ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಹಾಫ್ ಮ್ಯಾರಥಾನ್‌ಗೆ ಹೊಸ ಸ್ಪರ್ಶ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಈ ಬಾರಿಯ ದಸರಾ ಹಾಫ್ ಮ್ಯಾರಥಾನ್‌ಗೆ ಉತ್ಸವದ ರಂಗು ತುಂಬಲಿದೆ. ಜೊತೆಗೆ ಆಧುನಿಕ ತಂತ್ರಜ್ಞಾನವೂ ಜೊತೆಗೂಡಲಿದೆ!

ಈ ದಸರೆಯಲ್ಲಿ ಮ್ಯಾರಥಾನ್ ಓಟಗಾರರು ಧರಿಸುವ ಬೂಟುಗಳು ಸಾಮಾನ್ಯವಾದುವಲ್ಲ. ಎಲೆಕ್ಟ್ರಾನಿಕ್ ಟೈಮಿಂಗ್ ಚಿಪ್ ಅಳವಡಿಸಿದ ಬೂಟುಗಳು ಅವು.

ಕಳೆದ ಆರು ವರ್ಷಗಳಿಂದ ದಸರಾ ಕ್ರೀಡಾ ಸಮಿತಿಯು ನಡೆಸುತ್ತಿರುವ ಮೈಸೂರು ಮ್ಯಾರಥಾನ್‌ಗೆ ಈಗ ಖಾಸಗಿ ಪ್ರಾಯೋಜಕತ್ವ ಸಿಕ್ಕಿದೆ. ಲೈಫ್ ಈಸ್ ಕಾಲಿಂಗ್ ಸ್ಪೋರ್ಟ್ಸ್ ಸಂಸ್ಥೆಯು ಈ ಓಟದ ಉಸ್ತುವಾರಿಯನ್ನು ವಹಿಸಲಿದೆ. ಅದಕ್ಕಾಗಿಯೇ ಈ ಓಟಕ್ಕೆ ಈಗ ಉತ್ಸವದ ಮೆರಗು ಬಂದಿದೆ.

ಓಟಗಾರರ ಸಮಯವನ್ನು ದಾಖಲಿಸಲು ಹಳೆಯ ಪದ್ಧತಿಗಳನ್ನು ಬಿಟ್ಟು ಇದೇ ಮೊದಲ ಬಾರಿಗೆ ಟೈಮಿಂಗ್ ಚಿಪ್ ಬಳಕೆ ಮಾಡಲಾಗುತ್ತಿದೆ. ಈ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ಓಟಗಾರರು ಧರಿಸುವ ಬೂಟಿಗೆ ಕಟ್ಟಲಾಗುತ್ತದೆ. ಇದರಲ್ಲಿ ಓಡುವ ಮಾರ್ಗದ ಟ್ರ್ಯಾಕ್ ಅನ್ನೂ ಮೊದಲೇ ದಾಖಲಿಸಲಾಗಿರುತ್ತದೆ.

ಚಾಂಪಿಯನ್‌ಷಿಪ್ ಸಂಸ್ಥೆಯು ಈ ಚಿಪ್ ಅನ್ನು ವಿನ್ಯಾಸಗೊಳಿಸಿದೆ. ಯುರೋಪ್, ಅಮೆರಿಕಗಳಲ್ಲಿ ನಡೆಯುವ ಮ್ಯಾರಥಾನ್‌ಗಳಲ್ಲಿ ಈ ರೀತಿಯ ಚಿಪ್‌ಗಳನ್ನು ಬಳಸಲಾಗುತ್ತಿದೆ. ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್ ಡಿವೈಸ್ (ಆರ್‌ಎಫ್‌ಐಡಿ) ತಂತ್ರಜ್ಞಾನದಲ್ಲಿ ಈ ಚಿಪ್ ಕಾರ್ಯ ನಿರ್ವಹಿಸುತ್ತದೆ.

ರೇಸ್ ನಡೆಯುವ ಮಾರ್ಗದಲ್ಲಿ ಎಲೆಕ್ಟ್ರಾನಿಕ್ ಸೆನ್ಸಾರ್‌ಗಳನ್ನು ಅಳವಡಿಸಲಾಗಿರುತ್ತದೆ. ಆ ಸೆನ್ಸಾರ್‌ಗಳಿಗೂ ಈ ಚಿಪ್‌ಗೂ ತರಂಗಾಂತರಗಳನ್ನು ಸಂಯೋಜನೆಗೊಳಿಸಲಾಗಿರುತ್ತದೆ. ಇದರ ಆಧಾರದ ಮೇಲೆ ಸಮಯ ದಾಖಲಾಗುತ್ತದೆ.

ಸಾಂಸ್ಕೃತಿಕ ಸಿಂಚನ: ಈ ಬಾರಿ ಹಾಫ್ ಮ್ಯಾರಥಾನ್‌ಗೆ ಸಾಂಸ್ಕೃತಿಕ ರಂಗು ಕೂಡ ನೀಡಲಾಗುತ್ತಿದೆ. ಓಟದ ಮಾರ್ಗದಲ್ಲಿ ಸಂಗೀತ, ಬ್ಯಾಂಡ್ ಮತ್ತು ಜನಪದ ನೃತ್ಯಗಳನ್ನು ಆಯೋಜಿಸಲಾಗುತ್ತಿದೆ.

ವಿವಿಧ ಸಾಂಸ್ಕೃತಿಕ ತಂಡಗಳು ಇಲ್ಲಿ ಭಾಗವಹಿಸಲಿದ್ದು ಓಟದ ಹಾದಿಯ ಇಕ್ಕೆಲಗಳಲ್ಲಿ ಇದ್ದು, ಓಟಗಾರರನ್ನು `ಚಿಯರ್~ ಮಾಡಲಿವೆ. ಮೈಸೂರು ದಸರಾ ಕ್ರೀಡೆಯ ಇತಿಹಾದಲ್ಲಿ ಇಂತಹದೊಂದು ಪ್ರಯತ್ನ ಇದೇ ಮೊದಲ ಬಾರಿಗೆ ನಡೆಯುತ್ತಿದೆ.

21ಕಿಲೋಮೀಟರ್ ಹಾಫ್ ಮ್ಯಾರಥಾನ್ ಜೊತೆಗೆ 10 ಕಿಲೋಮೀಟರ್ ವಿಭಾಗದ ಓಟಕ್ಕೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಇನ್ನೂ ಮೂರು ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಗಳಿಗೆ ಕಾಣಿಕೆಗಳನ್ನು ಮಾತ್ರ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

2004-05ನೇ ಸಾಲಿನಿಂದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ದಸರಾ ಕ್ರೀಡಾ ಸಮಿತಿಯು ನಡೆಸುತ್ತಿದ್ದ ಹಾಫ್ ಮ್ಯಾರಥಾನ್‌ಗೆ ಈ ವರ್ಷ ಖಾಸಗಿ ಪ್ರಾಯೋಜಕತ್ವ ಸಿಕ್ಕಿದೆ. 10ಕೆ ರನ್ ಮಾದರಿಯಲ್ಲಿ ಇಲ್ಲಿಯೂ ವಿಶ್ವದರ್ಜೆಯ ಅಥ್ಲೀಟ್‌ಗಳು ಬರುವ ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ. ಈಗಾಗಲೇ 500 ಅಥ್ಲೀಟ್‌ಗಳು ಹೆಸರು ನೋಂದಾಯಿಸಿದ್ದಾರೆ.

ಮುಂಬೈ, ಬೆಂಗಳೂರು ಮತ್ತಿತರ ಕಡೆ ನಡೆಯುವ ಅಂತರರಾಷ್ಟ್ರೀಯ ಓಟಗಳ ಮಾದರಿಯಲ್ಲಿಯೇ ದಸರಾ ಹಾಫ್ ಮ್ಯಾರಥಾನ್ ಆಯೋಜಿಸುವ ಪ್ರಯತ್ನ ನಡೆಯುತ್ತಿದೆ. ಜೊತೆಗೆ ಮೈಸೂರಿನ ಐತಿಹಾಸಿಕ ಕಟ್ಟಡಗಳು, ಕೆರೆಗಳು, ವಿಶ್ವವಿದ್ಯಾಲಯಗಳು ಇರುವ ಮಾರ್ಗವನ್ನು ಆಯ್ಕೆ ಮಾಡಲಾಗುತ್ತಿದೆ.

ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವವನ್ನುದಸರಾ ಕ್ರೀಡೆಯಲ್ಲಿ ತರುವ ಮೊದಲ ಪ್ರಯತ್ನ ಇದಾಗಿದ್ದು, ಉತ್ತಮ ಫಲಿತಾಂಶವನ್ನು ಮೈಸೂರಿಗರು ನಿರೀಕ್ಷಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT