ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ವೈಭವ ಸವಿದ ಅಂಧರು, ವಿಶೇಷ ಮಕ್ಕಳು

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ವಿಶ್ವವಿಖ್ಯಾತ ದಸರಾ ಮೆರವಣಿಗೆಯನ್ನು ಶಕ್ತರು ಭಾಗವಹಿಸಿ ಆನಂದಿಸುವುದು ಸಹಜ. ಆದರೆ ದೃಷ್ಟಿಯನ್ನು ಕಳೆದುಕೊಂಡವರು, ಬುದ್ಧಿಮಾಂದ್ಯ ವಿಶೇಷ ಮಕ್ಕಳು ಕೂಡ ದಸರಾ ಸಂಭ್ರಮ ಸವಿದಿದ್ದು ಈ ಬಾರಿಯ ವಿಶೇಷ.

ಈ ಬಾರಿಯ ದಸರಾದಲ್ಲಿ ಅಂಧರು, ಬುದ್ಧಿಮಾಂದ್ಯರು, ಅಂಗವಿಕಲರು, ವಯೋವೃದ್ಧರು (70 ವರ್ಷ ಮೇಲ್ಪಟ್ಟವರು) ಮಹಿಳೆಯರು, ಮಕ್ಕಳು ಮತ್ತು ಗ್ರಾಮೀಣರಿಗೆ ದಸರಾ ಸಂಭ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.
 
ಇಂತಹ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್.
ದಸರಾ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಸೇರುವುದರಿಂದ ನೂಕು ನುಗ್ಗಲು ಉಂಟಾಗಿ ಅನಾಹುತ ಆಗಬಹುದೆಂದು ಅಂಗವಿಕಲರು, ವಯೋವೃದ್ಧರು, ವಿಶೇಷ ಮಕ್ಕಳು ದಸರಾ ಮೆರವಣಿಗೆಯಿಂದ ದೂರ ಉಳಿಯುತ್ತಿದ್ದರು. ಆದರೆ ಟ್ರಸ್ಟ್ ನಗರದ ಸಯ್ಯಾಜಿರಾವ್ ರಸ್ತೆಯ ಜಿಲ್ಲಾ ಗ್ರಂಥಾಲಯದಿಂದ ಜಿಲ್ಲಾ ಕೈಗಾರಿಕಾ ಸಂಸ್ಥೆವರೆಗೆ ಇವರಿಗಾಗಿ ಶಾಮಿಯಾನದ ವ್ಯವಸ್ಥೆ ಮಾಡಿತ್ತು.

ಚಾಮುಂಡೇಶ್ವರಿ ದೇವಿಯ ಜಂಬೂ ಸವಾರಿ, ಕಲಾ ಮೇಳಗಳು, ಸ್ತಬ್ಧ ಚಿತ್ರಗಳು ಹೀಗೆ ಮೆರವಣಿಗೆಯ ಸಂಪೂರ್ಣ ವೀಕ್ಷಕ ವಿವರಣೆಯನ್ನು ಸುಧಾಕರ ಚನ್ನಹಳ್ಳಿ ಮತ್ತು ವೈ.ಡಿ.ರಾಜಣ್ಣ ನೀಡಿದರು. ಕಲಾ ಮೇಳ, ಸ್ತಬ್ಧಚಿತ್ರಗಳು ಹಾದು ಹೋಗುತ್ತಿದ್ದಂತೆ ಪೂರ್ಣ ಮಾಹಿತಿ ಪಡೆದ ವಿಶೇಷ ಮಕ್ಕಳು ಜೋರು ಚಪ್ಪಾಳೆ ತಟ್ಟಿ ಆನಂದಿಸಿದರು. ಮೆರವಣಿಗೆಯ ಪ್ರತಿಯೊಂದು ದೃಶ್ಯಾವಳಿಗಳನ್ನು ವರ್ಣಿಸಿ ಅಂಧರಿಗೆ ಮನವರಿಕೆ ಮಾಡಿಕೊಡಲಾಯಿತು. ಬುದ್ಧಿಮಾಂದ್ಯ ವಿಶೇಷ ಮಕ್ಕಳ ಮನಃಸ್ಥಿತಿಯನ್ನು ಅರಿತು ವೀಕ್ಷಕ ವಿವರಣೆ ನೀಡಲಾಯಿತು.

ದಸರಾ ನೋಡುವ ಭಾಗ್ಯ ಅಂಧರಿಗೆ ಸಿಗದಿದ್ದರೂ ಮೆರವಣಿಗೆಯ ವೈಭವ ಸವಿಯಲು ಟ್ರಸ್ಟ್ ಅವಕಾಶ ಮಾಡಿಕೊಟ್ಟಿದ್ದಕ್ಕೆ ಅಂಧರು ಪ್ರಶಂಸೆ ವ್ಯಕ್ತಪಡಿಸಿದರು. ಅಂಧರು, ಬುದ್ಧಿಮಾಂದ್ಯರು, ಅಂಗವಿಕಲರು 150 ಮಂದಿ ವಿಶೇಷ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡರು. ಉಳಿದಂತೆ ವಯೋವೃದ್ಧರು, ಮಹಿಳೆಯರು, ಮಕ್ಕಳು, ಗ್ರಾಮೀಣ ಪ್ರದೇಶದ ಜನತೆ  ಸೇರಿದಂತೆ ಒಟ್ಟು 4 ಸಾವಿರ ಮಂದಿ ವಿಶೇಷ ಮಕ್ಕಳೊಂದಿಗೆ ಭಾಗವಹಿಸಿದ್ದರು. ಟ್ರಸ್ಟ್ ಎಲ್ಲರಿಗೂ ಪಾಸ್‌ಗಳನ್ನು ವಿತರಣೆ ಮಾಡಿತ್ತು.

`4 ಸಾವಿರ ಮಂದಿಗೂ ಮಧ್ಯಾಹ್ನದ ಊಟ, ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ಸಹಾಯಕ್ಕಾಗಿ ಎನ್‌ಎಸ್‌ಎಸ್ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗಿದೆ. ಕಟ್ಟಕಡೆಯ ಮನುಷ್ಯನಿಗೂ ದಸರಾ ಸಂಭ್ರಮವನ್ನು ತಲುಪಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ~ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬೆಕ್ಯಾ ರವಿಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT