ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನಮರ ಹತ್ತಲು ಮಹಿಳೆಯರಿಗೆ ತರಬೇತಿ

Last Updated 14 ಡಿಸೆಂಬರ್ 2012, 11:06 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ತೆಂಗಿನ ಮರವೇರುವ ಪೈಪೋಟಿ. ಸರಸರನೆ ಮರ ಹತ್ತಿ ಕಾಯಿ ಉದುರಿಸಿ ಮತ್ತೆ ಕೆಳಗಿಳಿಯವ ತವಕ. ನೋಡಿದವರಿಗೆ ಆಶ್ಚರ್ಯ. ಯಾಕೆ ಗೊತ್ತೆ? ಮರವೇರಿ ತೆಂಗಿನಕಾಯಿ ಕೀಳುವವರು ಪುರುಷರಲ್ಲ, ಮಹಿಳೆಯರು !

ನಾಲ್ಕೈದು ಮಂದಿ ಮಹಿಳೆಯರು ಉತ್ಸಾಹದಿಂದ ತೆಂಗಿನಮರ ಹತ್ತಿ ಕಾಯಿ ಕೀಳುತ್ತಾರೆ. ಒಮ್ಮೆ ಅಲ್ಲ, ನಾಲ್ಕು ಬಾರಿ ಹೇಳಿದರೂ ಸರಾಗವಾಗಿ ಮರವೇರಿ ಅದರ ತುದಿಯನ್ನು ತಲುಪಿ ಮತ್ತೆ ಅದೇ ವೇಗದಲ್ಲಿ ಕೆಳಗಿಳಿಯುತ್ತಾರೆ. ಇವರೊಂದಿಗೆ ಕೃಷಿ ಕಾಯಕ ಮಾಡುವ ಕೆಲ ಕೃಷಿಕರೂ ಆಸಕ್ತಿಯಿಂದ ತೆಂಗಿನಮರ ಹತ್ತುವ ಕೌಶಲವನ್ನು ಕರಗತ ಮಾಡಿಕೊಂಡಿದ್ದಾರೆ.

ಕೃಷಿ ಕ್ಷೇತ್ರ ಎದುರಿಸುತ್ತಿರುವ ಕೂಲಿಗಳ ಸಮಸ್ಯೆ, ನಿಗದಿತ ಸಮಯಕ್ಕೆ ಕಾಯಿ ಕೀಳಲಾಗದೆ ಅಸಹಾಯಕರಾಗಿರುವ ರೈತರ ತೊಂದರೆ ನಿವಾರಣೆಗೆಗ ಮುಂದಾಗಿರುವ ತೆಂಗು ಅಭಿವೃದ್ಧಿ ಮಂಡಳಿಯು, ವಿವಿಧೆಡೆ ಯಂತ್ರ ಬಳಸಿ ತೆಂಗಿನ ಮರ ಹತ್ತುವ ತರಬೇತಿ ಆಯೋಜಿಸುತ್ತಿದೆ. ಮಂಡಳಿಯ ಸಹಯೋಗದೊಂದಿಗೆ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರವು ಆರು ದಿನಗಳ ಕಾಲ ತರಬೇತಿ ಶಿಬಿರವನ್ನು ಆಯೋಜಿಸಿದ್ದು ಮಂಡ್ಯದ ಮಹಾದೇವಸ್ವಾಮಿ ತೆಂಗಿನಮರ ಹತ್ತುವ ಕೌಶಲ ಹೇಳಿಕೊಡುತ್ತಿದ್ದಾರೆ. 20 ಮಂದಿ ಶಿಬಿರಾರ್ಥಿಗಳಲ್ಲಿ ಆರು ಮಂದಿ ಮಹಿಳೆಯರಿದ್ದಾರೆ.

`ಹಳೆ ಪದ್ಧತಿಯಲ್ಲಿ ಒಂದು ತಾಸಿಗೆ ಹತ್ತು ಮರಗಳನ್ನು ಏರಿ ಕಾಯಿ ಕೀಳಬಹುದು. ಯಂತ್ರ ಬಳಸಿದರೆ ಅಷ್ಟೇ ಸಮಯದಲ್ಲಿ 20 ಮರಗಳ ಕಾಯಿ ಕೀಳಬಹುದು. ಸಾಂಪ್ರದಾಯಿಕ ಪದ್ಧತಿಯು ತೀರಾ ಶ್ರಮದಾಯಕ. ಅಲ್ಲದೇ ಎದೆ, ತೊಡೆ, ಕಾಲು ನೋವು ತಪ್ಪಿದ್ದಲ್ಲ. ಯಂತ್ರದ ಸಹಾಯದಿಂದ ಮರ ಹತ್ತಿದರೆ ಸುಸ್ತಾಗದು' ಎನ್ನುತ್ತಾರೆ ತೆಂಗಿನಕಾಯಿ ಕೀಳುವ ವೃತ್ತಿನಿರತ ಮುಂಡಗೋಡಿನ ಗೋಪಾಲ ಬಳ್ಳಾರಿ.

`ತೆಂಗಿನಮರ ಏರಲು ಖುಷಿಯಾಗುತ್ತದೆ. ಮೊದಲ ದಿನ ಅರ್ಧ ಮರ ಏರಿದೆವು, ಎರಡನೇ ದಿನ ಮರದ ತುದಿ ತನಕ ಹತ್ತಿ ಎಳನೀರು ಕಿತ್ತು ಕುಡಿದೆವು. ನಾವು ತೆಂಗಿನ ಮರ ಹತ್ತುತ್ತೇವಾ? ಕಲ್ಪನೆಗೂ ಸಾಧ್ಯವಿಲ್ಲ ಅನ್ನಿಸಿತ್ತು. ಇನ್ನು ನಮ್ಮ ಮನೆಯ ಮರಗಳಿಂದ ನಾವೇ ತೆಂಗಿನಕಾಯಿ ಕೀಳಬಹುದು' ಎಂದು ಹೆಮ್ಮೆಯಿಂದ ಹೇಳುತ್ತಾರೆ ಕುಸುಮಾ ಬಾಲಚಂದ್ರ ಸಾಯಿಮನೆ.

`ಈ ತರಬೇತಿ ನಮಲ್ಲಿ ಆತ್ಮವಿಶ್ವಾಸ ಬೆಳೆಸಿದೆ' ಎಂದು ಉಮ್ಮಚಗಿಯ ಜಯಶ್ರೀ ಹೆಗಡೆ, ನೇತ್ರಾವತಿ ಹೆಗಡೆ, ಮಂಗಲಾ ನಾಯ್ಕ, ಮಾಲತಿ ಹೆಗಡೆ, ಸೀಮಾ ಜೋಗಳೇಕರ ಹೇಳುತ್ತಾರೆ.

`ಕರಾವಳಿ ತೆಂಗಿನನಾಡು. ಹೀಗಾಗಿ ಕರಾವಳಿ ಭಾಗದ ಜನರಿಗೆ ಮುಂದಿನ ಹಂತದಲ್ಲಿ ತರಬೇತಿ ನೀಡುವ ಉದ್ದೇಶವಿದೆ. 18 ವರ್ಷ ಮೀರಿದ 40 ವರ್ಷದ ಒಳಗಿನ ಆರೋಗ್ಯವಂತರು ತರಬೇತಿಯಲ್ಲಿ ಭಾಗವಹಿಸಬಹುದು' ಎಂದು ರೂಪಾ ಪಾಟೀಲ ಹೇಳಿದರು.

`ತೆಂಗಿನಮರ ಹತ್ತುವ ತರಬೇತಿ ಜೊತೆಗೆ ಮರ ನಿರ್ವಹಣೆ, ರೋಗ ನಿಯಂತ್ರಣ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ. ತರಬೇತಿ ಪಡೆದವರಿಗೆ ರೂ 2,500 ಮೌಲ್ಯದ ಯಂತ್ರವನ್ನು ಉಚಿತವಾಗಿ ಕೊಡುತ್ತೇವೆ. ಒಂದು ವರ್ಷದ ವಿಮೆ ಕೂಡ ನೀಡಲಾಗುತ್ತದೆ' ಎನ್ನುತ್ತಾರೆ ಕೃಷಿವಿಜ್ಞಾನ ಕೇಂದ್ರದ ಮುಖ್ಯಸ್ಥ ಹೇಮಂತ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT