ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಡ ಸೇರಿದ ಬಾಳನೌಕೆ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಿವಾದ ಬಗೆಹರಿದ ತೃಪ್ತಿಯಲ್ಲಿದ್ದರು ನಟ ಶ್ರೀನಿವಾಸಮೂರ್ತಿ. ಎರಡು ದಶಕಗಳಿಗೂ ಹೆಚ್ಚು ಕಾಲ ನ್ಯಾಯಾಲಯದಲ್ಲಿ ನಡೆದ ಹೋರಾಟವದು. ಕೆಳ ಹಂತದ ನ್ಯಾಯಾಲಯದಿಂದ ಸುಪ್ರೀಂಕೋರ್ಟ್‌ವರೆಗೂ ಚಾಚಿಕೊಂಡ ಪ್ರಕರಣವದು.

`1985ರಲ್ಲಿ `ಬಾಳನೌಕೆ~ ಚಿತ್ರದಲ್ಲಿ ನಾಯಕನಾಗಿ ನಟಿಸಿದೆ. ಚಿತ್ರ ಬಿಡುಗಡೆಗೆ ಕೊಂಚ ಹಣದ ಸಹಾಯವನ್ನೂ ಮಾಡಿದೆ. ಚಿತ್ರ ತಕ್ಕಮಟ್ಟಿಗೆ ಓಡಿತು. ನನಗೆ ಒಳ್ಳೆಯ ಹೆಸರನ್ನೂ ತಂದಿತು. ಆದರೆ ಹಣದ ವಿಚಾರದಲ್ಲಿ ವಿವಾದ ಉಂಟಾಯಿತು. ನನ್ನ ಮೇಲೆ ನಿರ್ಮಾಪಕ ಕೆ.ಆರ್.ಮುರಳಿಕೃಷ್ಣ ಹಾಗೂ ನಿರ್ದೇಶಕ ಕೆ.ಆರ್.ಶಾಂತಾರಾಂ ಫೋರ್ಜರಿ ಪ್ರಕರಣ ದಾಖಲಿಸಿದರು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. ಅಲ್ಲಿಯೂ ನನ್ನ ಪರವಾಗಿಯೇ ತೀರ್ಪು ಬಂತು. ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತಾರೆ ಎಂದುಕೊಂಡಿರಲಿಲ್ಲ. ಇತ್ತೀಚೆಗೆ ಸುಪ್ರೀಂಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದೆ~ ಎಂದರು.

`ಈ ಮಧ್ಯೆ ನಾನು ಜೈಲು ಪಾಲಾಗಿದ್ದೇನೆ ಎಂಬ ವದಂತಿ ಹರಡಲಾಯಿತು. ಚಿತ್ರರಂಗದಲ್ಲಿದ್ದ ಸಹೋದ್ಯೋಗಿಗಳೇ ನಾನು ಕಂಬಿ ಎಣಿಸುತ್ತಿರುವುದಾಗಿ ಅಪಪ್ರಚಾರ ನಡೆಸಿದರು. ಕೆಲವರು ಅದನ್ನು ನಂಬಿದ್ದರು.   ಸೂಪರ್ ಸುಪ್ರೀಂಕೋರ್ಟ್ ಎನ್ನುವುದು ಇದ್ದರೆ ಅಲ್ಲಿಗೂ ನನ್ನ ವಿರೋಧಿಗಳು ಹೋಗುತ್ತಿದ್ದರೇನೋ. ಆದರೆ ದೇವರು ಎನ್ನುವ ನ್ಯಾಯಾಲಯ ನನ್ನ ಕೈ ಬಿಡಲಿಲ್ಲ. ಎರಡು ದಶಕಗಳಿಗೂ ಹೆಚ್ಚು ಕಾಲ ನಾನು ಹಾಗೂ ನನ್ನ ಕುಟುಂಬ ಪಟ್ಟ ಯಾತನೆ ಮುಕ್ತಾಯಗೊಂಡಿದೆ~ ಎಂದು ನಿಟ್ಟುಸಿರು ಬಿಟ್ಟರು.

ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಿರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು- `ಆ ಬಗ್ಗೆ ಇನ್ನೂ ಚಿಂತಿಸಿಲ್ಲ. ಮುಂದೆ ಏನಾಗುತ್ತದೋ ತಿಳಿಯದು. ವಿವಾದದಿಂದ ಖುಷಿ ದುಃಖ ಎರಡನ್ನೂ ಒಟ್ಟೊಟ್ಟಿಗೆ ಅನುಭವಿಸಿದ್ದೇನೆ. ಇಡೀ ಪ್ರಕರಣದಿಂದ ನನ್ನ ವಿರುದ್ಧ ಮೊಕದ್ದಮೆ ಹೂಡಿದವರಿಗಿಂತಲೂ ನನಗೇ ಹೆಚ್ಚು ಅನುಕೂಲವಾಗಿದೆ. ನಾನು ಏನೆಂಬುದು ಸಾಬೀತಾಗಿದೆ~ ಎಂದರು.

ಮಾತು ಎ.ಕೆ.56 ಚಿತ್ರದತ್ತ ಹೊರಳಿತು. ಚಿತ್ರದಲ್ಲಿ ಶ್ರೀನಿವಾಸಮೂರ್ತಿ ಮುಖ್ಯಮಂತ್ರಿಯಾಗಿ ನಟಿಸಿದ ಭಾಗವನ್ನು ಕತ್ತರಿಸಲಾಗಿದೆ. ಈ ಬಗ್ಗೆ ಪ್ರಸ್ತಾಪಿಸಿದಾಗ, `ಸುಮಾರು 36 ವರ್ಷ ಚಿತ್ರರಂಗದಲ್ಲಿ ದುಡಿದ ನನಗೆ ಇದರಿಂದ ಪದ್ಮಶ್ರೀ ಪ್ರಶಸ್ತಿ ದೊರೆತಷ್ಟೇ ಸಂತೋಷವಾಗಿದೆ~ ಎಂದು ಹೇಳಿದರು.
 
ಆ ಮಾತಿನಲ್ಲಿ ನೋವು, ವ್ಯಂಗ್ಯ ಎರಡೂ ಸೇರಿಕೊಂಡಿದ್ದವು. “ನಾನು ಶಿಸ್ತಿನ ವ್ಯಕ್ತಿ. ಸಂಭಾಷಣೆ ಸರಿ ಇಲ್ಲದಿದ್ದಾಗ ಮುಖಕ್ಕೆ ಹೊಡೆದಂತೆ ಹೇಳುವವನು. `ಸಂಭಾಷಣೆ~ ಪದವನ್ನು ಸರಿಯಾಗಿ ಬರೆಯಲಾಗದವರು ಕೂಡ ಸಂಭಾಷಣಾಕಾರರಾಗಿರುತ್ತಾರೆ.

ಚಿತ್ರದಲ್ಲಿ ಚೇಸಿಂಗ್ ಸನ್ನಿವೇಶ ಮುಖ್ಯ ಎನಿಸಿರಬೇಕು. ಆದ್ದರಿಂದ ನನ್ನಂತಹವನ ಪಾತ್ರಕ್ಕೆ ಕತ್ತರಿಹಾಕಿರಬಹುದು” ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT