ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕೆನರಾ ಬ್ಯಾಂಕ್‌ನಲ್ಲಿ ಅಗ್ನಿ ಆಕಸ್ಮಿಕ

Last Updated 25 ಫೆಬ್ರುವರಿ 2011, 16:35 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಮಂಡಿಪೇಟೆಯ ಕೆನರಾಬ್ಯಾಂಕ್ ಶಾಖಾ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅನಾಹುತ ಸಂಭವಿಸಿದ್ದು ಪೀಠೋಪಕರಣ, ದಾಖಲೆ ಪತ್ರ, ಕಂಪ್ಯೂಟರ್ ಭಸ್ಮವಾಗಿವೆ.ಮುಂಜಾನೆ 6ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸಮೀಪದ ಪೆಟ್ರೋಲ್ ಪಂಪ್ ಸಿಬ್ಬಂದಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. 2 ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸಿದವು.

ವ್ಯವಸ್ಥಾಪಕರ ಕೊಠಡಿ ಹೊರತುಪಡಿಸಿ ಉಳಿದಂತೆ ಎಲ್ಲ ವಿಭಾಗಗಳು ಭಸ್ಮವಾಗಿವೆ. ನೆಲಮಾಳಿಗೆಯಲ್ಲಿನ ಭದ್ರತಾ ಕೊಠಡಿಗೆ ಯಾವುದೇ ಹಾನಿಯಾಗಿಲ್ಲ. ಹಣ, ಚಿನ್ನಾಭರಣ ಇತ್ಯಾದಿ ಸುರಕ್ಷಿತವಾಗಿವೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದರು.ಬೆಂಕಿಯ ರಭಸಕ್ಕೆ ಪೀಠೋಪಕರಣ ಸುಟ್ಟು ಕರಕಲಾಗಿವೆ. ಕಿಟಕಿ ಗಾಜು ಒಡೆದಿವೆ. ಬ್ಯಾಂಕ್‌ನ ಎರಡೂ ಬದಿ ಪೆಟ್ರೋಲ್ ಪಂಪ್ ಇದ್ದು, ಬೆಂಕಿ ಸ್ವಲ್ಪ ಮುಂದುವರಿದಿದ್ದರೆ ಅವುಗಳಿಗೂ ಹಾನಿಯಾಗುವ ಸಂಭವವಿತ್ತು.

ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಆದರೆ, ಹಾನಿಯ ನಿಖರ ಮೌಲ್ಯ ತಿಳಿದುಬಂದಿಲ್ಲ ಎಂದು ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯ ಮೂಲಗಳು ತಿಳಿಸಿವೆ. ಸುಮಾರು 20 ಕಂಪ್ಯೂಟರ್, ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿವೆ.ಅನಾಹುತಕ್ಕೆ ಶಾರ್ಟ್ ಸರ್ಕಿಟ್ ಕಾರಣವಾಗಿರಬಹುದು ಎಂದು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಶಂಕಿಸಿದ್ದಾರೆ. ಇದರಿಂದಾಗಿ ಸೈರನ್ ಕೂಡಾ ಮೊಳಗಲು ವಿಫಲವಾಗಿದೆ.

ಗ್ರಾಹಕರಿಗೆ ತೊಂದರೆ ಇಲ್ಲ: ಅಗ್ನಿ ಅನಾಹುತದಿಂದ ಗ್ರಾಹಕರಿಗೇನೂ ನಷ್ಟವಿಲ್ಲ. ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವುದರಿಂದ ಗ್ರಾಹಕರು ನಗರದ ಯಾವುದೇ ಶಾಖೆಯಲ್ಲಿ ವ್ಯವಹಾರ ನಡೆಸಬಹುದು. 50 ಸಾವಿರ ಅಥವಾ ಅದಕ್ಕಿಂತ ಮೇಲ್ಪಟ್ಟು ಮೊತ್ತದ ವ್ಯವಹಾರಗಳನ್ನು ನಗರದ ಪಿಬಿ ರಸ್ತೆಯ ಹಳೇ ಬಸ್ ನಿಲ್ದಾಣದ ಎದುರಿನ ಶಾಖೆ ಅಥವಾ ಪಿಜೆ ಬಡಾವಣೆಯ ಶಾಖೆಯಲ್ಲಿ ನಡೆಸಬಹುದು. ಇಲ್ಲಿನ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಿ ವ್ಯವಹಾರ ನಡೆಸಲಾಗುತ್ತಿದೆ.

ಬ್ಯಾಂಕ್‌ಗೂ ಅಗಾಧ ಹಾನಿಯೇನೂ ಆಗಿಲ್ಲ. ಎಲ್ಲ ದತ್ತಾಂಶಗಳು ಕೇಂದ್ರೀಕೃತ ವ್ಯವಸ್ಥೆಯಲ್ಲಿದ್ದು ಸುರಕ್ಷಿತವಾಗಿವೆ.ಒಂದೆರಡು ದಿನಗಳಲ್ಲಿ ವ್ಯವಹಾರ ಯಥಾಸ್ಥಿತಿಗೆ ಬರಲಿದೆ ಎಂದು ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಶ್ರೀರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT