ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮಹಿಳೆಯರಿಗೆ ಇನ್ನೂ ಅಸುರಕ್ಷಿತ

Last Updated 8 ಜನವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ:  ಡಿಸೆಂಬರ್ 16ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿ, ಸ್ತ್ರೀಯರ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸರ್ಕಾರದ ಭರವಸೆಯ ಹೊರತಾಗಿಯೂ ದೇಶದ ರಾಜಧಾನಿಯಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ, ಹಲ್ಲೆ ಮುಂತಾದ ಕೃತ್ಯಗಳು ಮುಂದುವರಿದಿದೆ.

ಡಿ.17ರಿಂದ ಜನವರಿ 2ರವರೆಗೆ ದೆಹಲಿಯಲ್ಲಿ ಲೈಂಗಿಕ ಹಲ್ಲೆ ನಡೆದಿರುವ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ 64 ದೂರವಾಣಿ ಕರೆಗಳು ಬಂದಿವೆ. ಲೈಂಗಿಕ ಕಿರುಕುಳ, ಚುಡಾಯಿಸುವಂತಹ ಘಟನೆಗಳ ಕುರಿತಾಗಿ 501 ಕರೆಗಳು ಬಂದಿವೆ. 2012ರಲ್ಲಿ ದೆಹಲಿಯಲ್ಲಿ 650 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2011ರಲ್ಲಿ 568 ಪ್ರಕರಣಗಳು ದಾಖಲಾಗಿದ್ದವು.

ಮಂಗಳವಾರ ಒಂದೇ ದಿನ ನಗರದ ವಿವಿಧ ಭಾಗಗಳಲ್ಲಿ  ಚುಡಾಯಿಸುವಿಕೆ, ಲೈಂಗಿಕ ಹಲ್ಲೆಗಳಂತಹ 10 ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ. ಇವುಗಳಲ್ಲಿ ಕೆಲವು ಪ್ರಕರಣಗಳು ಕಳೆದ ತಿಂಗಳೇ ನಡೆದಿದ್ದವು.

19 ವರ್ಷದ ಯುವತಿಯೊಬ್ಬಳನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ಐವರು ಆರೋಪಿಗಳಲ್ಲಿ ಮೂವರನ್ನು ಜನವರಿ 2ರಂದು ಅಲಿಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪಟೇಲ್ ನಗರದಲ್ಲಿ ನಾಲ್ಕು ವರ್ಷಗಳಿಂದ ಸಹೋದ್ಯೋಗಿಯೊಬ್ಬರನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ವೈದ್ಯರೊಬ್ಬರನ್ನು ಸೋಮವಾರ ಬಂಧಿಸಲಾಗಿದೆ.

ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಲು ಯತ್ನಿಸಿದ್ದ ಇಬ್ಬರನ್ನು ಮಂದಿರ್ ಮಾರ್ಗ್ ಪ್ರದೇಶದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನವದೆಹಲಿ ರೈಲು ನಿಲ್ದಾಣದಲ್ಲಿ ರಂಗಭೂಮಿ ಕಲಾವಿದೆಯನ್ನು ಚುಡಾಯಿಸಿದ ಇಬ್ಬರು ಸೇನಾ ಸಿಬ್ಬಂದಿಯನ್ನು ಸೋಮವಾರ ಬಂಧಿಸಲಾಗಿದೆ.
`ಮದುವೆಯಾಗುವುದಾಗಿ ಹೇಳಿಕೊಂಡು ಒಂದು ವರ್ಷದಿಂದ ಹುಡುಗಿಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಆಸ್ತಿ ಡೀಲರ್ ಮತ್ತು ಹೋಟೆಲೊಂದರ ಮ್ಯಾನೇಜರ್‌ನನ್ನು ಅಂಬೇಡ್ಕರ್ ನಗರದಲ್ಲಿ ಬಂಧಿಸಲಾಗಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗೋವಿಂದಪುರಿಯಲ್ಲಿ ಲೈಂಗಿಕ ಶೋಷಣೆ ನಡೆಸಿರುವ ಎರಡು ಘಟನೆಗಳು ನಡೆದಿವೆ.  ತನ್ನನ್ನು ಚಿಕ್ಕಪ್ಪ ಲೈಂಗಿಕವಾಗಿ ನಿಂದಿಸಿದ್ದಾರೆ ಎಂದು ಗ್ರೇಟರ್ ಕೈಲಾಶ್‌ನಲ್ಲಿ ಬಾಲಕಿಯೊಬ್ಬಳು ಆರೋಪಿಸಿದ್ದಾಳೆ. ಆಕೆಯ ಚಿಕ್ಕಪ್ಪನನ್ನು ಬಂಧಿಸಲಾಗಿದೆ.

`ದುಷ್ಕರ್ಮಿಗಳಿಗೆ ಕಾನೂನಿನ ಬಗ್ಗೆ ಯಾವುದೇ ಭಯ ಇಲ್ಲ ಎಂಬುದನ್ನು ಈ ಅಂಕಿ ಅಂಶಗಳೇ ಹೇಳುತ್ತವೆ. ಪೊಲೀಸ್ ಇಲಾಖೆ ಸುಧಾರಣೆ ಆಗುವವರೆಗೆ ಮತ್ತು ಇಂತಹ ಪ್ರಕರಣಗಳ ವಿಚಾರಣೆಗಳು ತ್ವರಿತವಾಗಿ ನಡೆಯುವವರೆಗೆ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇರುತ್ತವೆ. ಕಳೆದ ವರ್ಷ ದೆಹಲಿಯಲ್ಲಿ ಸುಮಾರು 24,000 ಲೈಂಗಿಕ ಹಲ್ಲೆ ಪ್ರಕರಣಗಳು ವರದಿಯಾಗಿದ್ದವು. ಇವುಗಳಲ್ಲಿ 7,500 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿವೆ' ಎಂದು ಸೆಂಟರ್ ಫಾರ್ ಸೋಷಿಯಲ್ ರಿಸರ್ಚ್‌ನ ನಿರ್ದೇಶಕಿ ರಂಜನಾ ಕುಮಾರಿ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT