ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಮಳ್ತೆ ಶಿಲಾಗೋರಿಗಳತ್ತ ನಿರ್ಲಕ್ಷ್ಯ ಏಕೆ?

Last Updated 18 ಫೆಬ್ರುವರಿ 2011, 7:35 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಕ್ರಿ.ಪೂ 1000 ವರ್ಷಗಳ ಹಿಂದಿನ ಶಿಲಾಗೋರಿಗಳು ಅವಸಾನ ಸ್ಥಿತಿ ತಲುಪಿದ್ದು ಸಂಬಂಧಪಟ್ಟ ಇಲಾಖೆಯವರು ಕೂಡಲೆ ಇದರ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಲು ಸುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೊಡಗಿನ ವಿವಿಧ ಕಡೆಗಳಲ್ಲಿ ಪುರಾತನ ಕಾಲದ ಶಿಲಾಗೋರಿಗಳು ಪತ್ತೆಯಾಗಿದ್ದರೂ ದೊಡ್ಡಮಳ್ತೆ ಗ್ರಾಮದಲ್ಲಿರುವಷ್ಟು ಸುಸ್ಥಿತಿಯಲ್ಲಿ ಇಲ್ಲ. ಆದರೆ ಈ ಗೋರಿಗಳನ್ನು ಸರಿಯಾಗಿ ಸಂರಕ್ಷಿಸದೆ ಅವುಗಳೂ ನಾಶವಾಗತೊಡಗಿವೆ.

ಎರಡು ವರ್ಷಗಳ ಹಿಂದೆ ಪ್ರಾಚ್ಯವಸ್ತು ಇಲಾಖೆ ಇದರ ಬಗ್ಗೆ ಗಮನ ಹರಿಸಿ ಈ ಜಾಗವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿ ಯೋಜನೆಯೊಂದನ್ನು ರೂಪಿಸಿತು. ಬಿರುಸಿನಿಂದ ಕಾರ್ಯಾಚರಣೆ ಆರಂಭಿಸಿ ಸುತ್ತಲೂ ಬೇಲಿ ನಿರ್ಮಿಸಲು ಕಬ್ಬಿಣದ ಕಂಬ ನೆಟ್ಟವರು ಮತ್ತೆ ಅವರು ಮತ್ತೆ ಈ ಕಡೆ ತಲೆ ಹಾಕಿಲ್ಲ. ಕಬ್ಬಿಣದ ಕಂಬಗಳು ತುಕ್ಕು ಹಿಡಿಯುತ್ತಿವೆ.ಇದರಿಂದಾಗಿ ಈ ಸ್ಥಳದಲ್ಲಿ ಮತ್ತೆ ಕಾಡು ಬೆಳೆದು ಮರಗಳ್ಳರ ಆವಾಸಸ್ಥಾನವಾಗಿದೆ. ಈ ಜಾಗದಲ್ಲಿರುವ ಗಂಧದ ಮರಗಳು ಕಳ್ಳರ ಪಾಲಾಗಿವೆ. ಗೋರಿಗಳಿರುವ ಜಾಗಕ್ಕೆ ಹೋಗಲು ಕಚ್ಚಾರಸ್ತೆ ಮಾತ್ರವಿದ್ದು ಜೀಪ್ ಮಾತ್ರ ಈ ರಸ್ತೆಯಲ್ಲಿ ಸಂಚರಿಸಬಹುದಾಗಿದೆ. ಅಲ್ಲಿಗೆ ಹೇಗೆ ಹೋಗಬೇಕೆನ್ನುವ ಬಗ್ಗೆಯೂ ಯಾವುದೇ ಮಾಹಿತಿಯಿಲ್ಲ.

ಸೋಮವಾರಪೇಟೆಯಿಂದ ಕೇವಲ 6 ಕಿ.ಮೀ ದೂರದಲ್ಲಿ ಹೊನ್ನಮ್ಮನ ಕೆರೆಯಿದೆ. ಇದರ ಎಡಭಾಗದ ಗುಡ್ಡದಲ್ಲಿರುವ ಶಿಲಾ ಗೋರಿಗಳ ಪ್ರದೇಶವನ್ನು ಪಾಂಡವರ ಪಾರೆ ಅಥವಾ ಪಾಂಡವರ ಮನೆ ಎಂದು ಸ್ಥಳೀಯರು ಗುರುತಿಸುತ್ತಾರೆ. ಈಚೆಗೆ ಹೊನ್ನಮ್ಮನ ಕೆರೆಯ ಸುತ್ತಲಿನ ಜಾಗವನ್ನು ಅಭಿವೃದ್ಧಿಪಡಿಸಲಾಗಿದರೂ ಶಿಲಾಗೋರಿ ಗಳಿರುವ ಸ್ಥಳ ಮಾತ್ರ ಎಲ್ಲರ ಕಣ್ಣಿಂದ ಮರೆಯಾಗಿ ಅನಾಥವಾಗಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕೆಂಬುದು ಕೇವಲ ಅರಣ್ಯರೋದನ ವಾಗಿಯೇ ಉಳಿದಿದೆ. ಇಂತಹ ಐತಿಹಾಸಿಕ ತಾಣವನ್ನು ಗುರುತಿಸಿ ಸಂರಕ್ಷಿಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ.

ಹೊನ್ನಮ್ಮನ ಕೆರೆಯ ಪಕ್ಕದಲ್ಲಿರುವುದರಿಂದ ಇದೂ ಕೂಡಾ ಉತ್ತಮ ಪ್ರವಾಸಿ ತಾಣವಾಗಿ ರೂಪು ಗೊಳ್ಳುವುದರಲ್ಲಿ ಸಂಶಯವಿಲ್ಲ. ಕ್ರಿ.ಪೂ 1000 ದಿಂದ ಕ್ರಿ.ಶ 3 ನೆಯ ಶತಮಾನದ ತನಕವೂ ಶಿಲಾಯುಗದ ಮಾನವರು ಇಲ್ಲಿ ನೆಲೆ ನಿಂತಿರುವುದಾಗಿ ಇತಿಹಾಸಕಾರರು ಹೇಳುತ್ತಾರೆ. ಪಕ್ಕದಲ್ಲಿಯೇ ಹೊನ್ನಮ್ಮನ ಕೆರೆ ಇದ್ದಿದ್ದರಿಂದ ಕೃಷಿಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದರು. ಶವಗಳನ್ನು ಮಣ್ಣಿನಲ್ಲಿ ಹೂಳುತ್ತಿದ್ದರು.
 
ಕೆಲ ಕಾಲಾನಂತರ ಶವದ ಎಲುಬುಗಳನ್ನು ಮಣ್ಣಿನಿಂದ ಹೊರತೆಗೆದು ಮನೆಯಾಕಾರದ ಕಲ್ಲಿನ ಗೋರಿಗಳನ್ನು ರಚಿಸಿ ಅದರಲ್ಲಿ ಸಂರಕ್ಷಿಸಿ ಇಡುತ್ತಿದ್ದರು. ಮೃತರು ಉಪಯೋಗಿಸುತ್ತಿದ್ದ ಮಣ್ಣಿನ ಪಾತ್ರೆ ಹಾಗೂ ಆಭರಣ ಇತ್ಯಾದಿಗಳನ್ನು ಗೋರಿಗಳಲ್ಲಿ ಹಾಕಿಡುತ್ತಿದ್ದರು. ಗೋರಿಗಳಲ್ಲಿ ಬೆಲೆ ಬಾಳುವ ವಸ್ತುಗಳು ಇರಬಹುದೆಂದು ನಿಧಿಶೋಧಕರು ಈಗಾಗಲೆ ಕೆಲವು ಗೋರಿಗಳನ್ನು ಅಗೆದು ವಿರೂಪಗೊಳಿಸಿದ್ದಾರೆ. 20 ರಿಂದ 30 ರಷ್ಟಿದ್ದ ಗೋರಿಗಳಲ್ಲಿ ಈಗಾಗಲೆ ಹಲವು ಕಾಲನ ಕಾಲ್ತುಳಿತಕ್ಕೆ ಸಿಕ್ಕಿ ಹಾಳಾಗಿವೆ. ಅಳಿದುಳಿದ ಸ್ಮಾರಕಗಳನ್ನು ಮುಂದಿನ ಜನಾಂಗಕ್ಕೆ ಸಂರಕ್ಷಿಸಿ ಇಡಲು ತುರ್ತಾದ ಯೋಜನೆಯೊಂದನ್ನು ರೂಪಿಸಿ ಕಾರ್ಯಗತಗೊಳಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT