ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಾಜ ಅರಸರಿಗೆ ನಮಸ್ಕಾರ

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ಘಟನೆ ಒಂದು: 1973-74. ಚುನಾವಣೆ ಪ್ರಚಾರ ನಡೆಯುತ್ತಿದ್ದ ಸಂದರ್ಭ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಮೈದಾನದಲ್ಲಿ ದೇವರಾಜ ಅರಸು ಅವರ ಚುನಾವಣಾ ಪ್ರಚಾರ ಸಭೆ ನಡೆಯುತ್ತಿತ್ತು. ಅಸಂಖ್ಯಾತ ಜನರು ಜಮಾಯಿಸಿದ್ದರು.
 
ಮೈದಾನದ ಮೂಲೆಯಲ್ಲಿ ನಿಂತಿದ್ದ ಅವರ ಕಾರಿನ ಕಿಟಕಿಯಿಂದ ಒಳಗೆ ಇಣುಕಿ ನೋಡಿದರೆ ಅವರು ಕೂರುವ ಸೀಟಿನ ಬದಿಯಲ್ಲಿ ಕುಮಾರವ್ಯಾಸ ಮಹಾಕವಿಯ `ಕರ್ಣಾಟ ಭಾರತ ಕಥಾಮಂಜರಿ~ ಇತ್ತು. ರಾಜಕಾರಣಕ್ಕೂ `ಶ್ರೀಮತ್ಕುಮಾರವ್ಯಾಸ ಯೋಗೀಂದ್ರ~ ವಿರಚಿಸಿದ ಭಾರತ ಕೃತಿಗೂ ಎಲ್ಲಿಯ ಸಂಬಂಧ ಎನಿಸಿತು.

ಸುತ್ತಮುತ್ತ ಇದ್ದವರನ್ನು ವಿಚಾರಿಸಲಾಗಿ ಅರಸು ಅವರ ಹುಟ್ಟಿದ ಊರು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಕಲ್ಲಹಳ್ಳಿಯಲ್ಲಿ ಅಂಥ ಪರಿಸರವಿತ್ತು. ಅವರಿಗೆ ಭಾರತ ಕಥನ ಕೇಳುವ ಅಭ್ಯಾಸವಿತ್ತು. ಬಿಡುವಾದಾಗಲೆಲ್ಲ ಅರಸು ಅವರಿಗೆ ಹಳೆಯದನ್ನು, ಹೊಸದನ್ನು ಓದುವ ಅಭ್ಯಾಸವಿತ್ತು ಎಂಬ ಸಂಗತಿ ತಿಳಿದು ಬಂದಿತು. -ಈ ಮಾಹಿತಿ ನೀಡಿದವರು ಹಿರಿಯ ಪೊಲೀಸ್ ಅಧಿಕಾರಿ ಎಸ್.ರಾಮಕೃಷ್ಣ.

ಘಟನೆ ಎರಡು: ಕರ್ನಾಟಕ ಭವನಕ್ಕೆ ತೆರಳುವ ದೆಹಲಿಯ ಮುಖ್ಯ ರಸ್ತೆಯಲ್ಲಿ ಕಾರು ಸಾಗುತ್ತಿದೆ. ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ಕಾಲಿಗೆ ಬ್ಯಾಂಡೇಜು ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಹೆಂಡತಿ ಮತ್ತು ಮಗು ಸಹಿತ ಕುಳಿತಿದ್ದು ಕಾರಿಗೆ ನಮಸ್ಕರಿಸುತ್ತಾನೆ.

ಅರಸು ಅವರು ರಾಜ್ಯ ಗುಪ್ತದಳದ ಅಧಿಕಾರಿಯನ್ನು ಖುದ್ದಾಗಿ ಕಳುಹಿಸಿ ಆ ವ್ಯಕ್ತಿಯ ವಿವರಗಳನ್ನು ತಿಳಿದು ವರದಿ ಒಪ್ಪಿಸಲು ಸೂಚಿಸುತ್ತಾರೆ. ಆಡಳಿತಾಧಿಕಾರಿ ಬಂದು ಫುಟ್‌ಪಾತ್‌ನಲ್ಲಿ ಕುಳಿತಿದ್ದವನ ಪೂರ್ವೋತ್ತರಗಳನ್ನು ವಿಚಾರಿಸುತ್ತಾರೆ. ಅವನು ಬೆಂಗಳೂರಿನ ಧೂಪಸಂದ್ರದ ಹತ್ತಿರದ ಕಲ್ಲೊಡ್ಡರ ಜನಾಂಗಕ್ಕೆ ಸೇರಿದವನು.

ದೆಹಲಿಯ  ಅಸುಪಾಸಿನಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯಲ್ಲಿ ದುಡ್ಡು ಸಂಪಾದನೆ ಮಾಡುವ ಆಸೆಯಿಂದ ಹೆಂಡತಿ ಮಕ್ಕಳೊಡನೆ ಬಂದು ಮೋಸಕ್ಕೆ ಸಿಲುಕಿದವನಾಗಿದ್ದ.
 
ಗಣಿಗಾರಿಕೆಯ ಆಸೆ ತೋರಿಸಿದವರು ಅವನ ಬಳಿಯ ಹಣ ಸುಲಿದು ಸಂಸಾರವನ್ನು ಬೀದಿಗೆ ತಳ್ಳಿದ್ದರು. ಅವನಿಗೆ ಸದ್ಯಕ್ಕೆ ಬೇಕಾಗಿದ್ದುದು ಕರ್ನಾಟಕಕ್ಕೆ ಹೋಗಲು ಬೇಕಾದಷ್ಟು ಹಣ ಮಾತ್ರ. ಅರಸು ಅಷ್ಟು ಹಣವನ್ನು ಅವನಿಗೆ ಕೊಟ್ಟು ಊರು ಸೇರಿಕೊಂಡು ಜೀವನ ಮಾಡುವಂತೆ  ಹಾರೈಸಿದರು. (ಲೇಖನ- ಅರಸುಗಳಿಗಿದು ವೀರ: ಲೇಖಕ- ಚಂದ್ರಶೇಖರ ನಂಗಲಿ)

ಘಟನೆ ಮೂರು: ಅರಸ್ನೋರು ಮನುಷ್ಯ ಸಂಬಂಧಗಳನ್ನು ಹೇಗಿಟ್ಕೋತಿದ್ರು ಅನ್ನೋದು ನನಗೆ ಇಷ್ಟವಾಗಿತ್ತು. ಹೆಗ್ಗಡದೇವನ ಕೋಟೆಯಲ್ಲಿ ಅರಸು ಅವರದು ಒಂದು ಸಭೆ. ಅಲ್ಲೊಬ್ಬ ಹುಡುಗ ಅರಸು ಅವರನ್ನು ನೋಡಲು ಪ್ರಯತ್ನಿಸುತ್ತಿದ.

ಅರಸು ಅವರನ್ನು ಹತ್ತಿರಕ್ಕೆ ಕರೆದರು. ಆತ ಒಂದು ನ್ಯಾಯಬೆಲೆ ಅಂಗಡಿಗಾಗಿ ಮನವಿ ಮಾಡಿಕೊಂಡ. ಅರಸು ಸಿಗರೇಟು ಸೇದುತ್ತಿದ್ದರಲ್ಲ, ಸಿಗರೇಟು ಪ್ಯಾಕಿನ ಚೂರು ಹರಿದು ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಬರೆದುಕೊಟ್ಟರು. ಆ ಹುಡುಗ ಇಂದಿಗೂ ಆ ಸಿಗರೇಟು ಪ್ಯಾಕಿನ ಚೂರಿಗೆ ಕನ್ನಡಿ ಹಾಕಿಸಿ ಇಟ್ಟುಕೊಂಡಿದ್ದಾನೆ. (ಸಂದರ್ಶನ: ಅಡಗೂರು ಎಚ್.ವಿಶ್ವನಾಥ್, ಕೃತಿ- ಕರ್ನಾಟಕದ ಅರಸು)

ಮೇಲಿನ ಮೂರು ಘಟನೆಗಳು ಏನು ಹೇಳುತ್ತಿವೆ ಎಂಬುದನ್ನು ಯಾರೂ ಬೇಕಾದರೂ ಊಹಿಸಬಹುದು. ಜಗತ್ತು ಯಾವಾಗಲೂ ಅರಿವು, ಸಂಸ್ಕೃತಿ, ಪ್ರೀತಿ ಮತ್ತು ಲೋಕ ಸುಧಾರಣಾ ಮನಸ್ಸಿನ ರಾಜಕಾರಣಿಯನ್ನು ನೆನಪಿಟ್ಟುಕೊಳ್ಳಬಯಸುತ್ತದೆ.

ರಾಜಕಾರಣಿ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರೀತಿಸುವವನಾದರೆ ಆತನಿಗೆ ನಾಡನ್ನು ಮುನ್ನಡೆಸುವ ಕನಸೂ ಇರುತ್ತದೆ. ಆತನಿಗೆ ಪಕ್ಷ, ಜಾತಿ, ಮನೆತನ, ವಂಶ ಮುಖ್ಯವಾಗುವುದಿಲ್ಲ. ಆತನಿಗೆ ನಾಡನ್ನು ಕುರಿತಾದ ನಿತ್ಯ ನಿರಂತರ ತುಡಿತವಿರುತ್ತದೆ. ಅರಸು ಅವರ ಓದಿನ ಬಗ್ಗೆ ಸಾಹಿತಿ ಚದುರಂಗರು ಹೇಳುವುದೆಂದರೆ... `ಯಾವ ಹೊಸ ಪುಸ್ತಕ ಪ್ರಕಟವಾದರೂ ಅದು ಅವರ ಕಪಾಟಿನಲ್ಲಿರಬೇಕು.

ಅವರು ಸಾಯುವುದಕ್ಕೆ ಕೆಲವು ದಿನಗಳ ಮುನ್ನ ಆಫ್ರಿಕನ್ ಲೇಖಕ ಡೋರಿಸ್ ವೆಸ್ಸಿಂಗ್ ಬರೆದ ಹೊಸ ಕಾದಂಬರಿಯೊಂದನ್ನು ಓದುತ್ತಿದ್ದುದನ್ನು ಕಂಡು ನಾನು ಬೆರಗಾದೆ.
 
ಬಿಎಸ್ಸಿ ಪದವಿವರೆಗೆ ಸಂಸ್ಕೃತ ಪ್ರಾಧ್ಯಾಪಕರೊಬ್ಬರ ಗುರುಮುಖದಿಂದ ಕಾಳಿದಾಸನ ರಘುವಂಶ, ಶಾಕುಂತಲ, ಮೇಘ ಸಂದೇಶಗಳನ್ನು ಅಭ್ಯಾಸ ಮಾಡಿದ್ದರು. ಷೇಕ್ಸ್‌ಪಿಯರ್ ನಾಟಕಗಳ ಜತೆಗೆ ರಾಮಾಯಣ, ಮಹಾಭಾರತವಂತೂ ಅವರಿಗೆ ಬಹಳ ಅಚ್ಚು ಮೆಚ್ಚು. ಕುಮಾರವ್ಯಾಸ ಭಾರತ, ರಾಘವಾಂಕನ ಹರಿಶ್ಚಂದ್ರ ಕಾವ್ಯಗಳನ್ನು ಅವರಿಗವರೇ ರಾಗವಾಗಿ ಓದುತ್ತಿದ್ದರು. ಆದರೆ ಅವರು ಹೆಚ್ಚು ಓದಿದವರಂತೆ ಕಾಣುತ್ತಿರಲಿಲ್ಲ...~ಎಂದು ಹೇಳುತ್ತಾರೆ.

ಅಸಾಧಾರಣಾ ಮುಂಗಾಣಿಕೆ ಇದ್ದ ಅರಸು ಆ ಕಾಲದ ಶಿಕ್ಷಣ ಪ್ರೇಮಿಗಳಂತೆ, ರಾಜಕಾರಣ ಆಸಕ್ತರಂತೆ ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಹಾಗಾಗಿಯೆ ಬೆಂಗಳೂರಿನ ಮಲ್ಲೇಶ್ವರದ ಅವರ ಮನೆಯಲ್ಲಿಯೂ ದನಕರುಗಳ ಸಾಕಣೆ ನಡೆಯುತ್ತಿತ್ದ್ತು.

ಅವರು  ಪಶುಸಂಗೋಪನಾ ಮಂತ್ರಿಯಾಗಿ ಒಮ್ಮೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಗುಂಡೇರಿ ಗ್ರಾಮಕ್ಕೆ ಎತ್ತಿನ ಗಾಡಿಯಲ್ಲೆ ಕೂತು ಅಮೃತಮಹಲ್ ತಳಿಯ ಎತ್ತುಗಳನ್ನು ನೋಡಲು ಹೊರಟುದನ್ನು ಈಗಲೂ ಆ ಸುತ್ತಿನ ಗ್ರಾಮದ ರೈತರ ಮನೆಗಳಲ್ಲಿ ಅತ್ಯಂತ ಪ್ರೀತಿಯಿಂದ ಸ್ಮರಿಸಿಕೊಳ್ಳುವುದನ್ನು ಕಾಣಬಹುದು.

ದೇವರಾಜ ಅರಸು ಅವರಿಗೆ ಕಂಗೆಟ್ಟಿದ್ದ ಜನವೆಲ್ಲ ಒಂದೇ ಆಗಿ ಕಾಣಿಸುತ್ತಿದ್ದರು. ಸಹಾಯ ಕೇಳಿ ಬಂದವರು ಬಡವರಾಗಲಿ, ತುರ್ತು ಪರಿಸ್ಥಿತಿಯ ನಂತರದ ಚುನಾವಣೆಗಳಿಂದ ಪದಚ್ಯುತರಾಗಿದ್ದ ಇಂದಿರಾಗಾಂಧಿ ಅವರಾಗಲಿ ಅರಸರ ಪಾಲಿಗೆ ಒಂದೇ! ಆದರೆ ಅವರನ್ನು ನೋಡುವ, ಆದರಿಸುವ ಅವಕಾಶ ಕಲ್ಪಿಸುವ ಬಗೆ ಮಾತ್ರ ಬೇರೆ ಬೇರೆ. 

ಕಳೆದ ಶತಮಾನದ 60- 70ರ ದಶಕವೆಂದರೆ ಸಮಾಜದ ಎಲ್ಲರೂ ಶಿಕ್ಷಣ ಮತ್ತು ರಾಜಕಾರಣದತ್ತ ಮುಖ ಮಾಡುತ್ತಿದ್ದ ಸಂದರ್ಭ. ಈಗಿನಷ್ಟು ಆಗ ಜಾತಿ ರಾಜಕಾರಣವಿರಲಿಲ್ಲ ಎಂದುಕೊಳ್ಳಬಹುದೇನೋ? ಆ ಕಾರಣದಿಂದಲೇ ಅತ್ಯಂತ ಅಲ್ಪಸಂಖ್ಯಾತ ಗುಂಪಿನಿಂದ ಬಂದ ಅರಸು ಅವರನ್ನು ಸಕಲ ಜನಸಮೂಹವೂ ಬಹುಮಟ್ಟಿಗೆ ಒಪ್ಪಿಕೊಂಡಿತ್ತು.

ಆದರೆ ದೇಶದ ನೇತಾರರೆನಿಸಿಕೊಂಡವರು ಏಳಿಗೆಯ ಮಂತ್ರಗಳನ್ನು ಹೇಳಿಕೊಡುತ್ತಲೇ ಅದನ್ನು ಅನುಷ್ಠಾನಕ್ಕೆ ತರಲು ಶತಪ್ರಯತ್ನ ಮಾಡುತ್ತಲೇ ಇನ್ನೇನು ಅದರಲ್ಲಿ ಅರಸು ಯಶಸ್ಸು ಗಳಿಸಿಬಿಡುತ್ತಾರೆ ಅನ್ನುವಾಗಲೇ, ಅದೇ ರಾಜಕಾರಣ ಮಂತ್ರ, ಮಾಟದ ಕೂಟಕ್ಕೆ ಅರಸು ಬಲಿಯಾದರು. ರಾಜಕಾರಣದ ಸ್ವರೂಪವೇ ಹಾಗೆ!

ಅಲ್ಪ ಸಂಖ್ಯಾತ ಸಮೂಹದಿಂದ ಬಂದ ಅರಸು ಅವರಿಗೆ ಕರ್ನಾಟಕದಲ್ಲಿ ಅದೆಷ್ಟು ತಳ ಸಮುದಾಯಗಳಿವೆ, ಅವುಗಳ ಗತಿ-ಮತಿ ಯಾವ ಮಟ್ಟದ್ದು ಎಂಬುದರ ನಿಚ್ಚಳ ಅರಿವು ಇದ್ದುದರಿಂದಲೇ ಭೂಮಿ, ಅಧಿಕಾರ ಜ್ಞಾನ ಇನ್ನೂ ಯಾರ‌್ಯಾರಿಗೆ ದಕ್ಕಬೇಕು ಎಂಬುದರ ಹಂಚಿಕೆಯ ಕನಸನ್ನು ಕಂಡರು.

ಆ ನಿಟ್ಟಿನಲ್ಲಿ ಅವರು ಕೈಗೊಂಡ ಸಾಹಸ ಎಲ್ಲರ ಮನಸನ್ನು ಮುದಗೊಳಿಸಿತು. ಅಷ್ಟೆ ಅಲ್ಲ, ಕೆರಳಿಸಿತು. ಯಾವುದೇ ಚಳವಳಿ, ಹೋರಾಟದ ಫಲಿತ ಆಕರ್ಷಕವಾಗಿರುವುದಿಲ್ಲ. ಅದು ತಂದೊಡ್ಡುವ ದುರಂತವೇ ದೊಡ್ಡದು. ಲೋಕ ಉಪಕಾರವನ್ನು ಅರಿಯದು. ಅದರೆ ಗಾಳಿಯಲ್ಲಿ ಯಾವಾಗಲೂ ಸತ್ಯ ತೇಲಾಡುತ್ತಲೇ ಇರುತ್ತದೆ. ಜನ ಗಾಳಿಯನ್ನು ಮೂಗಿಗೆ ಏರಿಸಿಕೊಳ್ಳಲೇಬೇಕಲ್ಲ. ಆಗ ಸತ್ಯದ ಅರಿವೂ ಆಗುತ್ತದೆ. ತಡವಾಗಿಯಾದರೂ ಒಬ್ಬ ಸಂತನನ್ನು, ಕನಸುಗಾರ ಕ್ರಾಂತಿಕಾರಿಯನ್ನು ಕಾಲ ನೆನಪಿಸಿಕೊಳ್ಳುತ್ತದೆ.

ಸ್ವಾತಂತ್ರ್ಯಾನಂತರದ ರಾಜಕಾರಣದಲ್ಲಿ ಒಬ್ಬ ಪ್ರಮುಖ  ರಾಜಕಾರಣಿಯಾಗಿ ದೇವರಾಜ ಅರಸು ತಂದ ಸುಧಾರಣೆಗಳಲ್ಲಿ ಫಲಾನುಭವಿಗಳಾದವರು ಅದೆಷ್ಟು ಮಂದಿ. ಕೇವಲ ಫಲಾನುಭವಿಗಳು ಮಾತ್ರವಲ್ಲ. ಸೈದ್ಧಾಂತಿಕವಾಗಿಯಾದರೂ ಅರಸು  ಅವರು ಕೈಗೊಂಡ ಸುಧಾರಣೆಗಳು ಸರಿಯಿತ್ತು ಎಂದು ಈಗಲಾದರೂ ಒಪ್ಪಿಕೊಳ್ಳುವ ಜನ ಸಮೂಹ ಇದ್ದೇ ಇದೆ.
 
ಎಲ್ಲವನ್ನೂ, ಎಲ್ಲರನ್ನೂ ಬಹುಬೇಗ ಮರೆಯುವ ಲೋಕ ಕೆಲವರನ್ನು ಮಾತ್ರ ನೆನೆಯುತ್ತಲೇ ಇರುತ್ತದೆ ಎಂದರೆ ಅಂಥವರು ಲೋಕಕಲ್ಯಾಣದ ಕನಸುಗಾರರೇ ಇರಬೇಕು. ಆ ಕಾರಣಕ್ಕೆ ಜನ ಅರಸು ಅವರನ್ನು ನೆನೆದು ನಮಸ್ಕಾರ ಸಲ್ಲಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT