ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದಾನ ವಾಗ್ದಾನಕ್ಕೆ ಮೈಸೂರಿಗರ ಮುನ್ನುಡಿ

Last Updated 6 ಜನವರಿ 2012, 9:50 IST
ಅಕ್ಷರ ಗಾತ್ರ

ಮೈಸೂರು: ಎರಡು ವರ್ಷಗಳಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ದೇಹದಾನ ಚಳವಳಿಗೆ ಉತ್ತಮ ಜನ ಬೆಂಬಲ ವ್ಯಕ್ತವಾಗಿದ್ದು, ಒಟ್ಟು 1636 ಮಂದಿ ಸ್ವಯಂ ಪ್ರೇರಿತವಾಗಿ ಮರಣೋತ್ತರ ದೇಹದಾನದ ಉಯಿಲು ಬರೆದುಕೊಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇಹದಾನದ ಮಹತ್ವದ ಬಗ್ಗೆ ಜನರಲ್ಲಿ ಸಕಾರಾತ್ಮಕ ಧೋರಣೆ ಮೂಡುತ್ತಿದೆ. ಈ ಕುರಿತ ಮೂಢನಂಬಿಕೆ ಕಡಿಮೆಯಾಗಿದ್ದು, ಸ್ವ ಇಚ್ಛೆಯಿಂದ ಹೆಸರು ನೊಂದಾಯಿಸುವವರ ಸಂಖ್ಯೆ ಏರಿಕೆ ಕಾಣುತ್ತಿದೆ. ನಗರದ ಜೆಎಸ್‌ಎಸ್ ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ದೇಹದಾನಕ್ಕಾಗಿ ಹೆಸರು ನೋಂದಣಿ ಮಾಡಿಕೊಳ್ಳಲು ದಿನವೂ ಜನರು ಭೇಟಿ ನೀಡುತ್ತಿದ್ದಾರೆ. ಈ ಎರಡೂ ಕಾಲೇಜುಗಳಲ್ಲಿ ದೇಹ ಕೆಡದಂತೆ ಸಂರಕ್ಷಿಸುವ ಸಾಧನವಿದೆ. ಕಾಲೇಜಿಗೆ ಬರುವ ಮೃತದೇಹಗಳನ್ನು ವೈದ್ಯ ವಿದ್ಯಾರ್ಥಿಗಳೇ ಛೇದಿಸುವ ಮೂಲಕ ಮಾನವನ ದೇಹದ ರಚನೆಯ ಪ್ರಾಥಮಿಕ ತಿಳಿವಳಿಕೆ ಪಡೆಯುತ್ತಾರೆ. ಈ ಕೆಲಸಕ್ಕೆ ಮಾನವನದ ಮೃತ ದೇಹ ಅವಶ್ಯ.
ಮೈಸೂರು ವೈದ್ಯಕೀಯ ಕಾಲೇಜಿನ (ಎಂಎಂಸಿ) ಅಂಗರಚನಾ ಶಾಸ್ತ್ರ ವಿಭಾಗದಲ್ಲಿ 267 ಮಂದಿ ದೇಹದಾನ ಮಾಡಲು ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ 155 ಪುರುಷರು, 112 ಮಹಿಳೆಯರು ಸೇರಿದ್ದಾರೆ. 23 ದಂಪತಿ ದೇಹದಾನದ ವಾಗ್ದಾನ ಮಾಡಿದ್ದು ಇಲ್ಲಿನ ವಿಶೇಷ. ಅಲ್ಲದೇ 267ರಲ್ಲಿ 217 ಮಂದಿ ಮೈಸೂರು ವಾಸಿಗಳು. 2011ರಲ್ಲಿ 14 ಮೃತದೇಹಗಳು ಲಭಿಸಿದ್ದು, ಇವೆಲ್ಲವೂ ವೈದ್ಯ ವಿದ್ಯಾರ್ಥಿಗಳಿಗೆ ಅಂಗ ರಚನಾಶಾಸ್ತ್ರ ಬೋಧನೆಗೆ ಬಳಕೆಯಾಗಿವೆ. ಕಾಲೇಜಿನಲ್ಲಿ ವ್ಯಾಸಂಗ ಮಾಡಿ ವೈದ್ಯರಾದ ಅನೇಕರು ಇಲ್ಲಿಯೇ ದೇಹದಾನಕ್ಕೆ ಆಸಕ್ತಿ ವಹಿಸಿದ್ದಾರೆ.

`ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅಂಗ ರಚನೆ ಶಾಸ್ತ್ರ ಬೋಧಿಸಲು ಕಾಲೇಜಿಗೆ ಪ್ರತಿ ವರ್ಷ ಅಂದಾಜು 9 ಮೃತದೇಹಗಳು ಅವಶ್ಯ. ಮೊದಲು ವಾರಸುದಾರರು ಇಲ್ಲದ ಶವಗಳನ್ನು ಮಾತ್ರ ಅವಲಂಬಿಸಿದ್ದವು. ಆದರೆ, ಈ ದೇಹಗಳನ್ನು ತರುವ ಪ್ರಕ್ರಿಯೆ ಕ್ಲಿಷ್ಟವಾಗಿತ್ತು. ಈಗ ಜನರೇ ಮುಂದೇ ಬಂದು ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಮೃತ ವ್ಯಕ್ತಿಗಳ ಸಂಬಂಧಿಕರು ಫೋನ್ ಕರೆ ಮಾಡಿ ದೇಹ ಪಡೆಯುವಂತೆ ಮನವಿ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ಪ್ರಾಯೋಗಿಕ ಕಲಿಕೆಗೆ ಅನುಕೂಲವಾಗಿವೆ~ ಎನ್ನುತ್ತಾರೆ ಎಂಎಂಸಿಯ ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಆರ್. ದಾಕ್ಷಾಯಣಿ.

`ನಮ್ಮ ಕಾಲೇಜಿನ ಉಪನ್ಯಾಸಕರು ಸಹ ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಸರ್ಕಾರಿ ಕಾಲೇಜಿಗೆ ದೇಹದಾನ ಮಾಡಬೇಕು ಎನ್ನುವ ನಾಗರಿಕರ ಕಳಕಳಿಯೂ ಹೆಚ್ಚಾಗಿದೆ. ಹಿರಿಯ ನಾಗರಿಕರ ಸಂಘಟನೆಗಳು ನಮ್ಮನ್ನು ಸಂಪರ್ಕಿಸಿವೆ~ ಎನ್ನುತ್ತಾರೆ ಅವರು.

ಇನ್ನು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ದೇಹದಾನಿಗಳು ಹೆಸರು ನೋಂದಾಯಿಸಿದ್ದಾರೆ. ಈವರೆಗೂ 1369 ಮಂದಿ ಉಯಿಲು ಬರೆದುಕೊಟ್ಟಿದ್ದಾರೆ. ಈ ಸಂಖ್ಯೆಯಲ್ಲಿ 578 ಮಹಿಳೆಯರು ಹಾಗೂ 791 ಪುರುಷರು ಇದ್ದಾರೆ. ಎರಡು ವರ್ಷಗಳಲ್ಲಿ ಹೆಸರು ಸೇರಿಸಿದವರ ಸಂಖ್ಯೆಯೇ ಅಧಿಕ. 2011ರಲ್ಲಿ 400 ಜನರು ದೇಹದಾನ ಮಾಡಲು ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಇವರಲ್ಲಿ 226 ಪುರುಷರು ಹಾಗೂ 174 ಮಹಿಳೆಯರು ಸೇರಿದ್ದಾರೆ.

ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡ, ಮಾಜಿ ಮೇಯರ್ ವಾಸು, ಜೆಎಸ್‌ಎಸ್ ಮಹಾವಿದ್ಯಾಪೀಠದ ಬಿ.ಎನ್. ಬೆಟ್‌ಕೆರೂರ್, ಮೈಸೂರು ವಿವಿಯ ಹಲವು ಉಪನ್ಯಾಸಕರು, ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ದೇಹದಾನಕ್ಕೆ ಸಮ್ಮತಿ ನೀಡಿದವರಲ್ಲಿ ಪ್ರಮುಖರು. ಇದರಲ್ಲಿ ಸಾಮಾನ್ಯ ನಾಗರಿಕರ ಸಂಖ್ಯೆಯೂ ಹೆಚ್ಚಾಗಿದೆ. ಹೀಗೆ ದೇಹದಾನ ಸಮ್ಮತಿ ನೀಡಿದವರಲ್ಲಿ ಈವರೆಗೂ 125 ಮೃತದೇಹಗಳು ಕಾಲೇಜಿಗೆ ಬಂದಿವೆ.

`ದಿನಗಳ ಕಳೆದಂತೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಕಳೆದ ವರ್ಷ ದೇಹದಾನ ಜಾಗೃತಿಗಾಗಿ ವಿಶೇಷ ಉಪನ್ಯಾಸ ಏರ್ಪಡಿಸಿದ್ದೆವು. ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಂಡಿದ್ದೆವು. ಅಲ್ಲಿ ಈಗಾಗಲೇ ದೇಹದಾನ ವಾಗ್ದಾನ ಮಾಡಿದವರು ಮಾಹಿತಿ ನೀಡುವ ವ್ಯವಸ್ಥೆ ಮಾಡಿದ್ದೇವೆ.       ಈ ಎಲ್ಲ ಕಾರಣಗಳಿಂದ ನಮ್ಮ ಸಂಸ್ಥೆಯಲ್ಲಿ ಹೆಸರು ನೋಂದಾಯಿಸುವ ದೇಹದಾನಿಗಳ ಸಂಖ್ಯೆ ಹೆಚ್ಚುತ್ತಿದೆ~ ಎಂದು ಹೇಳುತ್ತಾರೆ ಜೆಎಸ್‌ಎಸ್ ದೇಹದಾನ ವಿಭಾಗದ ಮುಖ್ಯಸ್ಥ ಡಾ. ಶ್ಯಾಮ್‌ಸುಂದರ್.

`ಸದ್ಯ ಕಾಲೇಜಿನ ವಿದ್ಯಾರ್ಥಿಗಳ ಕಲಿಕೆಗೆ ಅವಶ್ಯವಿರುವಷ್ಟು ಮೃತದೇಹಗಳು ನಮಗೆ ಸಿಗುತ್ತಿವೆ. ಈ ಚಳವಳಿ ಇತರೇ ಜಿಲ್ಲಾ ಕೇಂದ್ರಗಳೂ ತಾಲ್ಲೂಕು ಮಟ್ಟದಲ್ಲೂ ವ್ಯಾಪಿಸಿದರೆ ರಾಜ್ಯದ ಎಲ್ಲ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಅನುಕೂಲ~ ಎಂಬುದು ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT