ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಿಲೇವಾರಿಗೆ ವಿರೋಧ- ಬಂದೋಬಸ್ತ್

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಹದೇವಪುರ: ಮಂಡೂರಿನ ತ್ಯಾಜ್ಯ ವಿಲೇವಾರಿ ಘಟಕ್ಕೆ ಕಸ ಸುರಿಯಲು ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ನಗರದಿಂದ ತ್ಯಾಜ್ಯ ತುಂಬಿಕೊಂಡು ಹೋದ ಲಾರಿಗಳನ್ನು ಬುಧವಾರ ತಡೆದಿರುವ ಸ್ಥಳೀಯರು, ಕಸ ಸುರಿಯುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಸ ಹೊತ್ತು ತಂದ ಲಾರಿಗಳನ್ನು ಅಡ್ಡಗಟ್ಟಿದ ಸ್ಥಳೀಯರು 250ಕ್ಕೂ ಹೆಚ್ಚು ತ್ಯಾಜ್ಯ ವಿಲೇವಾರಿ ಲಾರಿಗಳನ್ನು ಹಿಂದಕ್ಕೆ ಕಳಿಸಿದರು. ಪ್ರತಿಭಟನೆಯಿಂದಾಗಿ ಘಟಕದ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

`ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹೆಚ್ಚಿನ ಕಸ ಸಂಗ್ರಹವಾಗುತ್ತಿರುವುದರಿಂದ ಮಂಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಹೊಸದಾಗಿ ಕಸ ವಿಲೇವಾರಿ ಮಾಡುವುದಿಲ್ಲ ಎಂದು ಹೇಳಿದ್ದ ಬಿಬಿಎಂಪಿ ಈಗ ಮಾತು ಮರೆತಿದೆ. ಕದ್ದು ಮುಚ್ಚಿ ಕಸವನ್ನು ತಂದು ಸುರಿಯುತ್ತಲೇ ಇದೆ~ ಎಂದು ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ದೂರಿದರು.

`ಮಂಡೂರು ಗ್ರಾಮದಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ಸುರಿಯಲು ವಿರೋಧಿಸುತ್ತಿರುವುದರಿಂದ, ಸುತ್ತಮುತ್ತಲಿನ ಗ್ರಾಮಗಳ ಹೊರವಲಯದಲ್ಲಿ ರಸ್ತೆಗಳ ಅಕ್ಕಪಕ್ಕದಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದೆ. ಈ ಭಾಗದ ಗ್ರಾಮಗಳು ತ್ಯಾಜ್ಯ ಸಂಗ್ರಹಣಾ ಗುಂಡಿಗಳಂತಾಗಿವೆ.
 
ಇದರಿಂದ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಚರ್ಮ ಸಂಬಂಧಿ ರೋಗಗಳು ಹೆಚ್ಚಾಗುತ್ತಿವೆ. ಹೀಗಾಗಿ ಬಿಬಿಎಂಪಿ ಕಸ ತಂದು ಸುರಿಯುವುದನ್ನು ನಿಲ್ಲಿಸಬೇಕು~ ಎಂದು ಮಂಡೂರು ಸಮೀಪದ ರಾಮಪುರದ ಮುನಿರಾಜಪ್ಪ ಆಗ್ರಹಿಸಿದರು.

ಮನವೊಲಿಸಲಾಗಿದೆ
`ಮಂಡೂರಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರಾತ್ರಿ 10 ಗಂಟೆಯ ನಂತರ ಕಸ ಸುರಿಯುವ ವ್ಯವಸ್ಥೆಯಿದೆ. ಆದರೆ, ಕಳೆದ ಎರಡು ದಿನಗಳಿಂದ ಮಳೆ ಬಿದ್ದ ಪರಿಣಾಮ ತ್ಯಾಜ್ಯ ಲಾರಿಗಳಲ್ಲೇ ಉಳಿದುಕೊಂಡಿತ್ತು. ಬುಧವಾರ ಬೆಳಗ್ಗೆ ಈ ಕಸ ಸುರಿಯಲು ಹೋದಾಗ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲಾಗಿದೆ. ಬುಧವಾರ ಸಂಜೆಯ ವೇಳೆಗೆ ಸಮಸ್ಯೆ ಪರಿಹಾರವಾಗಿದೆ~
 -ರಜನೀಶ್ ಗೋಯಲ್,  ಆಯುಕ್ತರು, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT