ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ. ಪಕ್ಷೇತರ ಅಭ್ಯರ್ಥಿ ಜೆಡಿಎಸ್ ಬಣಕ್ಕೆ

Last Updated 6 ಜನವರಿ 2011, 9:10 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕು ಪಂಚಾಯ್ತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಒಂದು ಸ್ಥಾನದ ಕೊರತೆ ಇದ್ದ ಜೆಡಿಎಸ್ ಪಕ್ಷದವರು ಮಾಜಿ ಸಚಿವ ಸುಧಾಕರ್ ನೇತೃತ್ವದಲ್ಲಿ ಬುಧವಾರ ಹರಿಯಬ್ಬೆ ಕ್ಷೇತ್ರದಿಂದ ತಾ.ಪಂ.ಗೆ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆ ಆಗಿದ್ದ ಅರುಣಾ ಪಾಟೀಲ್ ಅವರನ್ನು ತಮ್ಮ ಬಣಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳ್ಳಾರಿ ಜಿಪಂ ಅನ್ನು ಬಿಜೆಪಿ ವಶಕ್ಕೆ ತೆಗೆದುಕೊಳ್ಳಲು ರೆಡ್ಡಿ ಸಹೋದರರು ‘ಆಪರೇಷನ್ ಕಮಲ’ ಆರಂಭಿಸಿದ್ದಾರೆ ಎಂಬ ಸುದ್ದಿಯ ಬೆನ್ನ ಹಿಂದೆಯೇ, ಹಿರಿಯೂರಿನಲ್ಲಿ ಜೆಡಿಎಸ್ ಪಕ್ಷದವರು ಪಕ್ಷೇತರ ಅಭ್ಯರ್ಥಿಯನ್ನು ಸೆಳೆದುಕೊಳ್ಳುವ ಮೂಲಕ ‘ಆಪರೇಷನ್ ಜೆಡಿಎಸ್’ಗೆ ಚಾಲನೆ ನೀಡಿದ್ದಾರೆ.

22 ಸದಸ್ಯ ಬಲದ ತಾಪಂನಲ್ಲಿ ಜೆಡಿಎಸ್ 11, ಕಾಂಗ್ರೆಸ್ 04, ಪಕ್ಷೇತರರು 06 ಹಾಗೂ ಬಿಜೆಪಿ 01 ಸ್ಥಾನ ಗಳಿಸಿತ್ತು. ಸಂಖ್ಯಾ ಬಲದಲ್ಲಿ ಎರಡನೇ ಸ್ಥಾನದಲ್ಲಿರುವ ಪಕ್ಷೇತರರನ್ನು ಬೇರೆ ಯಾರಾದರೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬ ಸಂಶಯದಿಂದ ರಾಜಕೀಯ ತಂತ್ರಗಾರಿಕೆಗೆ ಹೆಸರಾಗಿರುವ ಮಾಜಿ ಸಚಿವ ಡಿ. ಸುಧಾಕರ್, ಅರುಣಾ ಪಟೇಲ್ ಅವರನ್ನು ಜೆಡಿಎಸ್‌ಗೆ ಬರುವಂತೆ ಮಾಡುವ ಮೂಲಕ ಆರಂಭಿಕ ಯಶಸ್ಸು ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷ ಎಂ. ಜಯಣ್ಣ, ಧರ್ಮಪುರ ಜಿ.ಪಂ. ಸದಸ್ಯ ಪ್ರಕಾಶ್, ಬಿ.ವಿ. ಮಾಧವ, ಎಚ್. ಮಂಜುನಾಥ್, ಗೋವಿಂದರಾಜು, ಬಿ.ಕೆ. ಚಂದ್ರಕಾಂತ್, ಕೆ. ಜಯರಾಜ್, ಎಚ್. ಹೆಂಜಾರಪ್ಪ, ಕೆಂಪರಾಜು ಪಟೇಲ್, ಪರಮೇಶ್ವರ, ಜ್ಞಾನದೇವಪ್ಪ, ಎಚ್.ಆರ್. ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು. ತನ್ನ ಗೆಲುವಿಗೆ ಶ್ರಮಿಸಿದವರ ಅಭಿಪ್ರಾಯ ಪಡೆದು, ಮಾಜಿ ಸಚಿವ ಡಿ. ಸುಧಾಕರ್ ಅವರ ಕಾರ್ಯ ವೈಖರಿ ಇಷ್ಟಪಟ್ಟು, ಜೆಡಿಎಸ್ ಸೇರಿದ್ದೇನೆ ಎಂದು ಅರುಣಾ ಪಾಟೀಲ್ ಸ್ಪಷ್ಟಪಡಿಸಿದರು.

ಎರಡು ದೋಣಿಯ ಪಯಣ ಸರಿಯೇ?

ಡಿ. ಸುಧಾಕರ್ ಅವರ ಹಿರಿಯೂರಿನಲ್ಲಿ ಜೆಡಿಎಸ್‌ಗೆ, ಚಳ್ಳಕೆರೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸುವ ಮೂಲಕ ಎರಡು ದೋಣಿಯ ಪಯಣ ಮಾಡುತ್ತಿರುವುದು ಸರಿಯೇ? ಎಂದು ಅವರ ವಿರೋಧಿ ಗುಂಪಿನವರು ಒಳಗೊಳಗೆ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಸುಧಾಕರ್ ಬೆಂಬಲಿಗರು ಈ ರೀತಿಯ ಪ್ರಶ್ನೆ ಕೇಳುವವರ ಬಗ್ಗೆ ಮರುಕ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಚಳ್ಳಕೆರೆಯಲ್ಲಿ ಜೆಡಿಎಸ್ ಹಾಗೂ ಹಿರಿಯೂರಿನಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಹೇಳಿಕೊಳ್ಳುವಂತಿಲ್ಲ. ಆದರೆ, ಚಳ್ಳಕೆರೆಯಲ್ಲಿ ಕಾಂಗ್ರೆಸ್ ಹಾಗೂ ಹಿರಿಯೂರಿನಲ್ಲಿ ಜೆಡಿಎಸ್ ಪಕ್ಷಗಳು ತಾಪಂನಲ್ಲಿ ಆಡಳಿತ ನಡೆಸಿದ್ದವು. ಜತೆಗೆ ಭದ್ರ ಬುನಾದಿ ಹೊಂದಿರುವ ಪಕ್ಷಗಳು ಎಂದು ತುಂಬಾ ಯೋಚಿಸಿ, ಆ ರೀತಿಯ ತೀರ್ಮಾನ ತೆಗೆದುಕೊಂಡಿದ್ದರು. ಹೀಗಾಗಿ ಎರಡೂ ಕಡೆ ಯಶಸ್ವಿ ಆಗಿದ್ದಾರೆ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ.

ತಪ್ಪೇನಿದೆ?: ರಾಜ್ಯದಲ್ಲಿ ಅತಂತ್ರವಾಗಿರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಅನಿವಾರ್ಯ. ಇದನ್ನು ಚುನಾವಣೆ ಪೂರ್ವದಲ್ಲಿಯೇ ಸುಧಾಕರ್ ಸ್ಪಷ್ಟಪಡಿಸಿದ್ದರು. ಹೀಗಾಗಿ ಪಕ್ಷೇತರರಾಗಿರುವ ಅವರು ಎರಡೂ ಪಕ್ಷಗಳಿಗೆ ಬೆಂಬಲಿಸಿದ್ದರಲ್ಲಿ ತಪ್ಪೇನಿದೆ? ಎಂದು ಅವರ ಬೆಂಬಲಿಗರು ಪ್ರಶ್ನೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT