ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಡು ಭೂಮಿ ಅನ್ಯಕ್ರಾಂತಕ್ಕೆ ತಡೆ ಒಡ್ಡಿಲ್ಲ

ಶಾಸಕ ಎಚ್.ಎಸ್.ಪ್ರಕಾಶ್ ಸ್ಪಷ್ಟನೆ
Last Updated 20 ಡಿಸೆಂಬರ್ 2012, 6:52 IST
ಅಕ್ಷರ ಗಾತ್ರ

ಹಾಸನ:`ತುಂಡು ಭೂಮಿ ಅನ್ಯಕ್ರಾಂತಕ್ಕೆ ಜಿಲ್ಲಾಧಿಕಾರಿ ಮತ್ತು ನಾನು ತಡೆ ಒಡ್ಡಿದ್ದೇವೆ ಎಂದು ಹುಡಾ ಅಧ್ಯಕ್ಷ ನವಿಲೆ ಅಣ್ಣಪ್ಪ ಮಾಡಿರುವ ಆರೋಪ ದುರುದ್ದೇಶದಿಂದ ಕೂಡಿದೆ. ಕಾನೂನು ಪ್ರಕಾರ ಬಡಾವಣೆಯ ನಕಾಶೆಯೊಂದಿಗೆ ಅರ್ಜಿ ಸಲ್ಲಿಸಿದರೆ ನಾನೇ ಅನ್ಯಕ್ರಾಂತಕ್ಕೆ ಪರವಾನಿಗೆ ನೀಡುವ ವ್ಯವಸ್ಥೆ ಮಾಡುತ್ತೇನೆ' ಎಂದು ಶಾಸಕ ಎಚ್.ಎಸ್. ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹುಡಾ ಅಧ್ಯಕ್ಷರ ಆರೋಪಕ್ಕೆ ಉತ್ತರ ನೀಡಿದ ಅವರು, `ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಕೆಲವು ಬಿಜೆಪಿ ಮುಖಂಡರೇ ಅನ್ಯಕ್ರಾಂತಕ್ಕೆ ತಡೆಯೊಡ್ಡಲು ಕಾರಣ. ಅಂದಿನ ಉಸ್ತುವಾರಿ ಸಚಿವ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಹಿಂದೆ ನಡೆದ ಸಭೆಯಲ್ಲಿ, ರಸ್ತೆ ಹಾಗೂ ಚರಂಡಿಗೆ ವ್ಯವಸ್ಥೆ ಮಾಡದಿರುವ ತುಂಡು ಭೂಮಿಗಳನ್ನು ಅನ್ಯಕ್ರಾಂತಗೊಳಿಸಲು ಅನುಮತಿ ನೀಡಬಾರದು ಎಂದು ಹೇಳಿದ್ದಲ್ಲದೆ, ಆ ಬಗ್ಗೆ ಆದೇಶವನ್ನೂ ನೀಡಿದ್ದಾರೆ. ಅದರ ಪ್ರತಿ ನನ್ನಲ್ಲಿದ್ದು, ಸೋಮಣ್ಣ ಇಂಥ ಆದೇಶ ಮಾಡಿಲ್ಲ ಎನ್ನುವುದಾದರೆ ಹುಡಾ ಅಧ್ಯಕ್ಷರು ಹೇಳಿದ್ದನ್ನು ನಾನು ಒಪ್ಪುತ್ತೇನೆ ಎಂದರು.

ಸಚಿವರು ಮತ್ತು ಸರ್ಕಾರದ ಮೇಲೆ ಒತ್ತಡ ಹೇರಿ ಅನ್ಯಕ್ರಾಂತಕ್ಕೆ ಅನುಮತಿ ಕೊಡಿಸುವ ಜವಾಬ್ದಾರಿ ಹುಡಾ ಅಧ್ಯಕ್ಷರ ಮೇಲೆ ಇದೆ. ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳಲು ಅವರು ನನ್ನ ಹಾಗೂ ಮುಖಂಡ ರೇವಣ್ಣ ಮೇಲೆ ಆರೋಪ ಮಾಡಿದ್ದಾರೆ.

ಭೂ ಮಾಲೀಕರು ಚರಂಡಿ, ರಸ್ತೆ ಮುಂತಾದವುಗಳಿಗೆ ಜಾಗ ಬಿಡುವುದರ ಜತೆಗೆ ಸಾರ್ವಜನಿಕ ಬಳಕೆಗೂ ಜಾಗ ಬಿಟ್ಟಿರಬೇಕು. ಈ ಎಲ್ಲ ನಿಯಮಗಳನ್ನು ಪಾಲಿಸಿ ನಕಾಶೆ ಸಹಿತ ಅನ್ಯಕ್ರಾಂತಕ್ಕೆ ಅರ್ಜಿ ಸಲ್ಲಿಸಿದರೆ ಜಿಲ್ಲಾಧಿಕಾರಿ ಮೂಲಕ ಅನುಮತಿ ಕೊಡಿಸುವ ಜವಾಬ್ದಾರಿ ನನ್ನದು. ಅಷ್ಟಾಗಿಯೂ ಅನುಮತಿ ನೀಡದಿದ್ದರೆ, ಹುಡಾ ಅಧ್ಯಕ್ಷರ ಜತೆಗೆ ನಾನೂ ಪ್ರತಿಭಟನೆಗೆ ಕೂರಲು ಸಿದ್ಧ ಎಂದರು.

`ಪ್ರತಿಭಟನೆಗೆ ಸಿದ್ಧ'
ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ನಾನು ಅಡ್ಡಿಪಡಿಸಿದ್ದೇನೆ ಎಂದು ಕೆಲವರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಹಕ್ಕುಪತ್ರ ನೀಡಲು ನಾನು ಎಂದೂ ವಿರೋಧಿಸಿಲ್ಲ. ಒಂದು ವೇಳೆ ಸರ್ಕಾರ ಹಕ್ಕುಪತ್ರ ನೀಡುವುದದರೆ ನಾನು ಅದಕ್ಕೆ ಬೆಂಬಲ ನೀಡುತ್ತೇನೆ. ಇನ್ನು 15 ದಿನದಲ್ಲಿ ಸರ್ಕಾರ ಹಕ್ಕುಪತ್ರ ನೀಡದಿದ್ದರೆ ನಾನೇ ಪ್ರತಿಭಟನೆ ನಡೆಸುತ್ತೇನೆ ಎಂದು ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.

`ನ್ಯಾಯಾಲಯದ ಆದೇಶಕ್ಕೆ ಬದ್ಧ'
ಎಸ್.ಎಂ. ಕೃಷ್ಣ ನಗರದಲ್ಲಿ ಶೇ 60:40 ಅನುಪಾತದಲ್ಲಿ ರೈತರಿಗೆ ಪಾಲು ನೀಡುವ ಬಗ್ಗೆ ಜೆಡಿಎಸ್ ನಿಲುವೇನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅವರು, `ನಾವು ಯಾವುದಕ್ಕೂ ವಿರೋಧ ಮಾಡಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ಬರುವವರೆಗೆ ಏನನ್ನೂ ಹೇಳಲು ಬಯಸುವುದಿಲ್ಲ' ಎಂದರು.

ಜೆಡಿಎಸ್ ಜಿಲ್ಲಾಘಟಕದ ಅಧ್ಯಕ್ಷ ಎಚ್.ಕೆ. ಜವರೇಗೌಡ ಮಾತನಾಡಿ, `ಬಿಜೆಪಿ ಮುಖಂಡರು ನಮ್ಮ ಮೇಲೆ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು. ಹಾಸನ ನಗರ ಹಾಗೂ ಸುತ್ತಲಿನ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

ಅದರ ನಿವಾರಣೆಗೆ ಹಣ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ಬಗ್ಗೆ ಪಕ್ಷಾತೀತವಾಗಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯದಿದ್ದರೆ ಮುಂದಿನ ದಿನಗಳಲ್ಲಿ ಜನರು ದಂಗೆ ಏಳುವ ಸಾಧ್ಯತೆ ಇದೆ' ಎಂದರು.ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT