ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲಾಗದ ಎಫ್‌ಐಆರ್- ಹೈಕೋರ್ಟ್ ತರಾಟೆ

Last Updated 22 ಫೆಬ್ರುವರಿ 2011, 19:55 IST
ಅಕ್ಷರ ಗಾತ್ರ

ಬೆಂಗಳೂರು: ದಾಸ್ತಾನು ಮಳಿಗೆಯೊಂದರ ಮೇಲೆ ದಾಂದಲೆ ನಡೆಸಿರುವ ಆರೋಪ ಹೊತ್ತ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರ ಪುತ್ರ ಸಿ.ಎಂ. ಫಯಾಜ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳದ ಪೊಲೀಸರ ವಿರುದ್ಧ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ಫಯಾಜ್ ಅವರ ವಿರುದ್ಧ ನಗರದ ಆವಲಹಳ್ಳಿ ಸಮೀಪದ ನಿಂಬೇಕಾಯಿಪುರ ಗ್ರಾಮದಲ್ಲಿನ ಸುಭಿಕ್ಷಾ ಟ್ರೇಡಿಂಗ್ ಲಿಮಿಟೆಡ್‌ನ ಮಾಲೀಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಎಸ್‌ಪಾಟೀಲ್ ನಡೆಸುತ್ತಿದ್ದಾರೆ.‘ಒಂದು ವೇಳೆ ಅರ್ಜಿದಾರರು ಮಾಡಿರುವ ಆರೋಪವು ಸತ್ಯಾಂಶದಿಂದ ಕೂಡಿದ್ದರೆ ಈ ರಾಜ್ಯದಲ್ಲಿ ಕಾನೂನು ಪಾಲನೆ ಆಗುತ್ತಿಲ್ಲ ಎಂಬುದು ಸ್ಪಷ್ಟಗೊಳ್ಳುತ್ತದೆ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು. ಈ ಹಿನ್ನೆಲೆಯಲ್ಲಿ ಫಯಾಜ್ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲು ಮಾಡಿಕೊಳ್ಳದ ಕಾರಣ ಕೇಳುವ ಸಂಬಂಧ ಆವಲಹಳ್ಳಿಯ ಪೊಲೀಸ್ ಠಾಣೆಯ ಮುಖ್ಯಸ್ಥರು ಇದೇ ಗುರುವಾರ ಖುದ್ದು ಹಾಜರು ಇರಬೇಕು ಎಂದು ಅವರು ನಿರ್ದೇಶಿಸಿದ್ದಾರೆ.

ತಾವು ನಡೆಸುತ್ತಿರುವ ಮಳಿಗೆಯ ಜಾಗವು ಫಯಾಜ್ ಹಾಗೂ ಅವರ ತಾಯಿ ಶಹೀಲಾ ಅವರಿಂದ ಗುತ್ತಿಗೆಗೆ ಪಡೆಯಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಇದೇ 24ರಂದು ಏಕಾಏಕಿಯಾಗಿ ಫಯಾಜ್ ಸುಮಾರು 20ಮಂದಿಯನ್ನು ಕರೆದುಕೊಂಡು ಬಂದು ದಾಂದಲೆ ನಡೆಸಿದ್ದಾರೆ.  ಆದರೆ ಅವರು ಮಾಜಿ ಸಚಿವರ ಪುತ್ರ ಆಗಿರುವ ಕಾರಣ ಪೊಲೀಸರು ಹಾಗೂ ಇತರ ಅಧಿಕಾರಿಗಳು ಈ ಬಗ್ಗೆ ಮೌನ ತಾಳಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲು ಮಾಡುವಂತೆ ಹಾಗೂ ತಮಗೆ ಪೊಲೀಸ್ ರಕ್ಷಣೆ ನೀಡಲು ಆದೇಶಿಸುವಂತೆ ಕೋರಲಾಗಿದೆ.

ವಿಚಾರಣೆಗೆ ತಡೆ
ಬ್ಯಾಂಕ್ ಒಂದಕ್ಕೆ ಲಕ್ಷಾಂತರ ರೂ ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ರಾಜ್ಯಸಭೆಯ ಉಪಸಭಾಪತಿ ಕೆ.ರೆಹಮಾನ್ ಖಾನ್ ಅವರ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ವಿಚಾರಣೆಯನ್ನು ಪ್ರಶ್ನಿಸಿ ಸಂಬಂಧಿತ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿರುವ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು, ಅಲ್ಲಿಯವರೆಗೆ ವಿಚಾರಣೆಗೆ ತಡೆ ನೀಡಲಾಗುವುದು ಎಂದರು.

ನಗರದ ‘ಅಮಾನತ್ ಸಹಕಾರಿ ಬ್ಯಾಂಕ್’ನಲ್ಲಿ ನಡೆದಿದೆ ಎನ್ನಲಾದ 10.2 ಕೋಟಿ ರೂಪಾಯಿ ಅವ್ಯವಹಾರದ ಪ್ರಕರಣದಲ್ಲಿ ನಿರ್ದೇಶಕರಲ್ಲಿ ಒಬ್ಬರಾಗಿರುವ ಖಾನ್ ಸೇರಿದಂತೆ ಇತರ 10 ಮಂದಿ ನಿರ್ದೇಶಕರು ಹಾಗೂ 8 ಸಿಬ್ಬಂದಿ ವಿರುದ್ಧ ವಿಚಾರಣೆಗೆ ಫೆ.14ರಂದು ಸಹಕಾರ ಸಂಘಗಳ ರಿಜಿಸ್ಟ್ರಾರ್ ಆದೇಶಿಸಿದ್ದಾರೆ. ಈ ಹಣವನ್ನು ಆರೋಪಿಗಳಿಂದ ವಸೂಲಿ ಮಾಡುವಂತೆ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT