ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆಯಲ್ಲಿ `ರಜನಿಕಾಂತ'

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಚಿತ್ರರಂಗವನ್ನು ಒಂದು ಸಂಜೆಯ ಮಟ್ಟಿಗೆ ಗಾಂಧಿನಗರದಿಂದ ತುರುವೇಕೆರೆಗೆ ವರ್ಗಾಯಿಸಿದ್ದರು ನಿರ್ಮಾಪಕ ಕೆ.ಮಂಜು. `ರಜನಿಕಾಂತ' ಚಿತ್ರದ ದನಿಮುದ್ರಿಕೆ ಬಿಡುಗಡೆ ಸಮಾರಂಭವನ್ನು ತುರುವೇಕೆರೆಯಲ್ಲಿ ಆಯೋಜಿಸಲು ಅವರ ಮುಂದಿನ ರಾಜಕಾರಣದ ಗುರಿಯೂ ಒಂದು ಕಾರಣ.

ನಾಯಕ ದುನಿಯಾ ವಿಜಯ್ ಜೊತೆಗೆ ನಟರಾದ ಉಪೇಂದ್ರ, ಗಣೇಶ್, ಸುದೀಪ್, ರಮೇಶ್ ಅರವಿಂದ್ ಹಾಜರಾತಿಯಿಂದ ಅದ್ದೂರಿ ಸಮಾರಂಭ ಮತ್ತಷ್ಟು ಕಳೆಕಟ್ಟಿತ್ತು. ಕೆ.ಮಂಜು ಅವರನ್ನು ಹಲಸಿನ ಹಣ್ಣಿಗೆ ಹೋಲಿಸಿದರು ಉಪೇಂದ್ರ. ನೋಡಲು ಒರಟರಂತೆ ಕಂಡರೂ ಮಂಜು ಆಂತರ್ಯದಲ್ಲಿ ಹಲಸಿನ ಹಣ್ಣಿನಂತೆಯೇ ಮೃದು ಹಾಗೂ ಸಿಹಿ ಎನ್ನುವುದು ಅವರ ಮಾತಿನ ಅರ್ಥ.

ದುನಿಯಾ ವಿಜಿಯಂತೆ ದೇಹ ಬೆಳೆಸಿಕೊಳ್ಳಲು ಜಿಮ್‌ಗೆ ಹೋಗಿ ನಾಲ್ಕು ದಿನದಲ್ಲಿ ಸುಸ್ತಾಗಿ ಕೈಬಿಟ್ಟ ಪ್ರಸಂಗವನ್ನು ಹೇಳಿ ನಕ್ಕರು ಸುದೀಪ್. ವಿಜಿಯಂತೆ ಆಗಲು ನನ್ನಿಂದ ಸಾಧ್ಯವೇ ಇಲ್ಲ ಎಂದ ಸುದೀಪ್ ಮಾತು ಬಳಿಕ ಪಕ್ಕದಲ್ಲಿದ್ದ ಗಣೇಶ್‌ರತ್ತ ತಿರುಗಿತು.

`ಮುಂಗಾರುಮಳೆ' ಬಂದ ಬಳಿಕ ಯಾವ ಹುಡುಗೀರೂ ನಮ್ಮನ್ನ ನೋಡುತ್ತಿಲ್ಲ. ಎಲ್ಲರೂ ಗಣೇಶ್ ಹಿಂದೆ ಎಂದು ಕಿಚಾಯಿಸಿದರು. ಈಗ ಏನೇ ಬೆಳೆದಿದ್ದರೂ ನಮ್ಮನ್ನು ಪ್ರಭಾವಿಸಿದ್ದು ಸುದೀಪ್ ಎಂಬ ಪ್ರತಿ ಹೊಗಳಿಕೆ ಗಣೇಶ್ ಮತ್ತು ವಿಜಯ್ ಅವರಿಂದ.

ಕೆ.ಮಂಜು ಚಿತ್ರರಂಗಕ್ಕೆ ಹೊಸತನ ನೀಡಬೇಕೆಂಬ ಇಚ್ಛಾಶಕ್ತಿ ಹಾಗೂ ಸಾಮರ್ಥ್ಯವುಳ್ಳ ನಿರ್ಮಾಪಕ. ಹೀಗಾಗಿಯೇ ಕಮಲಹಾಸನ್, ಮಮ್ಮುಟ್ಟಿಯಂಥ ಖ್ಯಾತನಾಮರನ್ನು ಕನ್ನಡಕ್ಕೆ ತರಲು ಅವರಿಂದ ಸಾಧ್ಯವಾಗಿದ್ದು ಎಂದು ರಮೇಶ್ ಹೊಗಳಿಕೆ ಮಳೆ ಸುರಿಸಿದರು.

ಹಾಡುಗಳ ಸೀಡಿ ಬಿಡುಗಡೆ ಜೊತೆಗೆ ತಮ್ಮೂರಿನ ಹಿರಿಯರನ್ನು, ಪಾಠ  ಹೇಳಿದ ಶಿಕ್ಷಕರನ್ನು ಸನ್ಮಾನಿಸುವ ಬಹುಕಾಲದ ಬಯಕೆಯನ್ನು ಕೆ.ಮಂಜು ಈಡೇರಿಸಿಕೊಂಡರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ನಾಯಕ ನಟಿ ಐಂದ್ರಿತಾ ರೇ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT