ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಿಲೇವಾರಿಯಲ್ಲಿ ಅವ್ಯವಹಾರ: ಆಧಾರ ರಹಿತ ಆರೋಪ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯಲ್ಲಿ 121 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಜೆಡಿಎಸ್ ಆರೋಪ ಸತ್ಯಕ್ಕೆ ದೂರವಾದುದು ಎಂದು ಉಪ ಮೇಯರ್ ಎಸ್. ಹರೀಶ್ ಗುರುವಾರ ಇಲ್ಲಿ ಸ್ಪಷ್ಟಪಡಿಸಿದರು.

`ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಈಗ ಹೊಸ ಟೆಂಡರ್ ಕರೆಯಾಗಿದೆ. ಈ ಹಿಂದೆ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಹೆಚ್ಚುವರಿಯಾಗಿ ತ್ಯಾಜ್ಯ ವಿಲೇವಾರಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆಯೇ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

ಪಾಲಿಕೆ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಹೆಚ್ಚುವರಿಯಾಗಿ ಕಸ ವಿಲೇವಾರಿ ಮಾಡಲು ಕೋಡ್ ಪಡೆಯಲಾಯಿತು. ಅಂದಿನ ಆಯುಕ್ತ ಸಿದ್ದಯ್ಯ ಅವರೇ ಇದಕ್ಕೆ ಅನುಮತಿ ನೀಡಿದ್ದರು. ಅದರಂತೆ ವಾರ್ಡ್ ಮಟ್ಟದಲ್ಲಿ ಒಂದು ಲಕ್ಷ ರೂಪಾಯಿಯೊಳಗೆ ಕಸ ವಿಲೇವಾರಿ ಮಾಡಲು ತೀರ್ಮಾನಿಸಲಾಗಿತ್ತು.

ನಗರದ ಬಹುತೇಕ ಸದಸ್ಯರ ಕೋರಿಕೆಯಂತೆ ಹಾಲಿ ಟೆಂಡರ್ ಕೆಲಸ ನಿರ್ವಹಿಸುತ್ತಿರುವುದರ ಜತೆಗೆ ಹೆಚ್ಚುವರಿಯಾಗಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಇದರಲ್ಲಿ ಕಾನೂನು ಬಾಹಿರವಾಗಿ ಹಣ ಲೂಟಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಅವರು ಪ್ರತಿನಿಧಿಸುವ ಕಾಚರಕನಹಳ್ಳಿ ವಾರ್ಡ್‌ನಲ್ಲಿ ಹಾಲಿ ಗುತ್ತಿಗೆ ನೀಡಿರುವ ಕಸ ವಿಲೇವಾರಿ ಕಾಮಗಾರಿ ಜತೆಗೆ, ಬೆಳಗಿನ ಪಾಳಿಯಲ್ಲೂ ತಾಜ್ಯ ನಿರ್ವಹಣೆಗೆ ಪ್ರತಿ ತಿಂಗಳು ರೂ 2.97 ಲಕ್ಷ ಹಾಗೂ ಎರಡನೇ ಪಾಳಿಯಲ್ಲಿ 63,266 ರೂಪಾಯಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಹೊಸದಾಗಿ ಟೆಂಡರ್ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಇದೇ 19 ಕೊನೆಯ ದಿನವಾಗಿದೆ. ಗುತ್ತಿಗೆದಾರರು ಟೆಂಡರ್‌ನಲ್ಲಿ ಪಾಲ್ಗೊಳ್ಳದಿದ್ದಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಬಿಜೆಪಿಯ ಸದಸ್ಯರಾದ ಬಿ.ಎಸ್. ಸತ್ಯನಾರಾಯಣ, ಪಿ.ಎನ್. ಸದಾಶಿವ ಉಪಸ್ಥಿತರಿದ್ದರು.

ಹೇಳಿಕೆಗೆ ಬದ್ಧ: `ಬಿಬಿಎಂಪಿಯಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ನಡೆದಿರುವ 121 ಕೋಟಿ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಾನು ನೀಡಿರುವ ಹೇಳಿಕೆಗೆ ಈಗಲೂ ಬದ್ಧ~ ಎಂದು ಜೆಡಿಎಸ್ ಗುಂಪಿನ ನಾಯಕ ಪದ್ಮನಾಭರೆಡ್ಡಿ ಪುನರುಚ್ಚರಿಸಿದ್ದಾರೆ.

ಉಪ ಮೇಯರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, `ಪಾಲಿಕೆಯ ಬಿಜೆಪಿ ಸದಸ್ಯರು ಹಾಗೂ ಆ ಪಕ್ಷದ ಶಾಸಕರೊಂದಿಗೆ ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ~ ಎಂದು ಸವಾಲು ಹಾಕಿದರು.


 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT