ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಡಾದಲ್ಲೊಂದು ವೀರ ಯೋಧನ ಸಮಾಧಿ!

Last Updated 14 ನವೆಂಬರ್ 2011, 8:40 IST
ಅಕ್ಷರ ಗಾತ್ರ

ಲಿಂಗಸುಗೂರ: ರಾಷ್ಟ್ರದ ರಕ್ಷಣೆ ಮತ್ತು ಭದ್ರತೆ ಸಂದರ್ಭದಲ್ಲಿ ನಡೆಯುವ ಯುದ್ಧಗಳ ಸಂದರ್ಭದಲ್ಲಿ ಮೃತಪಡುವ ವೀರ ಯೋಧರ ಮೃತದೇಹಗಳನ್ನು ತಂದು ತವರು ಗ್ರಾಮಗಳಲ್ಲಿ ಅಂತ್ಯಕ್ರಿಯೆ ಮಾಡುವುದು ವಾಡಿಕೆ. ಮಹತ್ವದ ಸಂದರ್ಭದಲ್ಲಿ ವೀರಮರಣ ಹೊಂದಿದವರ ಹೆಸರಲ್ಲಿ ವೃತ್ತಗಳಿಗೆ, ರಸ್ತೆಗಳಿಗೆ ಹೆಸರು ನಾಮಕರಣ ಮಾಡುವುದನ್ನು ಕೇಳಿದ್ದೇವೆ. ಆದರೆ, ಗೊರೆಬಾಳತಾಂಡಾದ ಪಾಂಡೆಪ್ಪ ರಾಠೋಡ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೃತಪಟ್ಟಿರುವುದಕ್ಕೆ ಸಮಾಧಿ ನಿರ್ಮಿಸಿರುವುದು ವಿಶೇಷ.

ಕಳೆದ 2005ರ ಫೆಬ್ರುವರಿ ತಿಂಗಳಲ್ಲಿ ಉತ್ತರಾಂಚಲದ ಮಿಲಿಟರಿ ರೆಜಿಮೆಂಟಲ್‌ದಲ್ಲಿ ಬಾಕ್ಸಿಂಗ್ ಆಡುವಾಗ ಗೊರೆಬಾಳತಾಂಡಾ-2ರ ಪಾಂಡೆಪ್ಪ ಭೀಕೆಪ್ಪ ರಾಠೋಡ ಮೃತಪಟ್ಟಿದ್ದಾನೆ. ಮೃತ ಕುಟುಂಬಕ್ಕೆ ಸರ್ಕಾರದಿಂದ ಸಹಾಯ, ಸಹಕಾರ ಕೋರಿ ಪತ್ರ ಬರೆಯಲಾಯಿತು. ಸ್ಥಳೀಯ ಸಂಸ್ಥೆಗಳು ನಿವೇಶನ, ಜಮೀನು ನೀಡುವ ಭರವಸೆಗಳು ಹಿಸಿಯಾದವು. ಸರ್ಕಾರದ ವ್ಯವಸ್ಥೆಗೆ ಬೇಸತ್ತ ಕುಟುಂಬ ಮೃತ ಪಾಂಡೆಪ್ಪನ ಹೆಸರಿನಲ್ಲಿ ಬಂದಿದ್ದ ಹಣದಲ್ಲಿ ಸಮಾಧಿ ನಿರ್ಮಿಸಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಜೀವ ವಿಮಾ ಮತ್ತು ಮಿಲಿಟರಿ ಕಚೇರಿಗಳಿಂದ ಅಂದಾಜು ರೂ. 15ಲಕ್ಷ ಹಣ ಮೃತ ಕುಟುಂಬಕ್ಕೆ ಬಂದಿತ್ತು. ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯದೆ ಹೋದಾಗ, ಮಗನ ಹೆಸರು ನಾಮಕರಣ ಮಾಡುವ ವಿಷಯಕ್ಕೆ ನೊಂದ ಕುಟುಂಬ ಸಮಾಧಿ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಪೂಜೆ ಮಾಡುತ್ತಿದ್ದಾರೆ. ಪುಣ್ಯತಿಥಿ ದಿನದಂದು ವಿಶೇಷ ಪೂಜೆ ಸಲ್ಲಿಸಿ ತಾಂಡಾ ಮತ್ತು ಸುತ್ತಮುತ್ತಲಿನ ತಾಂಡಾ ಹಾಗೂ ಸಂಬಂಧಿಗಳಿಗೆ ಊಟದ ವ್ಯವಸ್ಥೆ ಮಾಡುವುದು ವಾಡಿಕೆ.

ಈ ಕುರಿತು `ಪ್ರಜಾವಾಣಿ~ ಮೃತ ತಂದೆ ಭೀಕೆಪ್ಪ ರಾಠೋಡ ಅವರನ್ನು ಸಂಪರ್ಕಿಸಿದಾಗ ರಾಷ್ಟ್ರದ ಗಡಿ ಕಾಯಲು ಮಗ ಹೋಗಿದ್ದ. ಆಟ ಆಡುವಾಗ ಮೃತಪಟ್ಟ. ಚಿಕ್ಕ ವಯಸ್ಸಿನ ಮಗನ ಹೆಸರು ರಸ್ತೆ, ವೃತ್ತಗಳಿಗೆ ಇಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು ಸ್ಪಂದಿಸಲಿಲ್ಲ. ಆ ನೋವಿನಿಂದ ಪ್ರತಿಯೋರ್ವ ಯುವಕರು ರಾಷ್ಟ್ರದ ರಕ್ಷಣೆಗೆ ಸೇರ‌್ಪಡೆಗೊಳ್ಳಲು ತಮ್ಮ ಮಗ ಪಾಂಡೆಪ್ಪ ಮಾರ್ಗದರ್ಶಕ ಆಗಲಿ ಎಂಬ ಸದುದ್ದೇಶದಿಂದ ಸಮಾಧಿ ನಿರ್ಮಿಸಿ, ಪೂಜೆ, ಪುನಸ್ಕಾರ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ತಾಂಡಾದ ತಿಪ್ಪಣ್ಣ ಕಾರಬಾರಿ, ಮಾನಸಿಂಗ್, ಠಾಕ್ರೆಪ್ಪ ಸೇರಿದಂತೆ ಇತರರು ವೀರಯೋಧನ ಗುಣಗಾನ ಮಾಡಿದರು. ತಾಂಡಾದ ಯುವಕರಿಗೆ ಮಾದರಿಯಾಗಿದ್ದ ಪಾಂಡೆಪ್ಪನ ಮೂರ್ತಿ ಪ್ರತಿಷ್ಠಾಪನೆ ಯುವಕರಿಗೆ ಪ್ರೇರಣೆಯಾಗಿದೆ. ತಮ್ಮ ಮಕ್ಕಳು ಕೂಡ ಪಾಂಡೆಪ್ಪನಂತೆ ರಾಷ್ಟ್ರ ರಕ್ಷಣೆಗೆ ಹೋಗಲು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಸೈನಿಕರ ಬಗ್ಗೆ, ರಾಷ್ಟ್ರದ ಬಗ್ಗೆ ಹೊಂದಿರುವ ಕಳಕಳಿಯನ್ನು ಮುಕ್ತವಾಗಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT