲಸೌಲಭ್ಯ: ಶಾಸಕ ಭರವಸೆ

Last Updated 7 ಜನವರಿ 2012, 9:35 IST
ಅಕ್ಷರ ಗಾತ್ರ

ಬೀದರ್: ತಾಂಡಾಗಳಿಗೆ ಮೂಲಸೌಲಭ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ಕೊಡಲಾಗುವುದು ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ಭರವಸೆ ನೀಡಿದರು.

ತಾಲ್ಲೂಕಿನ ಸಂಗೋಳಗಿ (ಬಿ) ತಾಂಡಾದಲ್ಲಿ ಶುಕ್ರವಾರ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮುಖ್ಯರಸ್ತೆವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ತಾಂಡಾಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತಿತರ ಸೌಕರ್ಯಗಳನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸಂಗೋಳಗಿಯ ನಾಲ್ಕು ತಾಂಡಾಗಳಿಗೆ ರಸ್ತೆ, ಒಳಚರಂಡಿ ಸೌಲಭ್ಯ ಕಲ್ಪಿಸಲಾಗಿದೆ. ಸಂಗೋಳಗಿ (ಬಿ) ತಾಂಡಾದಿಂದ ಮುಖ್ಯ ರಸ್ತೆವರೆಗಿನ 3.45 ಕಿ.ಮೀ. ರಸ್ತೆಯನ್ನು 98 ಲಕ್ಷ 80 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ರಸ್ತೆ ನಿರ್ಮಾಣದಿಂದ ತಾಂಡಾ ಜನರಿಗೆ ಆಸ್ಪತ್ರೆ ಮತ್ತಿತರ ಕಡೆಗೆ ಹೋಗಲು ಅನುಕೂಲವಾಗಲಿದೆ ಎಂದು ತಿಳಿಸಿದರು.

  ತಾಂಡಾದಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಮೊದಲ ಹಂತದಲ್ಲಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ, ಒಳಚರಂಡಿ ಕಾಮಗಾರಿ ಪೂರ್ಣಗೊಂಡಿವೆ. ಎರಡನೇ ಹಂತದಲ್ಲಿ ಸಿ.ಸಿ ರಸ್ತೆಗಳ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಸಂಗೋಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಕಾರಂಜಾ ಜಲಾಶಯದಿಂದ ಕುಡಿಯುವ ನೀರಿನ ಪೂರೈಸುವುದಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮೋಯಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪರಪೀಡಿತ ಬೀದರ್ ತಾಲ್ಲೂಕಿನಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತಿತರ ಕಾಮಗಾರಿಗಾಗಿ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪುತಳಾಬಾಯಿ ಮಾಣಿಕ, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರು, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ದತ್ತಾತ್ರಿ ಪೋಲಾ, ಯೋಜನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ತಾಂಡೂರೆ, ತಾ.ಪಂ. ಮಾಜಿ ಸದಸ್ಯ ಬಸವರಾಜ ಅಮ್ಮಣ್ಣ, ಪ್ರಮುಖರಾದ ಅಶೋಕ ಪಾಟೀಲ್, ಚಂದ್ರಶೇಖರ ಚನಶೆಟ್ಟಿ, ಬಾಬುರಾವ ಮಾಳಗೆ, ವೈಜಿನಾಥ, ರಾಜಕುಮಾರ ಬಾವಗಿ ಮತ್ತಿತರರು ಉಪಸ್ಥಿತರಿದ್ದರು.

ಮಂದಕನಳ್ಳಿ ತಾಂಡಾದಲ್ಲಿ 85.73 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 3.19 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿಗೂ ಶಾಸಕ ಬಂಡೆಪ್ಪ ಕಾಂಶೆಪೂರ್ ಶಂಕುಸ್ಥಾಪನೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT