ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಕುಸ್ತಿ: ಫೈನಲ್‌ಗೆ ಶ್ರೀಶೈಲ, ಸಯೀದಾ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕದ ಶ್ರೀಶೈಲ ಎಲ್. ಶೆಟ್ಟಿ ಮತ್ತು ಗದುಗಿನ ಸಯೀದಾ ಬಳಿಗಾರ ಶುಕ್ರವಾರ ಅರಂಭವಾದ ಅಖಿಲ ಭಾರತ ಆಹ್ವಾನಿತ ಕುಸ್ತಿ ಪಂದ್ಯಾವಳಿಯಲ್ಲಿ ಕ್ರಮವಾಗಿ ಪುರುಷರ 96 ಕೆಜಿ ಮೇಲ್ಟಟ್ಟು ಮತ್ತು ಮಹಿಳೆಯರ 51 ಕೆಜಿ ವಿಭಾಗಗಳಲ್ಲಿ ಫೈನಲ್‌ಗೆ ಪ್ರವೇಶಿಸಿದರು.

ದೊಡ್ಡಕೆರೆ ಮೈದಾನದ ಡಿ. ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣದ ಕುಸ್ತಿ ಅಖಾಡದಲ್ಲಿ ನಡೆದ 96ಕೆಜಿ ಮೇಲ್ಪಟ್ಟವರ ವಿಭಾಗದ ಸೆಮಿಫೈನಲ್‌ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಇಲಾಖೆ ಉದ್ಯೋಗಿ ದಾವಣಗೆರೆ ಶ್ರೀಶೈಲ ಅವರು ಕುರುಕ್ಷೇತ್ರದ ಸಂಜಯ್ ಅವರ ಸವಾಲನ್ನು ಸಮರ್ಥವಾಗಿ ಮೆಟ್ಟಿ ನಿಂತರು. ಮದಗಜಗಳಂತೆ ಸೆಣಸಾಡಿದ ಇಬ್ಬರೂ ಪೈಲ್ವಾನರ ಹೋರಾಟ ರೋಚಕವಾಗಿತ್ತು. ಹರಿಯಾಣದ ಪೈಲ್ವಾನನ ಬಿಗಿಪಟ್ಟುಗಳಿಗೆ ತಕ್ಕ ಉತ್ತರ ನೀಡಿದ ಶ್ರೀಶೈಲ ಅಂಕಗಳ ಆಧಾರದಲ್ಲಿ ಗೆದ್ದರು.

ಈ ವಿಭಾಗದ ಇನ್ನೊಂದು ಸೆಮಿಫೈನಲ್ ಪಂದ್ಯವು ಮಳೆಯಿಂದಾಗಿ ನಡೆಯಲಿಲ್ಲ. ಶನಿವಾರ ಬೆಳಿಗ್ಗೆ ನಡೆಯಲಿದ್ದು, ನಂತರ ಫೈನಲ್ ಕೂಡ ನಡೆಯಲಿದೆ.

ಮಹಿಳೆಯರ 51 ಕೆಜಿ ವಿಭಾಗದಲ್ಲಿ ಗದುಗಿನ ಸಯೀದಾ ಬಳಿಗಾರ ಅವರು ಕೊಲ್ಹಾಪುರದ ಪ್ರಿಯಾಂಕ ವಿರುದ್ಧ ಜಯ ಗಳಿಸಿದರು. ಇನ್ನೊಂದು  ಸೆಮಿಫೈನಲ್‌ನಲ್ಲಿ ಪುಣೆಯ ಉಷಾ ಅವರು ಕುರುಕ್ಷೇತ್ರದ ರೇಣು ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು.

ಕರ್ನಾಟಕದ ಪಾರುಪತ್ಯ: 74 ಕೆಜಿ ವಿಭಾಗದಲ್ಲಿ ನಡೆದ ರೋಚಕ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಧಾರವಾಡದ ಎಸ್‌ಎಐ ಕ್ರೀಡಾ ವಸತಿ ಶಾಲೆಯ ಸಂದೀಪ ಕಾಟೆ ಅವರು ಕರ್ನಾಟಕದವರೇ ಆದ ಬಸಪ್ಪ ಮಮದಾಪುರ ಅವರನ್ನು ಸೋಲಿಸಿ ಫೈನಲ್‌ಗೆ ಸಾಗಿದರು.

84 ಕೆಜಿ ವಿಭಾಗದಲ್ಲಿಯೂ ಕರ್ನಾಟಕದ ಆನಂದ್ ಅವರು ಎಂಇಜಿ ತಂಡದ ಶಿವಪ್ರಸಾದ್ ಖೋತ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.  60 ಕೆಜಿ ವಿಭಾಗದಲ್ಲಿಯೂ ಕರ್ನಾಟಕದ ಮಲ್ಲರದ್ದೇ ಪಾರುಪತ್ಯ. ಧಾರವಾಡದ ಎಸ್‌ಟಿಸಿಯ ಎಂ. ನಾಗರಾಜ್ ಅವರು, ಹಳಿಯಾಳದ ಶರೀಫ್ ಜಮಾದಾರ್ ಅವರನ್ನು ಸೋಲಿಸಿ ಅಂತಿಮ ಹಣಾಹಣಿಗೆ ಪ್ರವೇಶಿದ್ದಾರೆ.

ರೀಟಾಗೆ ಜಯ: ಮೈಸೂರಿನ ಹುಡುಗಿ ರೀಟಾ ಪ್ರಿಆಆಂಕಾ 63ಕೆಜಿ ವಿಭಾಗದಲ್ಲಿ ಮೂಡಬಿದರೆಯ ಆತ್ಮಶ್ರೀ ಮೇಲೆ ಗೆದ್ದರು. ರೌಂಟ್ ರಾಬಿನ್ ಲೀಗ್ ಆಧಾರದಲ್ಲಿ  ನಡೆದ ಈ ಸುತ್ತಿನ ಇನ್ನೊಂದು ಪಂದ್ಯದಲ್ಲಿ ರೀಟಾ ಕುರುಕ್ಷೇತ್ರದ ಶಿವಾನಿ ಚೌಧರಿ ಅವರಿಗೆ ಚಿತ್ ಆಗಿ ಸೋತರು.

48 ಕೆಜಿ ವಿಭಾಗದಲ್ಲಿ ಮುಂಬೈನ ನಂದಿನಿ ಸಿ. ಸಾಳುಂಕೆ ಅವರು ಹರಿಯಾಣದ ಭಿವಾನಿಯ ಮಮತಾ ವಿರುದ್ಧ ಜಯಿಸಿ ಫೈನಲ್‌ಗೆ ಸಾಗಿದ್ದಾರೆ.

ಲಕ್ಷ್ಮಣ ಮುನವಳ್ಳಿ ದಸರಾ ಕಿಶೋರ
ಬೆಳಗಾವಿಯ ಕ್ರೀಡಾ ಶಾಲೆಯ ಪೈಲ್ವಾನ ಲಕ್ಷ್ಮಣ ಮುನವಳ್ಳಿ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ದಸರಾ ಕಿಶೋರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಶುಕ್ರವಾರ ನಡೆದ 58ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಲಕ್ಷ್ಮಣ ಮುನವಳ್ಳಿಯವರು ಬೆಳಗಾವಿಯವರೇ ಆದ ಮಲ್ಲಗೌಡ ಎಸ್. ಪಾಟೀಲ ಅವರನ್ನು ಸೋಲಿಸಿದರು.

ದಸರಾ ಕೇಸರಿ ಫೈನಲ್‌ಗೆ ವೆಂಕಟೇಶ: 74 ಕೆಜಿ ವಿಭಾಗದ ದಸರಾ ಕೇಸರಿ ಪ್ರಶಸ್ತಿಗಾಗಿ ಹಳಿಯಾಳದ ವೆಂಕಟೇಶ ಪಾಟೀಲ ಮತ್ತು ಅಥಣಿಯ ಪಾಂಡುರಂಗ ಕಂಬಾರ್ ಪೈಪೋಟಿ ನಡೆಸಲಿದ್ದಾರೆ.

ಫಲಿತಾಂಶಗಳು: ಪುರುಷರು: 55ಕೆಜಿ ವಿಭಾಗ: ಎಂ.ಎಲ್. ಧೋಂಡಿ (ಬಾಗಲಕೋಟೆ)-1, ಕೆಂಚಪ್ಪ (ಕ್ರೀಡಾ ಶಾಲೆ ದಾವಣಗೆರೆ)-2, ಸರದಾರ್ ಮುಲ್ತಾನಿ (ಬೆಳಗಾವಿ)-3, ವಿನಾಯಕ ಗುರವ (ಕ್ರೀಡಾ ಶಾಲೆ ಬೆಳಗಾವಿ)-3. 58ಕೆಜಿ: (ದಸರಾ ಕಿಶೋರ್ ):  ಲಕ್ಷ್ಮಣ ಮುನವಳ್ಳಿ (ಕ್ರೀಡಾ ಶಾಲೆ, ಬೆಳಗಾವಿ)-1, ಮಲ್ಲಗೌಡ ಎಸ್. ಪಾಟೀಲ (ಬೆಳಗಾವಿ)-2.
60ಕೆಜಿ: ಗಣೇಶ್ (ಧಾರವಾಡ)-3, ಅವರು ಸಂತೋಷ ಪೂಜಾರಿ (ಧಾರವಾಡ ಮೇಲೆ ಗೆದ್ದರು) ಸಿದ್ದು ಹೊಸಮನಿ (ಬಾಗಲಕೋಟೆ)-3 ಅವರು ಸಿದ್ಧಣ್ಣ ಎಸ್. ಪಾಟೀಲ (ಕ್ರೀಡಾ ಶಾಲೆ ಬೆಳಗಾವಿ) ಮೇಲೆ ಗೆದ್ದರು.
66ಕೆಜಿ: ಶಿವಾಜಿ ರೆಡೇಕರ್ (ಬೆಳಗಾವಿ)-1, ಶಿವಾನಂದ ಅಮ್ಮಣಗಿ (ಕ್ರೀಡಾಶಾಲೆ ದಾವಣಗೆರೆ)-2, ಪಾಂಡುರಂಗ ಶಿಂಧೆ (ಕ್ರೀಡಾ ಶಾಲೆ, ಬೆಳಗಾವಿ)-3. ಶಂಕರ (ಬೆಳಗಾವಿ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT