ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮಹೋತ್ಸವಕ್ಕೆ ಚಾಲನೆ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ವಿಶ್ವವಿಖ್ಯಾತ 402ನೇ ದಸರಾ ಮಹೋತ್ಸವವು ಚಾಮುಂಡಿ ಬೆಟ್ಟದಲ್ಲಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಭಕ್ತಿ ಮತ್ತು ವರ್ಣರಂಜಿತ ಪರಿಸರದಲ್ಲಿ ಅಧಿಕೃತವಾಗಿ ಮಂಗಳವಾರ ಆರಂಭಗೊಂಡಿತು.

ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ನಾಡದೇವತೆ ಚಾಮುಂಡೇಶ್ವರಿಗೆ ಬೆಳಿಗ್ಗೆ 10.42 ರಿಂದ 11.12 ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಅಗ್ರಪೂಜೆ ಸಲ್ಲಿಸಿದರು. ಬಳಿಕ ವೇದಿಕೆಯಲ್ಲಿದ್ದ ಬೆಳ್ಳಿರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪಂಚಲೋಹದ ದೇವಿಗೆ ಪುಷ್ಪಾರ್ಚನೆ ಮಾಡಿದರು.

ಇವರೊಂದಿಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಿಲ್ಪಾ ಜಗದೀಶ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಸಹ ಪುಷ್ಪಾರ್ಚನೆ ಮಾಡಿದರು.  ಈ ಸಂದರ್ಭದಲ್ಲಿ ಭಜನಾ ಮಂಡಳಿಯ 200 ಕ್ಕೂ ಹೆಚ್ಚು ಮಹಿಳೆಯರು ಮಹಿಷಾಸುರ ಮರ್ದಿನೀ ಸ್ತೋತ್ರ ಪಠಿಸಿದರು.

ಸಿಂಗಾರಗೊಂಡ ಬೆಟ್ಟ: ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸುವ ಸಲುವಾಗಿ ಚಾಮುಂಡಿಬೆಟ್ಟದ ಏಕೈಕ ಪ್ರಮುಖ ರಸ್ತೆಯನ್ನು ಸಿಂಗರಿಸಲಾಗಿತ್ತು. ಮಹಿಷಾಸುರ ವೃತ್ತದಿಂದ ಚಾಮುಂಡೇಶ್ವರಿ ದೇವಸ್ಥಾನದವರೆಗೂ ತಳಿರು, ತೋರಣ, ಸ್ವಾಗತ ಕಮಾನು, ಬಣ್ಣ ಬಣ್ಣದ ರಂಗೋಲಿಗಳು ಕಂಗೊಳಿಸಿದವು. ನಂದಿಧ್ವಜ, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಬೀಸುಕಂಸಾಳೆ, ತಮಟೆ, ನಗಾರಿ ಮೆರಗು ನೀಡಿದವು. ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು.

ವಿಮಾನದಿಂದ ಪುಷ್ಪಾರ್ಚನೆ: ಇದೇ ಪ್ರಥಮ ಬಾರಿಗೆ ದಸರಾ ಉದ್ಘಾಟನೆ ಸಂದರ್ಭದಲ್ಲಿ `ಮಹಾರಾಜ~ ಚಿಕ್ಕ ವಿಮಾನದ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ಈ ವಿಮಾನ  ಚಾಮುಂಡೇಶ್ವರಿ ದೇವಸ್ಥಾನವನ್ನು ಎರಡು ಪ್ರದಕ್ಷಣೆ ಹಾಕಿ, ಎಲ್ಲರ ಗಮನ ಸೆಳೆಯಿತು.

ಈ ಬಾರಿ ದಸರಾ ಉದ್ಘಾಟನಾ ವೇಳೆ ಹೆಚ್ಚಾಗಿ ಪ್ರವಾಸಿಗರು ಕಾಣಿಸಿಕೊಳ್ಳಲಿಲ್ಲ. ವಿಶೇಷವಾಗಿ ವಿದೇಶಿ ಪ್ರವಾಸಿಗರ ಸಂಖ್ಯೆ ಬೆರಳೆಣಿಯಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT