ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಯ್ಯ, ಬೋಪಯ್ಯ ವಿರುದ್ಧ ಆರೋಪ

ಕಾನೂನು ಬಾಹಿರ ಭೂ ಮಂಜೂರಾತಿ
Last Updated 13 ಏಪ್ರಿಲ್ 2013, 5:21 IST
ಅಕ್ಷರ ಗಾತ್ರ

ಮಡಿಕೇರಿ: ಕಾನೂನು ಬಾಹಿರವಾಗಿ ಅಕ್ರಮ- ಸಕ್ರಮ ಯೋಜನೆಯಡಿ ಸರ್ಕಾರಿ ಜಮೀನು ಪಡೆದುಕೊಂಡಿರುವ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಬಿ. ದೇವಯ್ಯ ದಂಪತಿ ಹಾಗೂ ಜಮೀನು ಮಂಜೂರು ಮಾಡಿದ ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷರಾಗಿದ್ದ ಶಾಸಕ ಕೆ.ಜಿ.ಬೋಪಯ್ಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಕೊಡಗು ಏಕೀಕರಣ ರಂಗ ಒತ್ತಾಯಿಸಿದೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಭೂ ಮಂಜೂರಾತಿ ಕುರಿತಂತೆ ದಾಖಲೆಪತ್ರಗಳನ್ನು ಬಿಡುಗಡೆಗೊಳಿಸಿದ ಕೊಡಗು ಏಕೀಕರಣ ರಂಗದ ಪದಾಧಿಕಾರಿಗಳಾದ ಎಂ.ಕೆ. ಅಪ್ಪಚ್ಚು, ಎ.ಎ. ಪೂವಯ್ಯ, ಟಿ.ಎಂ. ಪ್ರಮೋದ್ ಹಾಗೂ ಕೆ.ಎಂ. ಜಯಕುಮಾರ್ ಈ ಆರೋಪವನ್ನು ಹೊರಿಸಿದ್ದಾರೆ.

ತಮ್ಮ ಬಹುಕಾಲದ ಸ್ನೇಹಿತರಾದ ಮಡಿಕೇರಿ ತಾಲ್ಲೂಕಿನ ಹೆಬ್ಬೆಟ್ಟಗೇರಿ ಗ್ರಾಮದ ನಿವಾಸಿ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ
ನಿಗಮದ ಅಧ್ಯಕ್ಷ ಎಂ.ಬಿ. ದೇವಯ್ಯ ಮತ್ತು ಅವರ ಪತ್ನಿ ಎಂ.ಡಿ. ತಾಯಮ್ಮ ಅವರಿಗೆ ಕಾನೂನುಬಾಹಿರವಾಗಿ ಸರ್ಕಾರಿ ಜಮೀನನ್ನು ಮಂಜೂರು ಮಾಡಲಾಗಿದೆ ಎಂದು ಅವರು ಆರೋಪಿಸಿದರು. 

ಸ್ವಗ್ರಾಮದಲ್ಲಿ ಪಿತ್ರಾರ್ಜಿತವಾಗಿ ಬಂದಿರುವ 19.73 ಎಕರೆ ಜಮೀನಿನ ಜಂಟಿ ಮಾಲೀಕರಾದ ಎಂ.ಬಿ. ದೇವಯ್ಯ ಹಾಗೂ ಅವರ ಪತ್ನಿ ಎಂ.ಡಿ. ತಾಯಮ್ಮ ಅವರು 1991ರ ಆಗಸ್ಟ್ 19ರಂದು ಅಕ್ರಮ-ಸಕ್ರಮ ಯೋಜನೆಯಡಿ ಜಮೀನು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಈ ಅರ್ಜಿಯಲ್ಲಿ ಎಂ.ಬಿ. ದೇವಯ್ಯ ಅವರು ತಮಗೆ ಕೇವಲ 2.14 ಎಕರೆ ಜಮೀನು ಇರುವುದಾಗಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ.

ಅದರಂತೆ ಎಂ.ಡಿ. ತಾಯಮ್ಮ ಅವರು 1999ರ ಮಾರ್ಚ್ 31ರಂದು ಸಲ್ಲಿಸಿದ ಅರ್ಜಿಯಲ್ಲಿ ತಾವು ಹೊಂದಿರುವ ಜಮೀನಿನ ಮಾಹಿತಿಯನ್ನು ದಾಖಲಿಸದೆ ಸರ್ಕಾರವನ್ನು ತಪ್ಪು ದಾರಿಗೆ ಎಳೆದಿದ್ದಾರೆ.

ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಕಂದಾಯ ಅಧಿಕಾರಿಗಳು ಸಮಿತಿಗೆ ಶಿಫಾರಸು ಮಾಡಿದ್ದರಿಂದ ಹೆಬ್ಬೆಟ್ಟಗೇರಿ ಗ್ರಾಮದ ಸರ್ವೇ ನಂಬರ್ 20/1ರ ಪೈಸಾರಿ ಜಮೀನಿನಲ್ಲಿ 3 ಎಕರೆಯನ್ನು ಎಂ.ಬಿ. ದೇವಯ್ಯ ಅವರಿಗೆ ಹಾಗೂ ಅವರ ಪತ್ನಿ ಎಂ.ಡಿ. ತಾಯಮ್ಮ ಅವರಿಗೆ 3 ಎಕರೆಯನ್ನು 2002ರಲ್ಲಿ ಮಂಜೂರು ಮಾಡಲಾಯಿತು.

2006ರಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾಗಿದ್ದ ಕೆ.ಜಿ.ಬೋಪಯ್ಯ ಅವರು ಮಡಿಕೇರಿ ತಾಲ್ಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷರಾಗಿದ್ದರು. ಆಗ 1991ರ ಆಗಸ್ಟ್ 19ರಂದು ದೇವಯ್ಯ ಸಲ್ಲಿಸಿದ್ದ ಅರ್ಜಿಗೆ ಮತ್ತೆ ಜೀವ ನೀಡಿ, ಪುನಃ ಹೆಬ್ಬೆಟ್ಟಗೇರಿ ಗ್ರಾಮದ 43/17ರಲ್ಲಿ 1.70 ಎಕರೆ ಜಮೀನು ಮಂಜೂರು ಮಾಡಲಾಯಿತು. 2002ರಲ್ಲಿ ಎಂ.ಬಿ. ದೇವಯ್ಯ ಅವರಿಗೆ 3 ಎಕರೆ ಹಾಗೂ ಅವರ ಪತ್ನಿಗೆ 3 ಎಕರೆ ಮಂಜೂರು ಮಾಡಿದ ನಂತರವೂ ಪುನಃ 2006ರ ಅಕ್ಟೋಬರ್ 28ರಂದು 1.70 ಎಕರೆ ಜಮೀನು ಮಂಜೂರು ಮಾಡಲಾಯಿತು.

ಅಕ್ರಮ-ಸಕ್ರಮ ಸಮಿತಿಯ ನಿಯಮಾವಳಿಗಳ ಪ್ರಕಾರ ಯಾವುದೇ ವ್ಯಕ್ತಿಗೆ 5 ಎಕರೆಗಿಂತ ಹೆಚ್ಚು ಜಮೀನು ಇದ್ದರೆ ಸರ್ಕಾರಿ ಜಮೀನು ನೀಡಲು ಸಾಧ್ಯವಿಲ್ಲ. ಆದರೆ, ಇಲ್ಲಿ ದೇವಯ್ಯ ಹಾಗೂ ಅವರ ಪತ್ನಿಗೆ ಇರುವ ಪಿತ್ರಾರ್ಜಿತ ಆಸ್ತಿಯನ್ನು ನಿರ್ಲಕ್ಷಿಸಲಾಗಿದೆ. ಇದಲ್ಲದೇ 2002ರಲ್ಲಿ ಮಂಜೂರು ಮಾಡಲಾದ 3 ಮತ್ತು 3 ಎಕರೆಯನ್ನು ಕಡೆಗಣನೆ ಮಾಡಲಾಗಿದೆ.  ಈ ಎಲ್ಲ ವಿಷಯ ತಿಳಿದಿದ್ದರೂ ಕೂಡ ಸಮಿತಿಯ ಅಧ್ಯಕ್ಷರಾದ ಅಂದಿನ ಮಡಿಕೇರಿ ಶಾಸಕ ಕೆ.ಜಿ. ಬೋಪಯ್ಯ ಅವರು ಪುನಃ 1.70 ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿದ್ದಾರೆಂದು ಅವರು ಆರೋಪಿಸಿದರು.

ಕ್ರಿಮಿನಲ್ ಮೊಕದ್ದಮೆ ಹೂಡಲಿ
ಎಂ.ಬಿ. ದೇವಯ್ಯ ಹಾಗೂ ಅವರ ಪತ್ನಿ ಸುಳ್ಳು ಮಾಹಿತಿ ನೀಡಿ ಪಡೆದಿರುವ ಸರ್ಕಾರಿ ಜಮೀನನ್ನು ವಾಪಸ್ ಪಡೆಯಬೇಕು. ಇವರು ಹೊಂದಿರುವ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಮಾಹಿತಿ ಹೊಂದಿದ್ದರೂ ಜಮೀನು ಮಂಜೂರು ಮಾಡಿದ ಕೆ.ಜಿ.ಬೋಪಯ್ಯ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಎಂ.ಬಿ. ದೇವಯ್ಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಅವರು ಆಗ್ರಹಿಸಿದರು.

ಸುಳ್ಳು ಮಾಹಿತಿ ನೀಡಿ  ಸರ್ಕಾರಿ ಜಮೀನು ಪಡೆಯುವುದು ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಎಂ.ಬಿ.ದೇವಯ್ಯ ಹಾಗೂ ಅವರ ಪತ್ನಿಗೆ ಜೈಲು ಶಿಕ್ಷೆಯಾಗುವುದು ಖಚಿತವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೋಪಯ್ಯ ಮೌನವಾಗಿರುವುದೇಕೆ?
ಇತ್ತೀಚೆಗೆ ವಿರಾಜಪೇಟೆಯಲ್ಲಿ ಅಕ್ರಮ-ಸಕ್ರಮ ಸಮಿತಿ ನಡೆಸಿದ ಅವ್ಯವಹಾರಗಳು ಬಹಿರಂಗೊಂಡವು. ಆದರೆ, ಈ ಅವ್ಯವಹಾರದ ಬಗ್ಗೆ ಆ ಕ್ಷೇತ್ರದ ಶಾಸಕರಾಗಿರುವ ಬೋಪಯ್ಯ ಅವರು ಒಂದಕ್ಷರವೂ ಪ್ರತಿಕ್ರಿಯೆ ನೀಡಿಲ್ಲ. ಈ ಮೌನಕ್ಕೆ ಕಾರಣವೇನು? ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT