ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿ ಸ್ತುತಿ ಸಂಗೀತ ಪ್ರೀತಿ

Last Updated 2 ಜನವರಿ 2013, 19:59 IST
ಅಕ್ಷರ ಗಾತ್ರ

`ಜನನಿ ನಿನ್ನು ವಿನಾ..' ಮಿಶ್ರ ಛಾಪು ತಾಳದಲ್ಲಿರುವ `ರೀತಿ ಗೌಳ' ರಾಗದ ಸುಪ್ರಸಿದ್ಧ ಕೀರ್ತನೆ. ಸುಬ್ಬರಾಯ ಶಾಸ್ತ್ರಿಗಳ ಈ ಕೀರ್ತನೆ ದೇವಿಯನ್ನು ವರ್ಣಿಸುವಂಥದ್ದು. ಕರ್ನಾಟಕ ಸಂಗೀತದ ಹಿರಿಯ ಕಲಾವಿದರಾದ ವಿದ್ವಾನ್ ಡಿ.ವಿ. ನಾಗರಾಜನ್ ಅವರ ಕಂಠದಲ್ಲಿ ಈ ಕೃತಿ ಕೇಳಿದರೆ ಸಾಕ್ಷಾತ್ ದೇವಿಯೇ ಒಲಿದು ಬಂದ ಅನುಭವ. ಪೂರ್ವಿಕಲ್ಯಾಣಿ ರಾಗದ `ಪರಮ ಪಾವನ ರಾಮ ಪಾಪ ವಿಮೋಚನ..' ಕೀರ್ತನೆಯೂ ದೇವಿಯ ಕುರಿತಾದದ್ದೇ. ಈ ಕೃತಿಯನ್ನೂ ಅವರು ಭಾವಪೂರ್ಣವಾಗಿ ಅನುಭವಿಸಿ ಹಾಡುತ್ತಾರೆ. ಭಕ್ತಿಯ ಪರಾಕಾಷ್ಠೆಯನ್ನು ಕಾಣಿಸುವಂಥ ಹಾಡುಗಾರಿಕೆ ಅದು. ಅದನ್ನು ಕೇಳುತ್ತಿದ್ದರೆ ಮನಸ್ಸು ಮುದಗೊಳ್ಳುತ್ತದೆ, ಹೃದಯ ತುಂಬಿ ಬರುತ್ತದೆ. 

ಬಸವನಗುಡಿಯ ಗೋವಿಂದಪ್ಪ ರಸ್ತೆಯಲ್ಲಿ ನಾಗರಾಜನ್ ಒಂದು ಸಂಗೀತ ವಿದ್ಯಾಲಯ ಸ್ಥಾಪಿಸಿದ್ದಾರೆ. ತಮಗೆ ಅತ್ಯಂತ ಪ್ರಿಯವಾದ `ದೇವಿ ಸ್ತುತಿ'ಯ ಜತೆಗೆ ಕರ್ನಾಟಕ ಸಂಗೀತದ ಆಮೂಲಾಗ್ರ ಪಾಠವನ್ನು ಇಲ್ಲಿ ಹೇಳಿಕೊಡುತ್ತಾರೆ. ತಿಂಗಳಿಗೊಂದು ಕಾರ್ಯಕ್ರಮ ಮಾಡಿ ವಿದ್ಯಾರ್ಥಿಗಳಿಗೆ ವೇದಿಕೆ ಏರುವ ಅವಕಾಶ  ಕಲ್ಪಿಸುತ್ತಾರೆ. ವರ್ಷಕ್ಕೊಮ್ಮೆ `ವಾಗ್ಗೇಯ ವೈಭವ' ಹೆಸರಿನಲ್ಲಿ ಎಲ್ಲ ವಾಗ್ಗೇಯಕಾರರ ಸ್ಮರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಸಂಯೋಜಿಸುತ್ತಾರೆ. ಇವರ ಸಂಗೀತ ವಿದ್ಯಾಲಯದಲ್ಲಿ ದೇವಿ ಕೀರ್ತನೆಗಳಿಗೇ ಆದ್ಯತೆ. ನಿತ್ಯವೂ ದೇವಿ ಸ್ತುತಿಗಳದ್ದೇ ಅನುರಣನ.

ಬಾಲಾಜಿ ಸಂಗೀತ ವಿದ್ಯಾಲಯ ಟ್ರಸ್ಟ್ ಹೆಸರಿನಲ್ಲಿರುವ ಈ ಸಂಗೀತ ಶಾಲೆಯಲ್ಲಿ ವಿದ್ವಾನ್ ನಾಗರಾಜನ್ ಸುಮಾರು 40 ವರ್ಷಗಳಿಂದ ಸಂಗೀತ ಪಾಠ ಹೇಳಿಕೊಡುತ್ತಿದ್ದಾರೆ. ಎಂದೂ ಪ್ರಚಾರಕ್ಕೆ ತೆರೆದುಕೊಳ್ಳದ ಈ ಹಿರಿಯ ವಿದ್ವಾಂಸರು ಸಂಗೀತದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದವರು. ತಮ್ಮ ಶಿಷ್ಯರಿಗೆ ಗುರುಕುಲ ಪದ್ಧತಿಯಲ್ಲಿ ಶಿಸ್ತುಬದ್ಧವಾಗಿ ಸಂಗೀತ ಕಲಿಸುವ ಇವರು, ದೇವಿಯ ಕುರಿತಾದ ಅನೇಕ ಕೀರ್ತನೆಗಳನ್ನು ಹಾಡ್ದ್ದಿದಾರಲ್ಲದೆ ವಿದ್ಯಾರ್ಥಿಗಳಿಂದಲೂ ಹಾಡಿಸಿದ್ದಾರೆ. ಹೀಗಾಗಿ ಈ ಸಂಗೀತ ಶಾಲೆ `ದೇವಿ ಕೀರ್ತನೆ'ಗಳಿಗೇ ಹೆಸರಾಗಿದ್ದು, ವಿಭಿನ್ನವಾಗಿದೆ.

ನಾಗರಾಜನ್ ಅವರ ಸಂಗೀತ ರಸಪಾಕ. ಸಾಹಿತ್ಯ ಶುದ್ಧತೆ, ಸ್ವರ, ಸಂಗತಿ, ಉಚ್ಚಾರದಲ್ಲಿ ಸ್ಪಷ್ಟತೆ, ತಾಳದಲ್ಲಿ ಹಿಡಿತ, ಉತ್ತಮ ಮನೋಧರ್ಮ ಇವರ ಗಾನ ವೈಶಿಷ್ಟ್ಯ. ಮೊದಲಿಗೆ ವಿದ್ವಾನ್ ವೆಂಕಟರಾಮಯ್ಯ ಅವರ ಬಳಿ ಅವರು ಸಂಗೀತ ಕಲಿತರು. ಹೆಚ್ಚಿನ ಅಭ್ಯಾಸ ಮಾಡಿದ್ದು ವಿದ್ವಾನ್ ಎಂ.ಎಸ್. ರಾಮಯ್ಯ ಅವರ ಬಳಿ. ವಿದ್ವತ್ ನಂತರದ ಅಭ್ಯಾಸ ಮುಂದುವರಿಸಿದ್ದು ವಿಜಯಾ ಕಾಲೇಜ್ ಆಫ್ ಮ್ಯೂಸಿಕ್‌ನ ಎಸ್.ವಿ. ಕೃಷ್ಣಮೂರ್ತಿ ಅವರಲ್ಲಿ. ಅವರೀಗ ಉತ್ತಮ ಗಾಯಕರಷ್ಟೇ ಅಲ್ಲ; ಅತ್ಯುತ್ತಮ ಸಂಗೀತ ಶಿಕ್ಷಕರೂ ಹೌದು.

ಬಾಲಾಜಿ ಸಂಗೀತ ವಿದ್ಯಾಲಯದಲ್ಲಿ ಸಂಗೀತದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಹಂತದ ಸುಮಾರು 65ಕ್ಕೂ ಹೆಚ್ಚು ಶಿಷ್ಯಂದಿರು ಸಂಗೀತ ಕಲಿಯುತ್ತಾರೆ. ಇವರಲ್ಲಿ ಸುಮಾರು 20 ಶಿಷ್ಯಂದಿರು ಈಗಾಗಲೇ ಸಾಕಷ್ಟು ಕಛೇರಿಗಳಲ್ಲೂ ಹಾಡಿದ್ದಾರೆ.

`ನಾನು 16ನೇ ವಯಸ್ಸಿಗೇ ಸಂಗೀತ ಪಾಠ ಹೇಳಿ ಕೊಡಲು ಶುರು ಮಾಡಿದೆ. 40 ವರ್ಷಗಳಿಂದ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಬಂದೆ. 1998ರಲ್ಲಿ ಬಾಲಾಜಿ ಸಂಗೀತ ವಿದ್ಯಾಲಯ ಟ್ರಸ್ಟ್ ಅನ್ನು ಅಧಿಕೃತವಾಗಿ ಆರಂಭಿಸಿದೆ. ಈಗಿನ ಶಿಷ್ಯಂದಿರಲ್ಲಿ ಅರುಣಾ ರಾಜ್‌ಗೋಪಾಲ್, ಗೀತಾ ಜಯರಾಮ್, ರೋಷನ್, ಶ್ಯಾಮ್, ನಿಶಾಂತ್ ಈಗಾಗಲೇ ಅನೇಕ ಸಂಗೀತ ಸಭೆಗಳಲ್ಲಿ ಸ್ವತಂತ್ರವಾಗಿ ಹಾಡುವಷ್ಟು ತಯಾರಾಗಿದ್ದಾರೆ' ಎಂದು ಹೆಮ್ಮೆಯಿಂದ ಹೇಳುತ್ತಾರೆ ನಾಗರಾಜನ್.

ಈ ಸಂಗೀತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಾಠ ಲಭ್ಯ. ಮಕ್ಕಳ ಬುದ್ಧಿಮತ್ತೆ, ಕಲಿಕಾ ಸಾಮರ್ಥ್ಯ, ಗ್ರಹಿಸುವ ಮಟ್ಟವನ್ನು ಆಧರಿಸಿ ಗುರುಗಳು ಸಂಗೀತ ಪಾಠ ಮಾಡುತ್ತಾರೆ. ಗುಂಪಿನಲ್ಲಿ ಸಂಗೀತ ಕಲಿಸುವ ಪರಿಪಾಠ ಇಲ್ಲಿಲ್ಲ. ಪ್ರತಿದಿನ ಬೆಳಿಗ್ಗೆ ಏಳೂವರೆಗೆ ಸಂಗೀತ ಪಾಠ ಶುರುವಾಗುತ್ತದೆ. ರಾತ್ರಿ ಒಂಬತ್ತರವರೆಗೂ ನಡೆಯುತ್ತದೆ. ಪ್ರತಿಯೊಬ್ಬ ಶಿಷ್ಯನಿಗೂ ವಾರದಲ್ಲಿ ಎರಡು ಕ್ಲಾಸ್‌ಗಳು. ಒಂದು ಸಂಗೀತ ಕ್ಲಾಸ್‌ನಲ್ಲಿ ಕಲಿಸಿದ ಪಾಠವನ್ನು ಮುಂದಿನ ಕ್ಲಾಸ್‌ನಲ್ಲಿ ಯಥಾವತ್ತಾಗಿ ಒಪ್ಪಿಸಬೇಕು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ನಿರಂತರ ಅಭ್ಯಾಸ ಮಾಡಬೇಕು. ಕಲಿಸಿದ ಪಾಠ ಗುರುವಿಗೆ ತೃಪ್ತಿ, ಸಮಾಧಾನ ನೀಡಿದರೆ ಮಾತ್ರ ಮುಂದಿನ ಪಾಠ. ಸಾಧನೆ ಸಿದ್ಧಿ ಆಗುವವರೆಗೂ ಸತತ ಅಭ್ಯಾಸ ಕಡ್ಡಾಯ. ಹೀಗಾಗಿ ಇಲ್ಲಿ ಕಲಿಯುವ ಸಂಗೀತ ವಿದ್ಯಾರ್ಥಿಗಳು ಶಾಲೆಯಲ್ಲಿ, ವಿವಿಧ ಸಂಗೀತ ಸ್ಪರ್ಧೆಗಳಲ್ಲಿ ಕೊಂಚವೂ ಅಳುಕಿಲ್ಲದೆ ಭಾಗವಹಿಸುತ್ತಾರೆ, ಬಹುಮಾನವನ್ನೂ ಪಡೆಯುತ್ತಾರೆ.

`ಪ್ರತಿ ತಿಂಗಳೂ ಒಂದೊಂದು ಸಂಗೀತ ಕಾರ್ಯಕ್ರಮ ಆಯೋಜಿಸುವುದು, ಇಲ್ಲಿನ ಮಕ್ಕಳಿಗೇ ಹಾಡಲು ಅವಕಾಶ ಕೊಡುವುದು ಈ ಶಾಲೆಯ ವೈಶಿಷ್ಟ್ಯ. ದೇವಿಯ ಕೃತಿಗಳನ್ನು ಮಾತ್ರ 25-30 ಮಂದಿ ಒಟ್ಟಿಗೆ ಹಾಡುತ್ತೇವೆ. ವರ್ಷಕ್ಕೆ ಕಡಿಮೆ ಎಂದರೂ ಇದೇ ರೀತಿಯ 25 ಗೋಷ್ಠಿ ಗಾಯನ ಏರ್ಪಡಿಸುತ್ತೇವೆ. ಇಲ್ಲೂ ಎಲ್ಲ ಮಕ್ಕಳಿಗೆ ಹಾಡುವ ಅವಕಾಶ ಸಿಗುತ್ತದೆ' ಎನ್ನುತ್ತಾರೆ ಈ ಹಿರಿಯ ವಿದ್ವಾಂಸ.

ವಾಗ್ಗೇಯ ವೈಭವ
ಬಾಲಾಜಿ ಸಂಗೀತ ಶಾಲೆಯ ಮತ್ತೊಂದು ಮಹತ್ವದ ಕಾರ್ಯಕ್ರಮ ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಆಚರಿಸುವ `ವಾಗ್ಗೇಯ ವೈಭವ'. ಅಂದು ಎಲ್ಲ ವಾಗ್ಗೇಯಕಾರರಿಗೆ ನಮನ ಸಲ್ಲಿಸಲಾಗುತ್ತದೆ. ಐದು ದಿನಗಳ ಈ ವೈಭವದಲ್ಲಿ ಕೊನೆಯ ದಿನ ತ್ಯಾಗರಾಜರ ಆರಾಧನೆಯೂ ಇದೆ. ತ್ಯಾಗರಾಜರ ಪಂಚರತ್ನ ಕೃತಿಗಳ ಗಾಯನವೂ ಇರುತ್ತದೆ. ಇಬ್ಬರು ಸಂಗೀತ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಒಬ್ಬ ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನವನ್ನು ಕೂಡ ವಿದ್ಯಾಲಯ ಕೊಡುತ್ತದೆ. ನಾಡಿನ ಹಿರಿಯ ಸಂಗೀತ ವಿದ್ವಾಂಸರು ಉಪಸ್ಥಿತರಿರುತ್ತಾರೆ. ಬುಧವಾರದಿಂದ ಭಾನುವಾರದವರೆಗೂ ಅಂದು ಅಕ್ಷರಶಃ ಸಂಗೀತ ಹಬ್ಬ. ಮಧ್ಯೆ ಬರುವ ಶುಕ್ರವಾರ ಸಹೃದಯರಿಗೆ ಬರೀ ದೇವಿಯ ಕೀರ್ತನೆಗಳನ್ನು ಕೇಳುವ ಅವಕಾಶ.

ನಾಗರಾಜನ್ ಅವರಿಗೆ ಹಲವು ಬಿರುದು, ಸನ್ಮಾನ, ಪ್ರಶಸ್ತಿಗಳೂ ಸಂದಿವೆ. ಬೆಂಗಳೂರಿನ ತ್ಯಾಗರಾಜ ಗಾನ ಸಭಾ ಟ್ರಸ್ಟ್ ನೀಡುವ `ಸಂಗೀತ ಕಲಾ ಭೂಷಣ' (2001), ಪ್ರಪಂಚ ವರ್ಲ್ಡ್ ಆಫ್ ಮ್ಯೂಸಿಕ್ ಪ್ರಶಸ್ತಿ (2011), `ಕಲಾರಾಧನಾ ಶ್ರೀ' ಬಿರುದು (2008), ಅಖಿಲ ಕರ್ನಾಟಕ ಹರಿದಾಸ ತತ್ವಜ್ಞಾನ ಪ್ರತಿಷ್ಠಾನದಿಂದ `ಸಂಗೀತ ಕಲಾನಿಧಿ' ಪ್ರಶಸ್ತಿ (1998), ಮೈಸೂರು ಜಯಚಾಮರಾಜೇಂದ್ರ ಒಡೆಯರ್ ನೀಡುವ `ಸಂಗೀತ ರತ್ನ' ಪ್ರಶಸ್ತಿ ಇವರಿಗೆ ಲಭಿಸಿವೆ.

ದೇವಿಯ ಕುರಿತ ಕೀರ್ತನೆಗಳ ಧ್ವನಿಸುರುಳಿ ಮತ್ತು ಸೀಡಿಯನ್ನು ಸಂಗೀತ ಶಾಲೆ ಹೊರತಂದಿದ್ದು, ಈಗಾಗಲೇ ಸಂಗೀತ ಪ್ರಿಯರ ಮೆಚ್ಚುಗೆ ಗಳಿಸಿದೆ.
ವಿಳಾಸ: ವಿದ್ವಾನ್ ಡಿ.ವಿ. ನಾಗರಾಜನ್, ಬಾಲಾಜಿ ಸಂಗೀತ ವಿದ್ಯಾಲಯ ಟ್ರಸ್ಟ್, ನಂ. 37/57, ಗುರುರಾಜ ವಿಲಾಸ, ಗೋವಿಂದಪ್ಪ ರಸ್ತೆ, ಬಸವನಗುಡಿ 560078. ಫೋನ್: 080-26570116/ 99802 81489.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT