ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾನೇ ಹಾಕಿದ ನಿಯಮ ಮುರಿದ ಜಿಲ್ಲಾಡಳಿತ!

Last Updated 10 ಡಿಸೆಂಬರ್ 2013, 4:52 IST
ಅಕ್ಷರ ಗಾತ್ರ

ಧಾರವಾಡ: ಹಲವು ಕಾರಣಗಳಿಂದಾಗಿ ಈ ಬಾರಿಯ ಧಾರವಾಡ ಜಿಲ್ಲಾ ಉತ್ಸವ ವಿವಾದಕ್ಕೆ ಒಳಗಾಗಿದೆ. ವಿವಿಧ ಉಪಸಮಿತಿಗಳ ಸದಸ್ಯರಾ­ಗಿರು­ವವರು ಕಾರ್ಯಕ್ರಮ ನೀಡಬಾರದು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿ­ದ್ದರೂ, ಉಪಸಮಿತಿಯ ಅಧ್ಯಕ್ಷರೇ ಕಾರ್ಯ­ಕ್ರಮ ನೀಡಲಿದ್ದಾರೆ. ಇದು ಅವಕಾಶ ವಂಚಿತ ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ.

ಅಲ್ಲದೇ, ಪರಿಸರ ಸಂಬಂಧಿ ಚಟುವಟಿಕೆ ನಡೆಸುವ ಸಂಸ್ಥೆಯೊಂದು ನಾಟಕ ತಂಡವಾಗಿ ಕಾರ್ಯಕ್ರಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ! ನಾಟಕ ಆಯ್ಕೆ ಸಮಿತಿ ತಿರಸ್ಕರಿಸಿದ ನಾಟಕ ತಂಡ ‘ಮೇಲಿನವರಿಂದ’ ಒತ್ತಡ ತಂದು ನಾಟಕ ಪ್ರದರ್ಶನಕ್ಕೆ ಸಜ್ಜಾಗಿದೆ. ಉಪಸಮಿತಿಯಲ್ಲಿ ಇರುವ ಹಲವರು ಬೇರೆ ಬೇರೆ ಗೋಷ್ಠಿಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತದ ನಿಯಮ ಕೆಲವರಿಗಷ್ಟೇ ಅನ್ವಯವಾ­ಗಿದ್ದು, ಉಳಿದವರು ಮಾತ್ರ ಕಾರ್ಯ­ಕ್ರಮ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ.

‘ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಅನಿಲ್‌ ದೇಸಾಯಿ ಹಾಗೂ ಉಪ್ಪಿನ ಬೆಟಗೇರಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕರಾಗಿರುವ ಮಹಾದೇವ ಸತ್ತಿಗೇರಿ ಅವರು ಹಾಸ್ಯೋತ್ಸವ ಉಪಸಮಿತಿಯಲ್ಲಿದ್ದಾರೆ. ದೇಸಾಯಿ ಹಾಸ್ಯೋತ್ಸವ ಉಪಸಮಿತಿ ಅಧ್ಯಕ್ಷರೂ ಹೌದು. ಜಿಲ್ಲಾಡಳಿತ ಈ ಮೊದಲೇ ಹೇಳಿದಂತೆ ನಡೆದಿದ್ದರೆ, ಇಬ್ಬರೂ ಕಾರ್ಯಕ್ರಮ ನೀಡಬಾರದಿತ್ತು. ಆದರೆ, ಸಮಿತಿಯಲ್ಲಿರು­ವವರು ಕಾರ್ಯಕ್ರಮ ನೀಡಬಾರದು ಎಂಬ ನಿಯಮ ಮಾಡಿದ ಕೆಲ ದಿನಗಳಲ್ಲೇ ಇವರಿಬ್ಬರ ಹೆಸರುಗಳೂ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ನಾವು ಈ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದರೂ ನಮಗೆ ಅವಕಾಶ ಸಿಕ್ಕಿಲ್ಲ. ಇದು ಜಿಲ್ಲಾಡಳಿತದ ದ್ವಂದ್ವ ನೀತಿಯಲ್ಲವೇ’ ಎಂದು ಅವಕಾಶ ವಂಚಿತರಾದ ಸಮಿತಿಯ ಸದಸ್ಯ ಮಲ್ಲಪ್ಪ ಹೊಂಗಲ್‌ ‘ಪ್ರಜಾವಾಣಿ’ ಎದುರು ಅಲವತ್ತುಕೊಂಡರು.

‘ದೇಸಾಯಿ ಹಾಗೂ ಸತ್ತಿಗೇರಿ ಇಬ್ಬರೂ ಸರ್ಕಾರಿ ನೌಕರರು. ಹಾಸ್ಯೋತ್ಸವದಲ್ಲಿ ಅವರು ಸ್ಥಾನ ಪಡೆದರೆಂದು ನನಗೆ ಬೇಸರವಿಲ್ಲ. ಆದರೆ, ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕಲ್ಲವೇ’ ಎಂದು ಹೊಂಗಲ್‌ ಖಾರವಾಗಿ ಪ್ರಶ್ನಿಸಿದರು.
ಜಿಲ್ಲಾ ಉತ್ಸವ ಸಮಿತಿಯ ದ್ವಂದ್ವ ನಿಲುವು ಇಷ್ಟಕ್ಕೇ ಮುಗಿಯಲಿಲ್ಲ.

‘ಗ್ರೀನ್‌ ಆರ್ಮಿ’ ಸಂಸ್ಥೆಯು ಡಿ 15ರಂದು ಪ್ರಸ್ತುತಪಡಿಸಲಿರುವ ‘ಹುಚ್ಚರ ಸಂತೆ’ ನಾಟಕ­ವನ್ನು, ಈಗಾಗಲೇ ನಗರದಲ್ಲಿ ಹಲವು ಪ್ರದರ್ಶನ­ಗಳಾದ ಹಿನ್ನೆಲೆಯಲ್ಲಿ ಮತ್ತೆ ಜಿಲ್ಲಾ ಉತ್ಸವದಲ್ಲಿ ಅವಕಾಶ ನೀಡಲು ಉಪಸಮಿ­ತಿಯು ನಿರಾಕರಿ­ಸಿತ್ತು. ನಾಟಕ ಉಪಸಮಿತಿಯ ಅಧ್ಯಕ್ಷರೇ ಒತ್ತಡಕ್ಕೆ ಒಳಗಾಗಿ ಕೊನೆ ಹಂತದಲ್ಲಿ ನಾಟಕ ತಂಡಕ್ಕೆ ಅವಕಾಶ ನೀಡಿದರು’ ಎಂದು ಹೆಸರು ಹೇಳಲಿಚ್ಛಿಸದ ಕಲಾವಿದರೊಬ್ಬರು ತಿಳಿಸಿದ್ದಾರೆ.

‘ನಾಟಕ ಪ್ರದರ್ಶಿಸಲಿರುವ ಗ್ರೀನ್‌ ಆರ್ಮಿ ಸಂಸ್ಥೆ ಪರಿಸರ ಸಂಬಂಧಿ ಚಟು­ವಟಿಕೆ­ಗಳಲ್ಲಿ ತೊಡ­­ಗಿ­­ಕೊಂಡಿದೆಯೇ ಹೊರತು ನಾಟಕ ಕ್ಷೇತ್ರದಲ್ಲಿ ಅದರ ಹೆಸರೇ ಕೇಳಿಲ್ಲ’ ಎಂದು ಅವರು ಹೇಳಿದರು.

ಚಲನಚಿತ್ರ ಉಪಸಮಿತಿಯಲ್ಲಿದ್ದ ವ್ಯಕ್ತಿಯೊ­ಬ್ಬರು ವಿಚಾರ ಸಂಕಿರಣ­ವೊಂದ­ರಲ್ಲಿ ಸ್ಥಾನ ಪಡೆದಿದ್ದಾರೆ. ಜಾನಪದ ಉಪಸಮಿತಿ­ಯಲ್ಲಿರುವ ವ್ಯಕ್ತಿಯೊಬ್ಬರು ಗಾಯನ ಪ್ರಸ್ತುತಪಡಿಸಲಿದ್ದಾರೆ ಎಂದು ಗೊತ್ತಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉತ್ಸವ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ, ‘ಸಮಿತಿಯಲ್ಲಿರುವವರು ಕಾರ್ಯಕ್ರಮ ನೀಡಬಾರದು ಎಂದು ಕಟ್ಟುನಿಟ್ಟಿನ ಕಾನೂನೇನು ಮಾಡಿಲ್ಲ. ಅದೊಂದು ನೈತಿಕ ಮಾನದಂಡ ಅಷ್ಟೇ. ಅನಿವಾರ್ಯ ಸಂದರ್ಭಗಳಲ್ಲಿ ಕೆಲ ಸಣ್ಣ ಪುಟ್ಟ ಬದಲಾವಣೆ ಮಾಡಬೇಕಾ­ಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT