ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ಶುಲ್ಕ ಸಂಗ್ರಹಣೆಗೆ ಪ್ರತಿಪಕ್ಷಗಳ ವಿರೋಧ

Last Updated 30 ಡಿಸೆಂಬರ್ 2010, 10:50 IST
ಅಕ್ಷರ ಗಾತ್ರ

ಸೆಸ್ ವಸೂಲಿಗೆ ಅಸ್ತು
ಬೆಂಗಳೂರು:
ಭೂ ಪರಿವರ್ತನೆಯಾದ ಆಸ್ತಿಗಳಿಂದ ಸುಧಾರಣಾ ಶುಲ್ಕ ಸಂಗ್ರಹ, ಘನ ತ್ಯಾಜ್ಯ ನಿರ್ವಹಣೆಗೆ ಮಾಸಿಕ ಸೆಸ್ ವಸೂಲಿ ಹಾಗೂ 2010ರ ಜೂನ್ 30ಕ್ಕೆ ಕೊನೆಗೊಂಡಿದ್ದ ಜಾಹೀರಾತು ಫಲಕಗಳ ಪರವಾನಗಿ ಅವಧಿಯನ್ನು ಒಂದು ವರ್ಷದ ಅವಧಿಗೆ ನವೀಕರಿಸುವ ಪ್ರಸ್ತಾವಕ್ಕೆ ಪಾಲಿಕೆ ಕೌನ್ಸಿಲ್ ಸಭೆ ಅನುಮೋದನೆ ನೀಡಿತು.

ಬಹು ನಿರೀಕ್ಷಿತ ಸುಧಾರಣಾ ಶುಲ್ಕ ಸಂಗ್ರಹ ಪ್ರಸ್ತಾವಕ್ಕೆ ಬುಧವಾರ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಅದರಂತೆ ಭೂ ಪರಿವರ್ತನೆಯಾದ ಆಸ್ತಿದಾರರು ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಚದರ ಮೀಟರ್‌ಗೆ ಇಂತಿಷ್ಟು ಶುಲ್ಕ ಪಾವತಿಸಬೇಕಾಗುತ್ತದೆ (ವಿವರವನ್ನು ಪಟ್ಟಿಯಲ್ಲಿ ನೀಡಲಾಗಿದೆ).ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಹಾಗೂ ಕೈಗೊಳ್ಳಲಿರುವ ಹೊಸ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ಪಾಲಿಕೆ ಸುಧಾರಣಾ ವೆಚ್ಚ ಸಂಗ್ರಹಿಸಲಿದೆ. ಒಬ್ಬ ಆಸ್ತಿದಾರರು ಒಮ್ಮೆ ಮಾತ್ರ ಸುಧಾರಣಾ ಶುಲ್ಕ ಪಾವತಿಸಬೇಕಾಗುತ್ತದೆ. ಈ ಹಿಂದೆ ಸುಧಾರಣಾ ಶುಲ್ಕ ಪಾವತಿಸಿದ್ದರೆ ಈಗ ಪಾವತಿಸಬೇಕಾದ ಅಗತ್ಯವಿಲ್ಲ.

ತ್ಯಾಜ್ಯ ವಿಲೇವಾರಿ ಸೆಸ್: ಪ್ರತಿ ವರ್ಷವೂ ತ್ಯಾಜ್ಯ ನಿರ್ವಹಣೆಗೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವ ಪಾಲಿಕೆಯು ನಗರದ ನಿವಾಸಿಗಳಿಂದ ತ್ಯಾಜ್ಯ ವಿಲೇವಾರಿ ಉಪಕರ ಸಂಗ್ರಹಿಸಲು ಮುಂದಾಗಿದೆ. ಅದರಂತೆ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾಸಿಕ ಕರ ಸಂಗ್ರಹ ದರ ನಿಗದಿಪಡಿಸಿದ್ದು, ಆಸ್ತಿ ತೆರಿಗೆ ಜತೆಯಲ್ಲೇ ತ್ಯಾಜ್ಯ ವಿಲೇವಾರಿ ಸೆಸ್ ಸಂಗ್ರಹಿಸಲಿದೆ.

ಈ ಕುರಿತ ಪ್ರಸ್ತಾವ ಮಂಡಿಸಿದ ಆಡಳಿತ ಪಕ್ಷದ ನಾಯಕ ಬಿ.ಎಸ್. ಸತ್ಯನಾರಾಯಣ, ‘ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮದ (2000) ಅನ್ವಯ ನಗರ ಸ್ಥಳೀಯ ಸಂಸ್ಥೆಗಳು ಮನೆ-ಕಟ್ಟಡಗಳಿಂದಲೇ ತ್ಯಾಜ್ಯ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗುತ್ತದೆ. 2008-09ನೇ ಸಾಲಿನಲ್ಲಿ ತ್ಯಾಜ್ಯ ವಿಲೇವಾರಿಗೆ ರೂ 209.92 ಕೋಟಿ ವೆಚ್ಚ ಮಾಡಲಾಗಿದೆ. ಹಾಗಾಗಿ ವಾಸದ ಕಟ್ಟಡ ಹಾಗೂ ವಾಣಿಜ್ಯ ಕಟ್ಟಡಗಳಿಂದ ಉಪಕರ ಸಂಗ್ರಹಿಸಲು ಚಿಂತಿಸಲಾಗಿದೆ’ ಎಂದರು.‘ಅಲ್ಲದೇ ಘನ ತ್ಯಾಜ್ಯ ನಿರ್ವಹಣೆ ಸೆಸ್ ಅನ್ನು ರಾಜ್ಯದ ಎಲ್ಲ ನಗರ ಪಾಲಿಕೆ ಹಾಗೂ ನಗರ ಸಭೆಗಳಲ್ಲಿ 2005ರಿಂದಲೇ ವಸೂಲಿ ಮಾಡಲಾಗುತ್ತಿದೆ. ಕರ ಸಂಗ್ರಹಕ್ಕೆ ‘ನರ್ಮ್’ ಯೋಜನೆಯ ನಿರ್ದೇಶನವೂ ಇದೆ’ ಎಂದು ಹೇಳಿದರು.

‘ನಗರದಲ್ಲಿರುವ ಜಾಹೀರಾತು ಫಲಕಗಳಿಗೆ ನೀಡಲಾಗಿದ್ದ ಪರವಾನಗಿ ಅವಧಿ 2010ರ ಜೂನ್ 30ಕ್ಕೆ ಪೂರ್ಣಗೊಂಡಿತ್ತು. ಆ ಬಳಿಕ ಹೊಸ ಜಾಹೀರಾತು ನೀತಿ ಜಾರಿಗೆ ತಂದು ಅದರಂತೆ ಪರವಾನಗಿ ನೀಡುವ ಉದ್ದೇಶವಿತ್ತು. ಆದರೆ ನಿಯಮಾವಳಿ ಹಾಗೂ ಶುಲ್ಕವನ್ನೊಳಗೊಂಡ ಪ್ರಸ್ತಾವ ಇತ್ತೀಚೆಗಷ್ಟೇ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿಗೆ ಸಲ್ಲಿಕೆಯಾಗಿರುವುದರಿಂದ ಜುಲೈ 1ರಿಂದ ಜಾರಿಗೆ ಬರುವಂತೆ ಪರವಾನಗಿ ಅವಧಿಯನ್ನು ನವೀಕರಿಸಲಾಗಿದೆ. ಹಾಗೆಯೇ ಮೇಯರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ನಿಯಮಾವಳಿಗಳಿಗೆ ಅಂತಿಮ ರೂಪ ನೀಡಲಾಗುವುದು’ ಎಂದರು. ಬಳಿಕ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಯಿತು.

ತ್ಯಾಜ್ಯ ವಿಲೇವಾರಿ ಸೆಸ್ ದರ (ಮಾಸಿಕ)
 ವಾಸದ ಕಟ್ಟಡ ದರ 
 1000 ಚ.ಅಡಿಗಿಂತ ಕಡಿಮೆ ವಿಸ್ತೀರ್ಣ 10
 1000-3000 ಚ.ಅಡಿವರೆಗಿನ ವಿಸ್ತೀರ್ಣ 30
 3000 ಚ.ಅಡಿ ಮೇಲ್ಪಟ್ಟು 50
ವಾಣಿಜ್ಯ ಕಟ್ಟಡ 1000 ಚ.ಅಡಿಗಿಂತ ಕಡಿಮೆ ವಿಸ್ತೀರ್ಣ 50
 1000-5000 ಚ.ಅಡಿವರೆಗಿನ ವಿಸ್ತೀರ್ಣ 100
 5000 ಚ.ಅಡಿ ಮೇಲ್ಪಟ್ಟು 200
ಕೈಗಾರಿಕಾ ಕಟ್ಟಡ 1000 ಚ.ಅಡಿಗಿಂತ ಕಡಿಮೆ ವಿಸ್ತೀರ್ಣ 100
 1000-5000 ಚ.ಅಡಿವರೆಗಿನ ವಿಸ್ತೀರ್ಣ 200
 5000 ಚ.ಅಡಿ ಮೇಲ್ಪಟ್ಟು 300
ಹೋಟೆಲ್, ಕಲ್ಯಾಣ ಮಂಟಪ, ನರ್ಸಿಂಗ್ ಹೋಂ 1000 ಚ.ಅಡಿಗಿಂತ ಕಡಿಮೆ ವಿಸ್ತೀರ್ಣ 300
 1000-5000 ಚ.ಅಡಿವರೆಗಿನ ವಿಸ್ತೀರ್ಣ 500
5000 ಚ.ಅಡಿ ಮೇಲ್ಪಟ್ಟು 600


ನಿವೇಶನ ವಿಸ್ತೀರ್ಣ ಸುಧಾರಣಾ ವೆಚ್ಚ
1,200 ಚ.ಅಡಿವರೆಗೆ (111.48 ಚ.ಮೀ) ಪ್ರತಿ ಚ.ಮೀ.ಗೆ ರೂ 150
2,400 ಚ.ಅಡಿವರೆಗೆ (222.96 ಚ.ಮೀ) ಪ್ರತಿ ಚ.ಮೀ. ರೂ 200
6,000 ಚ.ಅಡಿವರೆಗೆ (557.41 ಚ.ಮೀ) ಪ್ರತಿ ಚ.ಮೀ.ಗೆ ರೂ 300
6,000 ಚ.ಅಡಿಗಿಂತ ಮೇಲ್ಪಟ್ಟು ಪ್ರತಿ ಚ.ಮೀ.ಗೆ ರೂ 400

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT