ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಪ್ರತಿಭಟನೆಗೆ ರಾಜಕೀಯ ಬಣ್ಣ: ದೇವೇಗೌಡ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೀದರ್: `ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶ ತಲೆತಗ್ಗಿಸುವಂತಹ ಪ್ರಕರಣ. ಆದರೆ, ಈ ಸಂಬಂಧ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ಬಣ್ಣ ಪಡೆಯುತ್ತಿದೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಹೋರಾಟ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಪ್ರಧಾನಮಂತ್ರಿ ಮತ್ತು ಗೃಹ ಸಚಿವರನ್ನು ಗುರಿ ಮಾಡಿಕೊಂಡಂತಿದೆ. ಕೆಟ್ಟದಾಗಿ ಬಯ್ಯುವ ಬೆಳವಣಿಗೆಯೂ ಇದೆ. ಇದನ್ನು ಯಾರು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರಬಹುದು' ಎಂದು ಪ್ರತಿಕ್ರಿಯೆ ನೀಡಿದರು.

`ಅತ್ಯಾಚಾರ ಪ್ರಕರಣದಲ್ಲಿ ಈಗಿರುವ ಕಾನೂನಿನ ವ್ಯಾಪ್ತಿಯಲ್ಲಿಯೇ ಗಲ್ಲು ಶಿಕ್ಷೆ ವಿಧಿಸಿರುವ ನಿದರ್ಶನ ಇದೆ. ಇದು, ನ್ಯಾಯಮೂರ್ತಿಗಳಿಗೂ ಗೊತ್ತಿದೆ. ಹೀಗಾಗಿ, ಹಾಲಿ ಇರುವ ಕಾಯ್ದೆಯನ್ನು ಬಳಸಿಯೇ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು' ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಸಿಆರ್‌ಪಿಸಿ ಕಾಯ್ದೆಗೆ ತರಬೇಕಾದ ತಿದ್ದುಪಡಿ ಕುರಿತಂತೆ ನ್ಯಾಯಮೂರ್ತಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಅದರ ವರದಿಯೂ ಬರಲಿ ಎಂದು ಕಾಯ್ದೆ ತಿದ್ದುಪಡಿ ಬೇಡಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ನರೇಂದ್ರ ಮೋದಿ ಅವರೂ ಪ್ರಧಾನಿ ಆಗಬಹುದು ಎಂದು ಕೇಳಿ ಬರುತ್ತಿರುವ ಕುರಿತು ಗಮನ ಸೆಳೆದಾಗ, `ಅಯ್ಯೋ ರಾಮಾ' ಎಂದು ಉದ್ಘರಿಸಿದರು.`ಬಿಜೆಪಿ ಅಥವಾ ಕಾಂಗ್ರೆಸ್ ಎಷ್ಟು ರಾಜ್ಯಗಳಲ್ಲಿದೆ ಎಂಬುದನ್ನು  ಗಮನಿಸಬೇಕು. ಪ್ರಸ್ತುತ ಸಂದರ್ಭ ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಯಾರು ಪ್ರಧಾನಿ ಎಂಬುದನ್ನು ಕೊನೆಗೂ ನಿರ್ಧರಿಸಬೇಕಾದವರು ಜನರು' ಎಂದು ಪ್ರತಿಕ್ರಿಯಿಸಿದರು.

ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತ ಪ್ರಶ್ನೆಗೆ,  `ಎಚ್.ಡಿ.ಕುಮಾರಸ್ವಾಮಿ ಅವರು ಪ್ರವಾಸ ಮಾಡಿ ಪರಿಶೀಲಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಸಂಸದೀಯ ಮಂಡಳಿ ಅಧ್ಯಕ್ಷನಾಗಿ ನಂತರ ನಾನು ಗಮನಿಸುತ್ತೇನೆ' ಎಂದರು.`ಇದೇ 29ರ ವರೆಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ, ಜನವರಿ 9ರವರೆಗೂ ಮುಂಬೈ ಕರ್ನಾಟಕ ಭಾಗದಲ್ಲಿ, ಆನಂತರ ಹಳೇ ಮೈಸೂರು ಭಾಗದಲ್ಲಿ ಪ್ರವಾಸ ಮಾಡಲಿದ್ದೇನೆ. ಆ ನಂತರವೇ ಅಭ್ಯರ್ಥಿಗಳ ಯಾದಿ ಕುರಿತು ತೀರ್ಮಾನ ಪ್ರಕಟಿಸುತ್ತೇನೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT