ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಗೆ ದಿಢೀರ್ ಧಾವಿಸಿದ ಯಡಿಯೂರಪ್ಪ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: `ನನ್ನನ್ನು ಮತ್ತೆ ಮುಖ್ಯಮಂತ್ರಿ ಮಾಡದಿದ್ದರೆ ಮುಂದಿನ ದಾರಿ ನೋಡಿಕೊಳ್ಳುತ್ತೇನೆ~ ಎಂದು ವರಿಷ್ಠರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶುಕ್ರವಾರ ರಾತ್ರಿ ರಾಜಧಾನಿಗೆ ಧಾವಿಸಿದ್ದಾರೆ.

ಅತ್ತ ಬೆಂಗಳೂರಿನಲ್ಲಿ ತಮ್ಮ ನಿಷ್ಠಾವಂತ ಮುಖಂಡರು, ಬೆಂಬಲಿಗ ಶಾಸಕರ ಸಹಿ ಸಂಗ್ರಹ ಕಾರ್ಯಾಚರಣೆಗೆ ಕೈಹಾಕಿರುವ ಬೆನ್ನಲ್ಲೇ ಯಡಿಯೂರಪ್ಪ ತಮ್ಮ ಆತ್ಮೀಯರಾದ ಲೇಹರ್ ಸಿಂಗ್ ಜತೆಗೂಡಿ ದೆಹಲಿಗೆ ಆಗಮಿಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಸಂಘ- ಪರಿವಾರದ ನಾಯಕರು ಮತ್ತು ಪಕ್ಷದ ಅಧ್ಯಕ್ಷ ಗಡ್ಕರಿ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ ಎನ್ನಲಾಗಿದೆ.

`ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಬಿಡುವಿಲ್ಲದೆ ತೊಡಗಿಕೊಂಡಿದ್ದಾರೆ. ಕರ್ನಾಟಕ ರಾಜಕಾರಣ ಕುರಿತು ತಲೆಕೆಡಿಸಿಕೊಳ್ಳಲು ಯಾರಿಗೂ ಪುರುಸೊತ್ತಿಲ್ಲ. ಮಾಜಿ ಮುಖ್ಯಮಂತ್ರಿಗಳೇ ಖುದ್ದು ರಾಜಧಾನಿಗೆ ಬಂದಿದ್ದಾರೆ. ದೆಹಲಿಗೆ ಬರುವಂತೆ ಅವರಿಗೆ ಹೇಳಿಲ್ಲ. ತಮ್ಮ ಬೇಡಿಕೆಯನ್ನು ಮುಖಂಡರ ಮುಂದಿಡಲು ಮತ್ತೆ ಬಂದಿದ್ದಾರೆ. ಈ ಸಂಬಂಧ ತೀರ್ಮಾನ ಕೈಗೊಳ್ಳಲು ಇನ್ನೊಂದು ಅಂತಿಮ ಗಡುವು ನೀಡಲಿದ್ದಾರೆ~ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

`ಯಡಿಯೂರಪ್ಪ ಅವರಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ. ಅವರ ವಿರುದ್ಧದ ಎಲ್ಲ ಭ್ರಷ್ಟಾಚಾರ ಪ್ರಕರಣಗಳು ಇತ್ಯರ್ಥವಾಗುವವರೆಗೆ ಇದು ಸಾಧ್ಯವಿಲ್ಲದ ಮಾತು ಎಂಬ ನಿಲುವಿಗೆ ಪಕ್ಷದ ಮುಖಂಡರು ಅಂಟಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗೂ ಈಗಾಗಲೇ ನಿಲುವು ತಿಳಿಸಿದ್ದಾರೆ. ಆದರೂ ಅವರು ಒತ್ತಡ ತಂತ್ರ ಮುಂದುವರಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಕೇಳಿದರೆ ಅಧ್ಯಕ್ಷ ಪಟ್ಟವಾದರೂ ದಕ್ಕಬಹುದು ಎಂಬ ಲೆಕ್ಕಾಚಾರ ಮಾಜಿ ಮುಖ್ಯಮಂತ್ರಿಗಳದ್ದು~ ಎಂದು ಈ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ವರಿಷ್ಠರ ಮಾತು ಕೇಳಿಕೊಂಡು ಸುಮ್ಮನೆ ಕುಳಿತರೆ ದಿನದಿಂದ ದಿನಕ್ಕೆ ತಮ್ಮ ಬಲ ಕುಂದುತ್ತದೆ. ಬೆಂಬಲಿಗರ ಸಂಖ್ಯೆ ಕಡಿಮೆಯಾಗುತ್ತದೆ. ಅನಂತರ ತಮ್ಮನ್ನು ಕೇಳುವವರು ಇರುವುದಿಲ್ಲ. ಹೀಗಾಗಿ ಒತ್ತಡ ತಂತ್ರ ಮುಂದುವರಿಸಬೇಕು ಎಂಬುದು ಯಡಿಯೂರಪ್ಪನವರ ನಿಲುವು. ಹೈಕಮಾಂಡ್ ಈ ಸಲ ರಾಜ್ಯ ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಬಿಜೆಪಿಯೊಳಗಿನ ಬಿಕ್ಕಟ್ಟು ಉಲ್ಬಣಿಸುತ್ತಿದೆ ಎನ್ನಲಾಗಿದೆ.

ಆದರೆ, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿಯಲು ದೆಹಲಿಗೆ ಬಂದಿಲ್ಲ. ಬದಲಾಗಿ ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಕುರಿತು ಕೆಲವು ಹಿರಿಯ ವಕೀಲರ ಜತೆ ಸಮಾಲೋಚನೆ ನಡೆಸಲು ಆಗಮಿಸಿದ್ದಾರೆ. ಶನಿವಾರ ಬೆಳಿಗ್ಗೆ ವೈಷ್ಣೋದೇವಿ ದರ್ಶನಕ್ಕೆ ತೆರಳಲಿದ್ದಾರೆ. ಅನಂತರ ಬೆಂಗಳೂರಿಗೆ ಹಿಂತಿರುಗಿ ಪ್ರವಾಸ ಕಾರ್ಯಕ್ರಮ ಮುಂದುವರಿಸಲಿದ್ದಾರೆಂದು ಮಾಜಿ ಮುಖ್ಯಮಂತ್ರಿ ಆಪ್ತ ಮೂಲಗಳು ವಿವರಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT