ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ. ಕೊರಿಯಾದಲ್ಲಿ ಸೇನಾ ಕಟ್ಟೆಚ್ಚರ

ಕ್ಷಿಪಣಿ ದಾಳಿಗೆ ಸಜ್ಜಾದ ಯುದ್ಧೋತ್ಸಾಹಿ ಉತ್ತರ ಕೊರಿಯಾ?
Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸೋಲ್ (ಎಎಫ್‌ಪಿ): ಯುದ್ಧೋತ್ಸಾಹದಲ್ಲಿರುವ ಉತ್ತರ ಕೊರಿಯಾ ಕ್ಷಿಪಣಿ ದಾಳಿಗೆ ಸಜ್ಜಾಗಿದೆ ಎನ್ನಲಾಗಿದೆ. ಇತ್ತ ಯುದ್ಧ ಭೀತಿಯಲ್ಲಿರುವ ದಕ್ಷಿಣ ಕೊರಿಯಾ, ತನ್ನ ಸೇನೆಗೆ ಕಟ್ಟೆಚ್ಚರದಿಂದ ಇರುವಂತೆ ಬುಧವಾರ ಸೂಚಿಸಿದೆ.

ಈ ಮಧ್ಯೆ, ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು, ಕೊರಿಯಾ ಪರ್ಯಾಯ ದ್ವೀಪದಲ್ಲಿನ ಪರಿಸ್ಥಿತಿಯು ನಿಯಂತ್ರಣಕ್ಕೆ ಸಿಗದಷ್ಟು ಉಲ್ಬಣಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಉಭಯ ದೇಶಗಳ ನಡುವೆ ಉಂಟಾಗಿರುವ ಯುದ್ಧದ ಆತಂಕವನ್ನು ತಗ್ಗಿಸಲು ಚೀನಾ ಮುಖಂಡರು ಮುತುವರ್ಜಿ ವಹಿಸಬೇಕು ಎಂದು ರೋಮ್ ಪ್ರವಾಸದಲ್ಲಿರುವ ಅವರು ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ಗುರುವಾರ ಚರ್ಚಿಸುವುದಾಗಿಯೂ ಮೂನ್ ಹೇಳಿದ್ದಾರೆ.

ಉತ್ತರ ಕೊರಿಯಾದ ಯುದ್ಧೋನ್ಮಾದದಿಂದ ಅನಿಶ್ಚತತೆ ಉಂಟಾಗಲಿದೆ ಎಂದು ಅಮೆರಿಕ ಹೇಳಿದೆ.

ಉತ್ತರ ಕೊರಿಯಾ ಮಧ್ಯಮ ವ್ಯಾಪ್ತಿಯ ಎರಡು ಕ್ಷಿಪಣಿಗಳನ್ನು ತನ್ನ ಪೂರ್ವ ಕರಾವಳಿಯಲ್ಲಿ ಉಡಾಯಿಸಲು ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ದಕ್ಷಿಣ ಕೊರಿಯಾದ ಬೇಹುಗಾರಿಕೆ ಮೂಲಗಳು ಹೇಳಿವೆ.

ಸೇನೆಯನ್ನು ಸಮರ ಸನ್ನದ್ಧ ಸ್ಥಿತಿಯಲ್ಲಿ ಇಡುವಂತಹ ಪ್ರಚೋದನಕಾರಿ ನಡೆಯನ್ನು ಕೈಬಿಡುವಂತೆ ಚೀನಾ ತನ್ನ ಮಿತ್ರ ರಾಷ್ಟ್ರ ಉತ್ತರ ಕೊರಿಯಾಗೆ ಎಚ್ಚರಿಕೆ ನೀಡಿದ್ದರೂ, ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಲು ಆತುರ ತೋರಿದೆ ಎಂದು ಬೇಹುಗಾರರು ಮಾಹಿತಿ ನೀಡಿದ್ದಾರೆ.

ಅಣ್ವಸ್ತ್ರ ಪರೀಕ್ಷೆಯ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಮತ್ತು ಚೀನಾ ಗಡಿಯಲ್ಲಿನ ಪ್ರಮುಖ ಮಾರ್ಗವನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ ಎಂದು ಚೀನಾದ ಅಧಿಕಾರಿಗಳು  ತಿಳಿಸಿದ್ದಾರೆ.

ಪ್ಯಾಂಗ್‌ಯಾಂಗ್‌ನಲ್ಲಿರುವ ವಿವಿಧ ರಾಷ್ಟ್ರಗಳ ದೂತಾವಾಸದ ಗಣ್ಯರಿಗೆ ಮತ್ತು ದಕ್ಷಿಣ ಕೊರಿಯಾದಲ್ಲಿರುವ ವಿದೇಶಿಯರಿಗೆ ಏಪ್ರಿಲ್ 10ರೊಳಗೆ ಆ ರಾಷ್ಟ್ರವನ್ನು ತೊರೆಯುವಂತೆ  ಕಳೆದ ವಾರ ಸೂಚಿಸಿದ್ದ ಉತ್ತರ ಕೊರಿಯಾ, ಇದೇ ಮಾತನ್ನು ಮಂಗಳವಾರ ಕೂಡ ಹೇಳಿದೆ. ಆದರೆ, ಉತ್ತರ ಕೊರಿಯಾದಲ್ಲಿನ ದೂತಾವಾಸಗಳು ಮತ್ತು ದಕ್ಷಿಣ ಕೊರಿಯಾದಲ್ಲಿರುವ ವಿದೇಶಿಯರು ಈ ಎಚ್ಚರಿಕೆಗೆ ಅಷ್ಟಾಗಿ ಲಕ್ಷ್ಯಕೊಟ್ಟಿಲ್ಲ.

ಕಟ್ಟೆಚ್ಚರಕ್ಕೆ ಸೂಚನೆ
ಉತ್ತರ ಕೊರಿಯಾ ಕಡೆಯಿಂದ ಎರಡು- ಮೂರು ಬಾರಿ ಯುದ್ಧದ ಭೀತಿ ಉಂಟಾದ ಕಾರಣ ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಜಂಟಿ ಸೇನಾ ತುಕಡಿಗಳಿಗೆ ಕಟ್ಟೆಚ್ಚರದಿಂದ ಇರುವಂತೆ ಸೂಚನೆ ಬಂದಿದೆ ಎಂದು ಸೇನಾ ಮೂಲಗಳನ್ನು ಆಧರಿಸಿ `ಯೊನ್‌ಹ್ಯಾಪ್' ಸುದ್ದಿಸಂಸ್ಥೆ ವರದಿ ಮಾಡಿದೆ.

ಉತ್ತರ ಕೊರಿಯಾ ಬಹು ಸಂಖ್ಯೆಯಲ್ಲಿ ಕ್ಷಿಪಣಿ ದಾಳಿ ನಡೆಸಲು ಸಜ್ಜಾಗಿದೆ. ಕಡಿಮೆ ವ್ಯಾಪ್ತಿಯ ಕ್ಷಿಪಣಿ ಉಡಾವಣಾ ಸಾಧನಗಳನ್ನು ಹೊರಗೆ ತೆಗೆದಿದೆ ಎಂದು `ಯೊನ್‌ಹ್ಯಾಪ್' ಪ್ರತ್ಯೇಕ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT