ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳವಾದ್ಯೋತ್ಸವದ ಪ್ರಶಸ್ತಿ ಭಾಜನರು

Last Updated 13 ಜುಲೈ 2012, 19:30 IST
ಅಕ್ಷರ ಗಾತ್ರ

ತಾಳವಾದ್ಯ ಕೇಂದ್ರದ ಈ ವರ್ಷದ  ತಾಳ ವಾದ್ಯೋತ್ಸವದಲ್ಲಿ ಪಾಲ್‌ಘಾಟ್ ಮಣಿ ಅಯ್ಯರ್ ಅವರ ಜನ್ಮ ಶತಮಾನೋತ್ಸವವೂ ಮಿಳಿತವಾಗಿರುವುದು ವಿಶೇಷ. ಭಾನುವಾರದಿಂದ ಭಾನುವಾರದವರೆಗೆ (ಜು.15ರಿಂದ 22) ನಡೆಯಲಿರುವ ಉತ್ಸವದಲ್ಲಿ ಐದು ಪ್ರಶಸ್ತಿಗಳನ್ನು ಪ್ರತಿಭಾವಂತ ಕಲಾವಿದರಿಗೆ ಪ್ರದಾನ ಮಾಡಲಾಗುವುದು.

ಮೃದಂಗ ಕಲಾ ಶಿರೋಮಣಿ

ಈ ವರ್ಷದ ಮಣಿ ಅಯ್ಯರ್ ಸ್ಮಾರಕ ಪ್ರಶಸ್ತಿಯನ್ನು ಸ್ವೀಕರಿಸಲಿರುವ ತಿರುವನಂತಪುರಂ ವಿ. ಸುರೇಂದ್ರನ್ (70) `ಗಾನಭೂಷಣಂ~ ಡಿಪ್ಲೊಮಾ ಪಡೆದಿರುವರಲ್ಲದೆ ಪಾಲ್‌ಘಾಟ್ ಮಣಿ ಅಯ್ಯರ್ ಅವರಲ್ಲಿ 11 ವರ್ಷ ಶಿಕ್ಷಣ ಪಡೆದು ತಂಜಾವೂರು ಬಾನಿಯಲ್ಲಿ ಪರಿಣತರಾಗಿದ್ದಾರೆ.

ಚೆಂಬೈನಿಂದ ಚಿಟ್ಟಿಬಾಬುವರೆಗೆ ಮೂರು ತಲೆಮಾರಿನವರಿಗೆ ಮೃದಂಗ ಪಕ್ಕವಾದ್ಯ ನುಡಿಸಿರುವ ಅವರು ಬಾನುಲಿಯ  ಎ-ಟಾಪ್ ಕಲಾವಿದರೂ ಹೌದು. ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಂಚಿಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಪ್ರಶಸ್ತಿಗಳೂ ಅವರಿಗೆ ಸಂದಿವೆ. ಇದೀಗ ತಾಳವಾದ್ಯ ಉತ್ಸವದಲ್ಲಿ ಡಾ. ಎ.ಎಚ್. ರಾಮರಾವ್ ಪ್ರಾಯೋಜಿಸಿರುವ ಪ್ರಶಸ್ತಿಯೊಂದಿಗೆ ಮೃದಂಗ ಕಲಾಶಿರೋಮಣಿ ಬಿರುದನ್ನೂ ಸುರೇಂದ್ರನ್ ಸ್ವೀಕರಿಸಲಿದ್ದಾರೆ.

ಲಯಕಲಾ ನಿಪುಣ
ಈ ವರ್ಷ `ಪಳನಿ ಸುಬ್ರಹ್ಮಣ್ಯ ಪಿಳ್ಳೆ ಸ್ಮಾರಕ ಪ್ರಶಸ್ತಿ~ಯನ್ನು ಸ್ವೀಕರಿಸಲಿರುವ ತಿರುಚಿ ಜೆ. ವೆಂಕಟರಾಮನ್ ಅವರು ತಮ್ಮ ತಂದೆ ಕೆ.ವಿ. ಜಯರಾಮನ್ ಅಯ್ಯಂಗಾರ್ ಅವರಲ್ಲಿ ಪ್ರಾರಂಭಿಸಿ, ಆಲತ್ತೂರು ವೆಂಕಟೇಶ ಅಯ್ಯರ್ ಅವರಲ್ಲಿ ಪ್ರೌಢ ವ್ಯಾಸಂಗ ಪಡೆದರು.

ತಿರುಚಿರಾಪಳ್ಳಿ ಆಕಾಶವಾಣಿ ನಿಲಯದ ಕಲಾವಿದರಾಗಿ ಮೂರು ದಶಕ ಸೇವೆ ಸಲ್ಲಿಸಿರುವರಲ್ಲದೆ ಅನೇಕ ಸಂಗೀತ ರೂಪಕಗಳನ್ನು ನಿರ್ದೇಶಿಸಿದ್ದಾರೆ. ತಾಳವಾದ್ಯ ಉತ್ಸವದಲ್ಲಿ ಸುಧಾ ಆರ್. ರಾವ್ ಪ್ರಾಯೋಜಿಸಿರುವ ಪಳನಿ ಸ್ಮಾರಕ ಪ್ರಶಸ್ತಿಯೊಂದಿಗೆ `ಲಯಕಲಾ ನಿಪುಣ~ ಬಿರುದನ್ನು ವೆಂಕಟರಾಮನ್ ಪಡೆಯಲಿದ್ದಾರೆ.

ಸಂಗೀತ ಕಲಾಭಿಜ್ಞ
`ಬೆಂಗಳೂರು ಕೆ. ವೆಂಕಟರಾಂ ಸ್ಮಾರಕ ಪ್ರಶಸ್ತಿ~ ಸ್ವೀಕರಿಸಲಿರುವ ಸೀತಾಲಕ್ಷ್ಮಿ ವೆಂಕಟೇಶನ್ ಅವರು ವೈದ್ಯನಾಥ ಅಯ್ಯರ್ ಅವರಲ್ಲಿ ಸಂಗೀತ ಶಿಕ್ಷಣ ಪ್ರಾರಂಭಿಸಿ, ಶಂಕರ ಅಯ್ಯರ್ ಅವರಲ್ಲಿ ಮುಂದುವರಿಸಿ, ಶೆಮ್ಮಂಗುಡಿ ಶ್ರೀನಿವಾಸಯ್ಯರ್ ಅವರಲ್ಲಿ ಪ್ರೌಢ ಪಾಠ ಪಡೆದರು. ಅವರ ಸಂಗೀತ ಸೇವೆಯನ್ನು ಮನ್ನಿಸಿ ಅನೇಕ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
 
ಅವುಗಳಲ್ಲಿ ಕೆಲವು: ಬೆಂಗಳೂರು ಗಾಯನ ಸಮಾಜದಿಂದ ಸಂಗೀತ ಕಲಾರತ್ನ , ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ `ಕರ್ನಾಟಕ ಕಲಾಶ್ರಿ~, ರಾಜ್ಯೋತ್ಸವ ಪ್ರಶಸ್ತಿ. ಈಗ ಉತ್ಸವದಲ್ಲಿ ಡಾ. ಟಿ.ಎಸ್. ಸತ್ಯವತಿ ಮತ್ತು ಪದ್ಮಾ ಗುರುದತ್ ಅವರು ಪ್ರಾಯೋಜಿಸಿರುವ ಪ್ರಶಸ್ತಿಯೊಂದಿಗೆ `ಸಂಗೀತ ಕಲಾಭಿಜ್ಞ~ ಬಿರುದಿಗೂ ಭಾಜನರಾಗಲಿದ್ದಾರೆ.

ಲಯಕಲಾ ಪ್ರತಿಭಾಮಣಿ
ಎಚ್.ಪಿ. ರಾಮಾಚಾರ್ ನಿರ್ಮಿಸಿದ ಎಚ್. ಪುಟ್ಟಾಚಾರ್ ಸ್ಮಾರಕ ಪ್ರಶಸ್ತಿ ಸ್ವೀಕರಿಸಲಿರುವ ಎಂ. ಗುರುರಾಜ್ ಸಂಗೀತದ ಮನೆತನದಲ್ಲೇ ಬಂದವರು. ವಿದ್ವಾನ್ ಎಂ. ವೆಂಕಟೇಶಾಚಾರ್ ಅವರ ಮಗನಾದ ಗುರುರಾಜ್ ಲಯವಾದ್ಯಗಳಲ್ಲಿ ಟಿ.ಎ.ಎಸ್. ಮಣಿ ಅವರ ಶಿಷ್ಯ.

ಹಿರಿ ಕಿರಿಯ ಕಲಾವಿದರಿಗೆ ಮೃದಂಗ, ಮೋರ್ಚಿಂಗ್ ಪಕ್ಕವಾದ್ಯಗಳನ್ನು ನುಡಿಸಿರುವ ಅವರು ಕೆಲ ಕಾಲದಿಂದ ಬೆಂಗಳೂರು ಬಾನುಲಿ ನಿಲಯದ ಕಲಾವಿದರಾಗಿದ್ದಾರೆ. ತಾಳ ವಾದ್ಯೋತ್ಸವದಲ್ಲಿ ಬಿ.ಆರ್.ಲತಾ ಪ್ರಾಯೋಜಿಸಿರುವ ಪ್ರಶಸ್ತಿಯೊಂದಿಗೆ `ಲಯಕಲಾ ಪ್ರತಿಭಾಮಣಿ~ ಬಿರುದನ್ನೂ ಸ್ವೀಕರಿಸಲಿದ್ದಾರೆ.

ಪ್ರತಿಭಾ ಪುರಸ್ಕಾರ
ಉತ್ತರ ಅಮೆರಿಕಾದ ಕರ್ನಾಟಕ ಸಂಗೀತ ಸಂಘದ ದತ್ತಿಯ ಬಹುಮಾನ ಪಡೆಯಲಿರುವ ಎ. ರಾಧೇಶ್ ಸಹ ಸಂಗೀತ ಕುಟುಂಬದಿಂದ ಬಂದವರು. ಪಿ.ಜಿ. ಲಕ್ಷ್ಮೀನಾರಾಯಣ ಅವರಲ್ಲಿ 15 ವರ್ಷಗಳ ಶಿಕ್ಷಣ ಪಡೆದಿರುವ ಅವರಿಗೆ ಆಕಾಶವಾಣಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಗಾಯನ ಸಮಾಜ, ಅಕಾಡೆಮಿ, `ಅನನ್ಯ~ ಸಂಸ್ಥೆಗಳಿಂದ ಬಹುಮಾನ-ಪುರಸ್ಕಾರಗಳನ್ನು ಪಡೆದಿರುತ್ತಾರೆ.

ಮುಂದಿನ ಭಾನುವಾರ (ಜುಲೈ 22) ನಡೆಯಲಿರುವ ತಾಳ ವಾದ್ಯ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಗಳ ವಿತರಣೆ ಆಗಲಿವೆ.

ತಾಳ ವಾದ್ಯೋತ್ಸವ
ಈ ವರ್ಷದ ತಾಳವಾದ್ಯೋತ್ಸವದಲ್ಲಿ ಕಛೇರಿಗಳಲ್ಲದೆ ಮಣಿ ಅಯ್ಯರ್ ಅವರಿಗೆ ಶ್ರದ್ಧಾಂಜಲಿಯೂ ಸಲ್ಲಲಿದೆ. ಲಯ ವಿನ್ಯಾಸ, ಪ್ರಾತ್ಯಕ್ಷಿಕೆ, ಪ್ರಶಸ್ತಿ ವಿತರಣೆ, ಜುಗಲ್‌ಬಂದಿ, ವಲ್ಲಭಂ ಕಲ್ಯಾಣ ಸುಂದರಂ ಅವರ ಶತಮಾನೋತ್ಸವ ಹಾಗೂ ವಿಚಾರ ಸಂಕಿರಣಗಳು ಜುಲೈ 15ರಿಂದ 22ರವರೆಗೆ ಗಾಯನ ಸಮಾಜದ ಸಭಾಂಗಣದಲ್ಲಿ ನಡೆಯಲಿವೆ.

 ಜು.15ರಂದು (ಭಾನುವಾರ) ಪರ್ಕಸಿವ್ ಆರ್ಟ್ ಸೆಂಟರ್:  ಬೆಳಿಗ್ಗೆ 10ಕ್ಕೆ ತಾಳವಾದ್ಯೋತ್ಸವವನ್ನು ಹಿರಿಯ ಮೃದಂಗ ವಾದಕ ಡಾ. ಟಿ.ಕೆ. ಮೂರ್ತಿ ಉದ್ಘಾಟಿಸುವರು.
 
ವಿದ್ವಾನ್ ಬಿ. ಕಮಲಾಕರ್ ರಾವ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು ಹಾಗೂ ವಿದ್ವಾನ್ ಬಿ.ಕೆ. ಚಂದ್ರಮೌಳಿ - ಮುಖ್ಯ ಅತಿಥಿ. ಬೆಳಿಗ್ಗೆ 11ಕ್ಕೆ ರುದ್ರಪಟ್ಟಣ ಸಹೋದರರು   ಯುಗಳ ಗಾಯನ. ಸಂಜೆ 6-00 ಡಾ. ಆರ್.ಕೆ. ಶ್ರೀಕಂಠನ್ ಗಾಯನ
ಸ್ಥಳ: ಬೆಂಗಳೂರು ಗಾಯನ ಸಮಾಜ, ಕೃಷ್ಣರಾಜೇಂದ್ರ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT